
ಹೈದರಾಬಾದ್: ಬೆಂಗಳೂರು ಟಾರ್ಪಿಡೋಸ್ ತಂಡವು, ಭಾನುವಾರ ಇಲ್ಲಿನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರೈಮ್ ವಾಲಿಬಾಲ್ ಲೀಗ್‌ನ ನಾಲ್ಕನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಮುಂಬೈ ಮೀಟಿಯರ್ಸ್ ತಂಡವನ್ನು ಎದುರಿಸಲಿದೆ.
ಲೀಗ್ ಹಂತದಲ್ಲಿ ಮುಂಬೈ ಏಳು ಪಂದ್ಯಗಳಲ್ಲಿ ಆರು ಗೆದ್ದು ಮೊದಲ ಸ್ಥಾನ ಗಳಿಸಿದರೆ, ಬೆಂಗಳೂರು ತಂಡ ಏಳರಲ್ಲಿ ಐದು ಗೆದ್ದು ಎರಡನೇ ಸ್ಥಾನ ಪಡೆದಿತ್ತು.
ಜೋಯೆಲ್ ಬೆಂಜಮಿನ್ ಅವರು 103 ಪಾಯಿಂಟ್ಸ್ ಗಳಿಸಿ ಟಾರ್ಪಿಡೋಸ್ ಪರ ಅತ್ಯಧಿಕ ಅಂಕ ಕಲೆಹಾಕಿದ ಆಟಗಾರ ಎನಿಸಿದ್ದಾರೆ. ಮುಂಬೈನ ಶುಭಂ ಚೌಧರಿ ಅವರಿಗಿಂತ ಒಂದು ಪಾಯಿಂಟ್ (102) ಅಷ್ಟೇ ಹಿಂದೆಯಿದ್ದಾರೆ. ಆದರೆ ಟಾರ್ಪಿಡೋಸ್‌ನ ದಾಳಿಗಾರರಾದ ಜೋಯೆಲ್ ಮತ್ತು ಜೆಲೆನ್ ಪೆನ್ರೋಸ್ ಜೋಡಿಗೆ ಮುಂಬೈನ ಬ್ಲಾಕರ್‌ಗಳಾದ ಪೀಟರ್ ಅಲಸ್ಟಾಡ್ ಒಸ್ಟ್‌ವಿಕ್ ಮತ್ತು ಶುಭಂ ಚೌಧರಿ ಅವರ ತಡೆಗೋಡೆ ಭೇದಿಸುವ ಸವಾಲು ಇದೆ. ಇವರಿಬ್ಬರು ಲೀಗ್‌ನ ಐವರು ಅಗ್ರ ಬ್ಲಾಕರ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ.
ಮೀಟಿಯರ್ಸ್ ತಂಡಕ್ಕೆ ದೊಡ್ಡ ಸವಾಲು ಎಂದರೆ ಸೇತು ಅವರ ಸರ್ವ್‌ಗಳನ್ನು ನಿಭಾಯಿಸುವುದು. ಅವರು ಗೋವಾದ ರೋಹಿತ್ ಯಾದವ್ ಜೊತೆ 11 ಪಾಯಿಂಟ್ ಗಳಿಸಿ ಶ್ರೇಷ್ಠ ಸರ್ವರ್ ಎನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.