ADVERTISEMENT

ಕುದುರೆ–ಸವಾರನ ಮಧುರ ಬಂಧ...

ವರುಣ ನಾಯ್ಕರ
Published 9 ಸೆಪ್ಟೆಂಬರ್ 2018, 19:30 IST
Last Updated 9 ಸೆಪ್ಟೆಂಬರ್ 2018, 19:30 IST
ಫವಾದ್‌ ಮಿರ್ಜಾ
ಫವಾದ್‌ ಮಿರ್ಜಾ   

‘ಈಕ್ವೆಸ್ಟ್ರಿಯನ್ ಕ್ರೀಡೆಯಲ್ಲಿ ಕುದುರೆಯೊಂದಿಗೆ ನಾವು ಹೊಂದುವ ಸಂಬಂಧ ಬಹಳ ಮುಖ್ಯ. ಕುದುರೆ ಮತ್ತು ಅದರ ಸವಾರನ ಮಧ್ಯೆ ಇರುವ ಹೊಂದಾಣಿಕೆಯೇ ಗೆಲುವು ಹಾಗೂ ಸೋಲನ್ನು ನಿರ್ಧರಿಸುತ್ತದೆ. ಇದೇ ಕಾರಣಕ್ಕೆ ಈಕ್ವೆಸ್ಟ್ರಿಯನ್ ವಿಶೇಷ ಕ್ರೀಡೆಯಾಗಿ ಗಮನಸೆಳೆಯುತ್ತದೆ’

- ಹೀಗೆ ಹೇಳಿದ್ದು ಬೆಂಗಳೂರಿನ ಫವಾದ್ ಮಿರ್ಜಾ. ಇತ್ತೀಚೆಗೆ ಇಂಡೊನೇಷ್ಯಾದಲ್ಲಿ ನಡೆದಿದ್ದ ಏಷ್ಯನ್ ಕ್ರೀಡಾಕೂಟದ ವೈಯಕ್ತಿಕ ವಿಭಾಗದಲ್ಲಿ ಫವಾದ್‌ ಬೆಳ್ಳಿಯ ಪದಕ ಗೆದ್ದಿದ್ದರು. 36 ವರ್ಷಗಳ ನಂತರ ಈ ಕ್ರೀಡೆಯಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟ ಹೆಗ್ಗಳಿಕೆ ಅವರದ್ದು. ತಂಡ ವಿಭಾಗದಲ್ಲೂ ಭಾರತ ಬೆಳ್ಳಿಯ ಸಾಧನೆ ಮಾಡಿತ್ತು. ಇದರಲ್ಲೂ ಫವಾದ್ ಬಹುಮುಖ್ಯ ಪಾತ್ರ ವಹಿಸಿದ್ದರು. ಇವರ ಈ ಸಾಧನೆಯಲ್ಲಿ ಭಾಗಿಯಾದ ಕುದುರೆಯ ಹೆಸರು ಸೈನೊ ಮೆಡಿಕಾಟ್. ಇದರ ಮೇಲೆ ಫವಾದ್‌ಗೆ ವಿಶೇಷ ಒಲವು.

‘12 ವರ್ಷ ವಯಸ್ಸಿನ ಈ ಕುದುರೆಯನ್ನು ಮಿಕಿ ಎಂದು ಪ್ರೀತಿಯಿಂದ ಕರೆಯುತ್ತೇನೆ. ಒಂದು ವರ್ಷದಿಂದ ಇದರೊಂದಿಗೆ ಅಭ್ಯಾಸ ನಡೆಸುತ್ತಿದ್ದೇನೆ. ಜರ್ಮನಿಯಲ್ಲಿರುವ ನನ್ನ ಕೋಚ್ ಬೆಟಿನಾ ಹೊಯ್ ಅವರು ಈ ಕುದುರೆಗೆ ವಿಶೇಷ ತರಬೇತಿ ನೀಡಿದ್ದಾರೆ. ಈ ಅಶ್ವ ಪ್ರತಿಭಾಶಾಲಿ ಹಾಗೂ ಅನುಭವಿ. ನಾನು ಗೆದ್ದಿರುವ ಬೆಳ್ಳಿಯ ಪದಕ ಮೆಡಿಕಾಟ್‌ಗೂ ಸಲ್ಲಬೇಕು. ನಾನು ರೂಪಿಸುವ ತಂತ್ರಗಾರಿಕೆಯನ್ನು ಅರಿತು ಓಡುವ ಬುದ್ದಿವಂತಿಕೆ ಅದಕ್ಕಿದೆ. ಇಂತಹ ಕುದುರೆ ಸಿಕ್ಕಿದ್ದು ನನ್ನ ಅದೃಷ್ಟ’ ಎನ್ನುತ್ತಾರೆ ಫವಾದ್.

ADVERTISEMENT

ಈಕ್ವೆಸ್ಟ್ರಿಯನ್ ಸ್ಪರ್ಧಿಗಳಿಗೆ ಸರಿಸಮವಾಗಿ ಅವರು ಸವಾರಿ ಮಾಡುವ ಕುದುರೆಗಳೂ ತರಬೇತಿ ಪಡೆಯುತ್ತವೆ. ಸವಾರ ಮತ್ತು ಕುದುರೆಯ ನಡುವೆ ಉತ್ತಮ ಸಂಬಂಧವಿದ್ದಾಗ ಮಾತ್ರ ಈ ಕ್ರೀಡೆಗೆ ಮೆರುಗು ತುಂಬಲು ಸಾಧ್ಯ. ಕುದುರೆ ಪಳಗಿಸುವ ಕಲೆ ಸವಾರನಿಗೆ ಸಿದ್ಧಿಸಿರಬೇಕು. ಜೊತೆಗೆ ಅದರ ಮನೋಭಾವ ಹಾಗೂ ಶಕ್ತಿ ಅರಿತು ತಂತ್ರಗಾರಿಕೆ ಸಿದ್ಧಪಡಿಸುವ ಚಾಣಾಕ್ಷತೆ ಹೊಂದಿರಬೇಕು. ಹಾಗಾದಾಗ ಮಾತ್ರ ಈ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡಲು ಸಾಧ್ಯವಾಗುತ್ತದೆ.

ಫವಾದ್ ಜನಿಸಿದ್ದು ಬೆಂಗಳೂರಿನಲ್ಲಿ. ಅವರ ತಂದೆ ಡಾ. ಹಸ್ನೆಯಾನ್ ಮಿರ್ಜಾ. ತಾಯಿ ಇಂದಿರಾ ಬಸಪ್ಪ. ಮೈಸೂರು ರಾಜ್ಯದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರ ಕುಟುಂಬಕ್ಕೆ ಸೇರಿದವರು ಹಸ್ನೆಯನ್ ಮಿರ್ಜಾ. ಹೀಗಾಗಿ ಅವರ ಕುಟುಂಬವು ಕುದುರೆಗಳೊಂದಿಗೆ ಹೊಂದಿರುವ ಸಂಬಂಧಕ್ಕೆ ದಶಕಗಳ ಇತಿಹಾಸವಿದೆ.

ಉದ್ಯಾನನಗರಿಯಲ್ಲಿ ತಲೆ ಎತ್ತಿರುವ ಪ್ರತಿಷ್ಠಿತ ಎಂಬೆಸಿ ಅಂತರರಾಷ್ಟ್ರೀಯ ರೈಡಿಂಗ್‌ ಶಾಲೆಯಲ್ಲಿ ತರಬೇತಿ ಪಡೆದವರು ಫವಾದ್. ವಿಶೇಷ ತರಬೇತಿಯ ಉದ್ದೇಶದಿಂದ ಜರ್ಮನಿಯಲ್ಲಿ ವಾಸವಾಗಿದ್ದಾರೆ. ಒಲಿಂಪಿಯನ್‌ ಬೆಟಿನಾ ಹೊಯ್ ಅವರ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಬೆಟಿನಾ, ಅನುಭವಿ ಮತ್ತು ನಿಷ್ಠುರ ವ್ಯಕ್ತಿತ್ವದ ಕೋಚ್ ಎಂಬುದು ಫವಾದ್‌ ಅಭಿಪ್ರಾಯ.

‘ಸವಾರರ ಸಾಮರ್ಥ್ಯ ಆಧರಿಸಿ ರೈಡಿಂಗ್ ತಂತ್ರಗಾರಿಕೆ ಕಲಿಸುವ ಹೊಯ್, ವಿಶ್ವದ ಶ್ರೇಷ್ಠ ಕೋಚ್‌ಗಳಲ್ಲಿ ಒಬ್ಬರು. ತರಬೇತಿಯ ಸಮಯದಲ್ಲಿ ಅವರ ವೇಗ, ತೀವ್ರತೆ ಹಾಗೂ ಧೃಡತೆಗೆ ಹೊಂದಿಕೊಳ್ಳುವುದು ಬಹಳ ಕಷ್ಟ. ಈ ಕಾರಣಗಳಿಂದಾಗಿಯೇ ಬಹಳಷ್ಟು ಅಥ್ಲೀಟ್‌ಗಳು ತರಬೇತಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿರುವ ಸಾಕಷ್ಟು ನಿದರ್ಶನಗಳಿವೆ. ಆದರೆ, ಶ್ರಮವಿಲ್ಲದೇ ಸಾಧನೆಯ ಮೆಟ್ಟಿಲು ಏರುವುದು ಕಷ್ಟವೇ ಸರಿ’ ಎಂದು ಹೇಳಲು ಫವಾದ್ ಮರೆಯುವುದಿಲ್ಲ.

ಸದ್ಯ, ಮತ್ತೊಂದು ತರಬೇತಿ ಕಾರ್ಯಾಗಾರಕ್ಕೆ ಜರ್ಮನಿಗೆ ತೆರಳಿರುವ ಅವರು 2020ರ ಟೋಕಿಯೊ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಗುರಿ ಹೊಂದಿದ್ದಾರೆ. ಅದಕ್ಕಾಗಿ ಈಗಿನಿಂದಲೇ ಅಣಿಯಾಗುತ್ತಿದ್ದಾರೆ. ಈಕ್ವೆಸ್ಟ್ರಿಯನ್ ರಂಗದ ಪ್ರತಿಭಾಶಾಲಿ ಅಥ್ಲೀಟ್ ಆಗಿ ಹೊರಹೊಮ್ಮಿರುವ ಫವಾದ್ ಅವರಿಗೆ ಹಲವು ಕನಸುಗಳಿವೆ. ಅವುಗಳನ್ನು ನನಸು ಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಛಾತಿಯೂ ಅವರಲ್ಲಿದೆ. ಮುಂದಿನ ದಿನಗಳಲ್ಲಿ ಇವರ ಸಾಧನೆಯಿಂದ ಸ್ಫೂರ್ತಿ ಪಡೆದು ಯುವಕರು ಈ ಕ್ರೀಡೆಯನ್ನು ವೃತ್ತಿಪರವಾಗಿ ಸ್ವೀಕರಿಸಿದರೆ ಅಚ್ಚರಿಯೇನಿಲ್ಲ.

‘ಸರ್ಕಾರದಿಂದ ಆರ್ಥಿಕ ನೆರವು ಬೇಕು’

ಈಕ್ವೆಸ್ಟ್ರಿಯನ್ ಕ್ರೀಡೆ ಬಹಳ ದುಬಾರಿ. ಕುದುರೆಯ ಪೋಷಣೆ, ತರಬೇತಿ, ಪ್ರಯಾಣಕ್ಕೆ ಸಂಬಂಧಿಸಿದಂತೆ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಬೇಕಾಗುತ್ತದೆ. ಭಾರತದಲ್ಲಿ ಈ ಕ್ರೀಡೆಯ ಬಗ್ಗೆ ಹೆಚ್ಚಿನ ಜನರು ಒಲವು ತೋರದಿರಲು ಇದು ಒಂದು ಕಾರಣ.

‘ದೇಶದಲ್ಲಿ ಈ ಕ್ರೀಡೆಯ ಬೆಳವಣಿಗೆಗೆ ಸರ್ಕಾರ ನೆರವಿನ ಹಸ್ತ ಚಾಚಬೇಕು. ಬ್ರಿಟನ್, ಜರ್ಮನಿ, ಜಪಾನ್ ದೇಶಗಳಲ್ಲಿ ಈಕ್ವೆಸ್ಟ್ರಿಯನ್‌ನಲ್ಲಿ ತೊಡಗಿಕೊಳ್ಳುವವರಿಗೆ ಅಲ್ಲಿನ ಸರ್ಕಾರಗಳು ಆರ್ಥಿಕ ನೆರವು ನೀಡುತ್ತವೆ. ಅದೇ ಪದ್ಧತಿಯನ್ನು ನಮ್ಮ ಸರ್ಕಾರವೂ ಅಳವಡಿಸಿಕೊಂಡರೆ ಅನೇಕ ಪ್ರತಿಭಾವಂತರು ಬೆಳಕಿಗೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ಭಾರತ ಈಕ್ವೆಸ್ಟ್ರಿಯನ್ ಫೆಡರೇಷನ್ ಹೊಸ ಯೋಜನೆಗಳನ್ನು ಜಾರಿಗೊಳಿಸಲಿ’ ಎಂದು ಫವಾದ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.