ADVERTISEMENT

ಶೂಟಿಂಗ್‌ ಚಾಂಪಿಯನ್‌ಷಿಪ್‌: ರಜಪೂತ್‌, ರಿಜ್ವಿಗೆ ಅಗ್ರಸ್ಥಾನ

ಎರಡನೇ ಆವೃತ್ತಿಯ ಅಂತರರಾಷ್ಟ್ರೀಯ ಆನ್‌ಲೈನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌

ಪಿಟಿಐ
Published 26 ಏಪ್ರಿಲ್ 2020, 19:30 IST
Last Updated 26 ಏಪ್ರಿಲ್ 2020, 19:30 IST
ಸಂಜೀವ್‌ ರಜಪೂತ್‌ (ಸಂಗ್ರಹ ಚಿತ್ರ)
ಸಂಜೀವ್‌ ರಜಪೂತ್‌ (ಸಂಗ್ರಹ ಚಿತ್ರ)   

ನವದೆಹಲಿ: ಭಾರತದ ಸಂಜೀವ್‌ ರಜಪೂತ್‌ ಹಾಗೂ ಶಹಜಾರ್‌ ರಿಜ್ವಿ ಅವರು ಎರಡನೇ ಆವೃತ್ತಿಯ ಅಂತರರಾಷ್ಟ್ರೀಯ ಆನ್‌ಲೈನ್‌ ಶೂಟಿಂಗ್‌ ಕೂಟದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಶನಿವಾರ ನಡೆದ ಚಾಂಪಿಯನ್‌ಷಿಪ್‌ನಲ್ಲಿ ರಜಪೂತ್‌ ಹಾಗೂ ರಿಜ್ವಿ ಕ್ರಮವಾಗಿ 10 ಮೀ. ಏರ್‌ ರೈಫಲ್‌ ಹಾಗೂ ಏರ್‌ ಪಿಸ್ತೂಲ್‌ ವಿಭಾಗಗಳಲ್ಲಿ ಅಗ್ರಸ್ಥಾನ ಗಳಿಸಿದರು.

24 ಪ್ರಯತ್ನಗಳ ಫೈನಲ್‌ನಲ್ಲಿ ರಜಪೂತ್‌ ಅವರು 252.6 ಪಾಯಿಂಟ್ಸ್‌ ಕಲೆಹಾಕಿದರು. ಆಸ್ಟ್ರಿಯಾದ ಮಾರ್ಟಿನ್‌ ಸ್ಟ್ರೆಂಪಲ್‌ (251.7) ಎರಡನೇ ಸ್ಥಾನ ಗಿಟ್ಟಿಸಿದರೆ, 10 ಮೀ. ಏರ್‌ ರೈಫಲ್‌ ವಿಭಾಗದ ಮೂರನೇ ಸ್ಥಾನವು ಫ್ರಾನ್ಸ್‌ನ ಎಟಿಯನ್‌ ಗೆರ್ಮೊಂಡ್‌ ಪಾಲಾಯಿತು. ಅವರು ಗಳಿಸಿದ್ದು 230.1 ಪಾಯಿಂಟ್ಸ್‌.

10 ಮೀ. ಏರ್‌ ಪಿಸ್ತೂಲ್‌ ವಿಭಾಗದ ಸ್ಪರ್ಧೆ ತೀವ್ರ ಪೈಪೋಟಿಯಿಂದ ಕೂಡಿತ್ತು. ರಿಜ್ವಿ (241.7 ಪಾಯಿಂಟ್ಸ್) ಮೊದಲ ಸ್ಥಾನ ಪಡೆದರೆ, ದ್ವಿತೀಯ ಸ್ಥಾನ ಪಡೆದ ಭಾರತದವರೇ ಆದ ಅಮನ್‌ಪ್ರೀತ್‌ ಸಿಂಗ್‌ ಗಳಿಸಿದ್ದು 241.5 ಪಾಯಿಂಟ್ಸ್. ಸ್ಕಾಟ್ಲೆಂಡ್‌ನ ಲೂಸಿ ಇವಾನ್ಸ್‌ (214.9) ಅವರಿಗೆ ಮೂರನೇ ಸ್ಥಾನ ಲಭಿಸಿತು.

ADVERTISEMENT

ಭಾರತದ ಹಿರಿಯ ಶೂಟರ್ ಶಿಮೊನ್‌ ಶರೀಫ್‌ ಅವರು ಆಯೋಜಿಸುತ್ತಿರುವ ಈ ಚಾಂಪಿಯನ್‌ಷಿಪ್‌ನ ಮೊದಲ ಆವೃತ್ತಿಗೆ ಭಾರೀ ಸ್ಪಂದನೆ ವ್ಯಕ್ತವಾಗಿತ್ತು. ಅದರ ಯಶಸ್ಸಿನಿಂದ ಉತ್ತೇಜಿತರಾಗಿ ಎರಡನೇ ಬಾರಿ ಚಾಂಪಿಯನ್‌ಷಿಪ್‌ ಆಯೋಜಿಸಿದ್ದರು. ಕೊರೊನಾ ವೈರಸ್‌ ಸೋಂಕು ಹರಡುವುದನ್ನು ನಿಯಂತ್ರಿಸಲು ಜಾರಿಗೊಳಿಸಲಾಗಿರುವ ವಿಧಿಸಿರುವ ಲಾಕ್‌ಡೌನ್‌ನಿಂದ ಅಥ್ಲೀಟುಗಳು ಮನೆಯಲ್ಲೇ ಉಳಿಯುವಂತಾಗಿದೆ. ‘ಗೃಹಬಂಧನ’ದಲ್ಲಿದ್ದರೂ ಸ್ಪರ್ಧೆಯ ಅನುಭವ ದೊರೆಯುವಂತೆ ಮಾಡುವುದು ಚಾಂಪಿಯನ್‌ಷಿಪ್‌ನ ಆಶಯ.

ಮೊಬೈಲ್‌ನಲ್ಲಿ ಝೂಮ್‌ ಆ್ಯಪ್‌ ಮೂಲಕ ಎಲೆಕ್ಟ್ರಾನಿಕ್‌ ಟಾರ್ಗೆಟ್‌ ಅಳವಡಿಸಿಕೊಂಡು ಸ್ಪರ್ಧೆ ನಡೆಸಲಾಗುತ್ತದೆ. ಶೂಟರ್‌ಗಳಾದ ಹಂಗರಿಯ ಪೀಟರ್‌ ಸಿದಿ ಹಾಗೂಭಾರತದ ಜಾಯ್‌ದೀಪ್‌ ಕರ್ಮಾಕರ್‌ ವೀಕ್ಷಕ ವಿವರಣೆ ನೀಡಿದರು. ಇಂಟರ್‌ನೆಟ್‌ನಲ್ಲಿ ಚಾಂಪಿಯನ್‌ಷಿಪ್‌ನ ನೇರಪ್ರಸಾರವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.