ADVERTISEMENT

ಅಥ್ಲೀಟುಗಳ ತರಬೇತಿಗೆ ಅವಕಾಶ ನೀಡಿ: ವಿಮಲ್‌

ಭಾರತದ ಮಾಜಿ ಮುಖ್ಯ ಬ್ಯಾಡ್ಮಿಂಟನ್‌ ಕೋಚ್‌ ಯು.ವಿಮಲ್‌ ಕುಮಾರ್‌ ಒತ್ತಾಯ

ಪಿಟಿಐ
Published 17 ಮಾರ್ಚ್ 2020, 19:27 IST
Last Updated 17 ಮಾರ್ಚ್ 2020, 19:27 IST
ಪಿ.ವಿ.ಸಿಂಧು (ಎಡ) ಹಾಗೂ ಯು.ವಿಮಲ್‌ ಕುಮಾರ್‌
ಪಿ.ವಿ.ಸಿಂಧು (ಎಡ) ಹಾಗೂ ಯು.ವಿಮಲ್‌ ಕುಮಾರ್‌   

ನವದೆಹಲಿ: ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಕ್ರೀಡಾಪಟುಗಳಿಗಾದರೂ, ಅಗತ್ಯವಿರುವ ಪರೀಕ್ಷೆಗಳನ್ನು ಮಾಡಿ ತರಬೇತಿ ಮುಂದುವರಿಸಲು ಅವಕಾಶ ನೀಡಬೇಕು ಎಂದು ಭಾರತದ ಮಾಜಿ ಮುಖ್ಯ ಬ್ಯಾಡ್ಮಿಂಟನ್‌ ಕೋಚ್‌ ವಿಮಲ್‌ ಕುಮಾರ್‌ ಒತ್ತಾಯಿಸಿ‌ದ್ದಾರೆ.

ಕೊರೊನಾ ವೈರಸ್‌ ಹರಡುವ ಭೀತಿಯಿಂದಾಗಿ ಬಹುತೇಕ ಎಲ್ಲ ಕ್ರೀಡಾ ಚಟುವಟಿಕೆಗಳು ಸ್ತಬ್ಧವಾಗಿರುವ ಕಾರಣ ವಿಮಲ್‌ ಮಂಗಳವಾರ ಈ ಮನವಿ ಮಾಡಿದ್ದಾರೆ.

ತೆಲಂಗಾಣ ಮತ್ತು ಕರ್ನಾಟಕ ಸರ್ಕಾರಗಳ ನಿರ್ದೇಶನಗಳ ಹಿನ್ನೆಲೆಯಲ್ಲಿ ಕ್ರಮವಾಗಿ ಹೈದರಾಬಾದ್‌ನ ಗೋಪಿಚಂದ್‌ ಅಕಾಡೆಮಿ ಮತ್ತು ಬೆಂಗಳೂರಿನ ಪ್ರಕಾಶ್‌ ಪಡುಕೋಣೆ ಅಕಾಡೆಮಿಯನ್ನು ಎರಡು ವಾರಗಳ ಕಾಲ ಮುಚ್ಚಲಾಗಿದೆ.‌‌

ADVERTISEMENT

ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಪಿ.ವಿ.ಸಿಂಧು, ಪುರುಷರ ಸಿಂಗಲ್ಸ್‌ ಆಟಗಾರ ಬಿ.ಸಾಯಿ ಪ್ರಣೀತ್ ಮತ್ತು ಪುರುಷರ ಡಬಲ್ಸ್‌ ಆಟಗಾರ ಚಿರಾಗ್‌ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದು ಖಚಿತವಾಗಿದೆ.

‘ಕ್ರೀಡಾ ಸಮುದಾಯ ಅನುಭವಿಸುತ್ತಿರುವ ಪರಿಸ್ಥಿತಿಯಿಂದ ಬೇಸರ ಮೂಡಿದೆ. ಅವರು ಆರೋಗ್ಯಕರ ಜೀವನಶೈಲಿ ಅನುಸರಿಸುತ್ತಾರೆ. ಕಾಯಿಲೆ ತಡೆದುಕೊಳ್ಳುವ ಶಕ್ತಿ ಕೂಡ ಹೆಚ್ಚಿರುತ್ತದೆ. ಈಗಾಗಲೇ ಉತ್ತೀರ್ಣರಾಗಿರುವ ಅಥ್ಲೀಟುಗಳಿಗೆ ಪರೀಕ್ಷೆ ನಡೆಸಿ ತರಬೇತಿಗೆ ಅವಕಾಶ ಮಾಡಿಕೊಡಬೇಕು’ ಎಂದು ಅವರು ವಾರ್ತಾಸಂಸ್ಥೆಗೆ ತಿಳಿಸಿದ್ದಾರೆ.

‘ಇದು ಬೇರೆ ಯಾವುದಾದರೂ ವರ್ಷ ಆದರೆ ಹೀಗೆ ಹೇಳುತ್ತಿರಲಿಲ್ಲ. ಆದರೆ ಈ ವರ್ಷ ಒಲಿಂಪಿಕ್‌ ನಿಗದಿಯಾಗಿದೆ. ಅವರಿಗೆ ಪರೀಕ್ಷೆ ನಡೆಸಿ. ಒಂದೊಮ್ಮೆ ಸೋಂಕು ಪತ್ತೆಯಾದರೆ ಗುಣಮುಖರಾಗಲು ಎರಡು ವಾರಗಳಲ್ಲಿ ಚೇತರಿಸಿಕೊಳ್ಳಲು ಅವಕಾಶವಿರುತ್ತದೆ’ ಎಂದಿದ್ದಾರೆ.

ಭಾರತದಲ್ಲಿ ಶೂಟಿಂಗ್‌ ವಿಶ್ವಕಪ್‌ ಮತ್ತು ಇಂಡಿಯನ್‌ ಓಪನ್‌ ಗಾಲ್ಫ್‌ ಟೂರ್ನಿಗಳನ್ನು ಮುಂದೂಡಲಾಗಿದೆ. ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ ಎಲ್ಲ ವಿಶ್ವ ಟೂರ್‌ ಮತ್ತು ಮಂಜೂರಾದ ಟೂರ್ನಿಗಳನ್ನು ಅಮಾನತುಗೊಳಿಸುವಂತೆ ಸೂಚನೆ ನೀಡಿದ ನಂತರ, ಇಂಡಿಯನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯನ್ನೂ ಮುಂದಕ್ಕೆ ಹಾಕಲಾಗಿದೆ.

ಚೀನಾ, ಜಪಾನ್‌ ಮತ್ತು ಕೊರಿಯಾದ ಆಟಗಾರರು ಬೇರೆ ದೇಶಗಳಿಗೆ ಹೋಗಿ ತರಬೇತಿ ಪಡೆಯುತ್ತಿದ್ದಾರೆ. ನಮ್ಮ ದೇಶದಲ್ಲಿ ಸುಮಾರು 100 ಮಂದಿ ಮಾತ್ರ ಅರ್ಹತೆ ಗಳಿಸಿದ್ದಾರೆ. ಅವರ ಕಡೆ ಲಕ್ಷ್ಯ ಹರಿಸಬೇಕು ಎಂದಿದ್ದಾರೆ.

ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಶಟ್ಲ್‌ ಆಟಗಾರರಿಗೆ ಗೋಪಿಚಂದ್‌ ಅಕಾಡೆಮಿಯಲ್ಲಿ ತರಬೇತಿಗೆ ಅವಕಾಶ ನೀಡಬೇಕು ಎಂದು ಸಿಂಧು ಅವರ ತಂದೆ ಪಿ.ವಿ.ರಮಣ ಹೇಳಿದ್ದಾರೆ.

‘ಬ್ಯಾಡ್ಮಿಂಟನ್‌ ಸೋಂಕು ಹರಡುವಂಥ ಸ್ಪರ್ಷ ಕ್ರೀಡೆಯಲ್ಲ. 15 ದಿನ ಅಭ್ಯಾಸ ನಡೆಸದಿದ್ದರೆ ಆಟದ ಲಯ ತಪ್ಪಿಹೋಗುತ್ತದೆ. ಮ್ಯಾಚ್‌ ಫಿಟ್ನೆಸ್‌ ಮರಳಿ ಗಳಿಸಿಕೊಳ್ಳಲು ಮತ್ತೆ ಎರಡು ತಿಂಗಳು ಬೇಕಾಗುತ್ತದೆ’ ಎಂದು ಅವರು ಹೇಳಿದರು.

ಅಕಾಡೆಮಿಯಲ್ಲಿ ಎಂಟು ಕೋರ್ಟ್‌ಗಳಿವೆ. ಸಿಂಧು, ಸಾಯಿ ಮತ್ತು ಚಿರಾಗ್‌– ಪ್ರತೀಕ್‌ಗೆ ಅಭ್ಯಾಸ ಮುಂದುವರಿಸಲು ಸಾಧ್ಯವಿದೆ ಎಂದು ಭಾರತ ತಂಡದ ಮಾಜಿ ವಾಲಿಬಾಲ್‌ ಆಟಗಾರರಾದ ರಮಣ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.