ADVERTISEMENT

ಮದ್ದು ಸೇವನೆ ಪರೀಕ್ಷೆ ಪ್ರಮಾಣ ಕುಸಿತ: ಕಳವಳ

ಅಥ್ಲೀಟ್ಸ್‌ ಅಸೋಸಿಯೇಷ್‌ನಿಂದ ಸಮೀಕ್ಷೆ– ಟ್ವಿಟರ್‌ನಲ್ಲಿ ವಿವರ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2020, 15:13 IST
Last Updated 11 ಏಪ್ರಿಲ್ 2020, 15:13 IST
   

ಲಂಡನ್‌ (ರಾಯಿಟರ್ಸ್‌): ಕೊರೊನಾ ಸೋಂಕು ಪಿಡುಗು ವ್ಯಾಪಕವಾಗಿರುವ ಅವಧಿಯಲ್ಲಿಉದ್ದೀಪನ ಮದ್ದು ಸೇವನೆ ಪರೀಕ್ಷೆ ಪ್ರಮಾಣ ಬಹಳಷ್ಟು ಕಡಿಮೆಯಾಗಿರುವುದು ವಿಶ್ವದ ಪ್ರಮುಖ ಅಥ್ಲೀಟುಗಳ ಕಳವಳಕ್ಕೆ ಕಾರಣವಾಗಿದೆ.

ಶುಕ್ರವಾರ ಬಿಡುಗಡೆಯಾದ ಸಮೀಕ್ಷೆಯೊಂದರಲ್ಲಿ ಇದು ವ್ಯಕ್ತವಾಗಿದೆ. ವೃತ್ತಿಪರ ಅಥ್ಲೀಟುಗಳ ಧ್ವನಿ ಎನಿಸಿರುವ ಅಥ್ಲೀಟ್ಸ್‌ ಅಸೋಸಿಯೇಷನ್‌ ತನ್ನ ಟ್ವಿಟರ್‌ ಖಾತೆಯಲ್ಲಿ ಸಮೀಕ್ಷೆಯ ವರದಿ ಪ್ರಕಟಿಸಿದೆ. ಸಮೀಕ್ಷೆಗೆ ಒಳಪಟ್ಟ ವಿಶ್ವದ 685 ಅಥ್ಲೀಟುಗಳಲ್ಲಿ ಶೇ 78 ರಷ್ಟು ಮಂದಿ ಅಥ್ಲೀಟುಗಳ ಮದ್ದು ಸೇವನೆ ಪರೀಕ್ಷೆಯ ಪ್ರಮಾಣ ಕಡಿಮೆ ಆಗುತ್ತಿರುವುದರಿಂದ ಅದರ ಸಿಂಧುತ್ವದ ಬಗ್ಗೆ ಆತಂಕ ಹೊಂದಿದ್ದಾರೆ.

‘ಅಥ್ಲೀಟುಗಳ ಮತ್ತು ಜನಸಾಮಾನ್ಯರ ವಿಶ್ವಾಸ ಗಳಿಸುವ ದೃಷ್ಟಿಯಿಂದ, ಈ ಅವಧಿಯಲ್ಲಿ ಕೈಗೊಂಡ ಮದ್ದು ಪರೀಕ್ಷೆಯ ಫಲಿತಾಂಶಗಳ ಬಗ್ಗೆ ಮತ್ತಷ್ಟು ಸ್ಪಷ್ಟತೆ ಅಗತ್ಯವಿದೆ‘ ಎಂದು ಅದು ಹೇಳಿದೆ.

ADVERTISEMENT

ಶೇ 82 ರಷ್ಟು ಅಥ್ಲೀಟುಗಳು ತರಬೇತಿ ಮುಂದುವರಿಸಿದ್ದಾರೆ. ಶೇ 86 ರಷ್ಟು ಅಥ್ಲೀಟುಗಳು, ಸುರಕ್ಷತೆಯ ವಾತಾವರಣ ಇದ್ದರೆ ಈ ವರ್ಷದ ಕೊನೆಯಲ್ಲಿ ನಡೆಯುವ ಸ್ಪರ್ಧೆಗಳಿಗೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಮಾನದಂಡಗಳ ಬಗ್ಗೆ ಅಥ್ಲೀಟುಗಳಲ್ಲಿ ಒಮ್ಮತ ಮೂಡಿಲ್ಲದಿರುವುದೂ ಈ ವರದಿಯಲ್ಲಿ ವ್ಯಕ್ತವಾಗಿದೆ. ಅಥ್ಲೀಟುಗಳು ಡಿಸೆಂಬರ್‌ನೊಳಗೆ ಒಲಿಂಪಿಕ್ಸ್‌ ಅರ್ಹತಾ ಮಟ್ಟ ಸಾಧಿಸಿದಲ್ಲಿ ಅದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ಶೇ 60ರಷ್ಟು ಮಂದಿ ಅಭಿಪ್ರಾಯಪಡುತ್ತಾರೆ. ಆದರೆ ಲಾಕ್‌ಡೌನ್‌ ನೀತಿ ದೇಶದಿಂದ ದೇಶಕ್ಕೆ ಭಿನ್ನವಾಗಿರುವ ಕಾರಣ ಈ ಮಾನದಂಡದಿಂದ ಕೆಲವರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಶೇ 56ರಷ್ಟು ಮಂದಿ ಭಾವಿಸಿದ್ದಾರೆ.

ಒಲಿಂಪಿಕ್ಸ್‌ಗೆ ಅರ್ಹತೆ ದೃಷ್ಟಿಯಿಂದ ರೂಪಿಸಲಾಗಿರುವ ವಿಶ್ವ ರ‍್ಯಾಂಕಿಂಗ್‌ ವ್ಯವಸ್ಥೆಯನ್ನು ಮರುಪರಿಗಣನೆ ಮಾಡಬೇಕೆಂದು ಶೇ 81 ರೆಷ್ಟು ಅಥ್ಲೀಟುಗಳು ಹೇಳಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.