ಸೇಂಟ್ ಲೂಯಿ: ಸುಮಾರು 30 ವರ್ಷಗಳ ಹಿಂದೆ ವಿಶ್ವ ಚೆಸ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದ ಮಾಜಿ ಚಾಂಪಿಯನ್ನರಾದ ವಿಶ್ವನಾಥನ್ ಆನಂದ್ ಮತ್ತು ಗ್ಯಾರಿ ಕ್ಯಾಸ್ಪರೋವ್ ಇದೀಗ ಮತ್ತೊಂದು ಸೆಣಸಾಟಕ್ಕೆ ಸಜ್ಜಾಗಿದ್ದಾರೆ. ಬುಧವಾರ ಇಲ್ಲಿ ಆರಂಭವಾಗಲಿರುವ ಲೆಜೆಂಡ್ಸ್ ಟೂರ್ನಿಯಲ್ಲಿ ಈ ದಿಗ್ಗಜರು ಪರಸ್ಪರರನ್ನು ಎದುರಿಸಲಿದ್ದಾರೆ.
12 ಆಟಗಳನ್ನು ಹೊಂದಿರುವ ‘ಚೆಸ್ 960’ ಪಂದ್ಯವು ಸುಮಾರು ₹1.28 ಕೋಟಿ ಬಹುಮಾನ ಹೊಂದಿದ್ದು, ಸೇಂಟ್ ಲೂಯಿ ಚೆಸ್ ಕ್ಲಬ್‌ನಲ್ಲಿ ನಡೆಯಲಿದೆ.
‘ಚೆಸ್ 960’ ಮಾದರಿಯಲ್ಲಿ ಆಟಗಳು ನಡೆಯಲಿವೆ. ಇದರಲ್ಲಿ ಬೋರ್ಡ್‌ನ ಇಬ್ಬದಿಯ ಕೊನೆಯ ಸಾಲಿನ ಪಡೆಗಳು (ರೂಕ್–ನೈಟ್–ಬಿಷಪ್– ಕ್ವೀನ್–ಕಿಂಗ್) ಸಾಂಪ್ರದಾಯಿಕ ಮಾದರಿಯಂತೆ ನಿರ್ದಿಷ್ಟ ಚೌಕಗಳಲ್ಲಿ ಇರುವುದಿಲ್ಲ. ಆದರೆ ಈ ಪಡೆಗಳು (ಬಿಳಿ ಮತ್ತು ಕಪ್ಪು ಕಾಯಿಗಳು) ಕೊನೆಯ ಸಾಲಿನ ಒಂದೇ ನೇರದಲ್ಲಿರುತ್ತವೆ. ಕಾಲಾಳುಗಳು ಮಾತ್ರ ಯಥಾ ಸ್ಥಾನದಲ್ಲಿರುತ್ತವೆ. ಹೀಗಾಗಿ ಆಟಗಾರರು ಇಲ್ಲಿ ಸಿದ್ಧಾಂತಗಳನ್ನು ನೆನಪಿನಲ್ಲಿಟ್ಟು ಆಡಲು ಸಾಧ್ಯವಿಲ್ಲ.
ಭಾರತದ ಚೆಸ್ ತಾರೆ ಆನಂದ್ ಮತ್ತು ರಷ್ಯಾದ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆನಿಸಿದ ಕ್ಯಾಸ್ಪರೋವ್ 1995ರಲ್ಲಿ ವಿಶ್ವ ವಾಣಿಜ್ಯ ಕೇಂದ್ರದ 107ನೇ ಮಹಡಿಯಲ್ಲಿ ವಿಶ್ವ ಚೆಸ್ ಚಾಂಪಿಯನ್‌ಷಿಪ್ ಆಡಿದ್ದರು. ಕ್ಯಾಸ್ಪರೋವ್ ಅಂದಿನ ಸೆಣಸಾಟವನ್ನು 10.5–7.5 ರಿಂದ ಜಯಿಸಿದ್ದರು. 2004ರಲ್ಲಿ ಆಟದಿಂದ ನಿವೃತ್ತರಾದ ನಂತರ ಕ್ಯಾಸ್ಪರೋವ್ ಅವರು ಬ್ಲಿಟ್ಝ್ ಮಾದರಿಯ ಪ್ರದರ್ಶನ ಪಂದ್ಯಗಳಲ್ಲಿ ಮಾತ್ರ ಆಡುತ್ತಿದ್ದಾರೆ. ಆನಂದ್ ಅಧಿಕೃತವಾಗಿ ನಿವೃತ್ತರಾಗಿಲ್ಲ. ಅಪರೂಪಕ್ಕೆ ಆಯ್ದ ಟೂರ್ನಿಗಳಲ್ಲಿ ಆಡುತ್ತಿದ್ದಾರೆ.
ಈ ಬಾರಿ ಇಬ್ಬರು ತಾರೆಯರು ‘ಫ್ರೀಸ್ಟೈಲ್ ಚೆಸ್’ ಅನ್ನು ರ‍್ಯಾಪಿಡ್ ಮತ್ತು ಬ್ಲಿಟ್ಝ್ ಮಾದರಿಯಲ್ಲಿ ಆಡಲಿದ್ದಾರೆ. ಆ ಆಸಕ್ತಿಕರ ಮಾದರಿಯಲ್ಲಿ ಪ್ರತಿದಿನ ನಾಲ್ಕು ಪಂದ್ಯಗಳಿರುತ್ತವೆ. ಇವರಿಬ್ಬರು ಮೂರು ದಿನವೂ ಎರಡು ರ‍್ಯಾಪಿಡ್ ಮತ್ತು ಎರಡು ಬ್ಲಿಟ್ಝ್ ಪಂದ್ಯಗಳನ್ನು ಆಡಲಿದ್ದಾರೆ. ಮೊತ್ತ ದಿನಗಳೆದಂತೆ ದುಪ್ಪಟ್ಟಾಗುತ್ತ ಹೋಗುತ್ತದೆ. ಮೊದಲ ದಿನ ನಾಲ್ಕು ಅಂಕ ಮಾತ್ರ ಇರಲಿದೆ. ಎರಡನೇ ದಿನ ಇದು ದುಪ್ಪಟ್ಟು (ಒಂದು ಗೆಲುವಿಗೆ ಎರಡರಂತೆ ಒಟ್ಟು ಎಂಟು ಅಂಕ) ಆಗಲಿದೆ ಮತ್ತು ಮೂರನೇ ದಿನ ಪ್ರತಿಯೊಂದು ಗೆಲುವಿಗೆ ತಲಾ ಮೂರು ಅಂಕ ನೀಡಲಾಗುತ್ತದೆ.
ವಿಜೇತ ಆಟಗಾರ ₹62 ಲಕ್ಷ ಮತ್ತು ಸೋತ ಆಟಗಾರ ₹44 ಲಕ್ಷ ಪಡೆಯಲಿದ್ದಾರೆ. 12 ಗೇಮ್‌ಗಳ ನಂತರ ಪಂದ್ಯ ಟೈ ಆದಲ್ಲಿ ಬಹುಮಾನ ಹಣವನ್ನು 50:50 ಮಾದರಿಯಲ್ಲಿ ಹಂಚಲಾಗುತ್ತದೆ. ಅಂದರೆ ಇಬ್ಬರೂ ತಲಾ ₹53ಲಕ್ಷ ಜೇಬಿಗಿಳಿಸಲಿದ್ದಾರೆ. ಇದರ ಜೊತೆಗೆ ಬೋನಸ್ ಹಣ (₹21 ಲಕ್ಷ) ಸಹ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.