
ಚೆನ್ನೈ: ರೋಶನ್ ಕುಜೂರ್ ಮತ್ತು ದಿಲ್‌ರಾಜ್ ಅವರ ಅಮೋಘ ಆಟದ ನೆರವಿನಿಂದ ಆತಿಥೇಯ ಭಾರತ ತಂಡವು ಶುಕ್ರವಾರ ಆರಂಭವಾದ ಎಫ್‌ಐಎಚ್ ಜೂನಿಯರ್ ಪುರುಷರ ವಿಶ್ವಕಪ್ ಹಾಕಿ ಟೂರ್ನಿಯ ಪಂದ್ಯದಲ್ಲಿ 7–0 ಗೋಲುಗಳಿಂದ ಚಿಲಿ ತಂಡವನ್ನು ಮಣಿಸಿ, ಶುಭಾರಂಭ ಮಾಡಿತು.
ಇಲ್ಲಿನ ಮೇಯರ್ ರಾಧಾಕೃಷ್ಣನ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಭಾರತ ಪರ ರೋಶನ್ (16ನೇ ಮತ್ತು 21ನೇ ನಿಮಿಷ), ದಿಲ್‌ರಾಜ್ (25ನೇ ಮತ್ತು 34ನೇ) ತಲಾ ಎರಡು ಗೋಲು ಗಳಿಸಿದರೆ, ಅಜಿತ್ ಯಾದವ್ (35ನೇ), ಅನ್ಮೋಲ್ ಎಕ್ಕಾ (48ನೇ) ಮತ್ತು ನಾಯಕ ರೋಹಿತ್ (60ನೇ) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು.
21 ವರ್ಷದೊಳಗಿನವರ ವಿಭಾಗದಲ್ಲಿ ಎರಡನೇ ಕ್ರಮಾಂಕದ ಭಾರತ ತಂಡವು ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಮೊದಲ ಕ್ವಾರ್ಟರ್‌ನಲ್ಲಿ ಚೆಂಡಿನ ಮೇಲೆ ಬಹುಕಾಲ ಹಿಡಿತ ಸಾಧಿಸಿದರೂ ಎದುರಾಳಿ ತಂಡದ ರಕ್ಷಣಾವ್ಯೂಹವನ್ನು ಭೇದಿಸಲು ಸಾಧ್ಯವಾಗಲಿಲ್ಲ. 15ನೇ ನಿಮಿಷದಲ್ಲಿ ಭಾರತಕ್ಕೆ ಮೊದಲ ಪೆನಾಲ್ಟಿ ಕಾರ್ನರ್ ಸಿಕ್ಕರೂ ಅವರನ್ನು ಗೋಲಾಗಿ ಪರಿವರ್ತಿಸುವಲ್ಲಿ ರೋಹಿತ್ ಎಡವಿದರು.
ಎರಡನೇ ಕ್ವಾರ್ಟರ್‌ನಲ್ಲಿ ಭಾರತದ ಫಾರ್ವರ್ಡ್‌ಗಳು ಚುರುಕಿನ ಆಟ ಪ್ರದರ್ಶಿಸಿದ್ದರಿಂದ ಮೂರು ಗೋಲುಗಳು ದಾಖಲಾದವು. 16ನೇ ನಿಮಿಷದಲ್ಲಿ ‘ಡೆಕ್‌ಲಾಕ್’ ಅನ್ನು ಭೇದಿಸಿದ ರೋಶನ್ ಭಾರತದ ಪಾಳಯದಲ್ಲಿ ಸಂಭ್ರಮ ಮೂಡಿಸಿದರು. ಅದಾದ ಐದು ನಿಮಿಷಗಳ ಅಂತರದಲ್ಲಿ ಮತ್ತೊಂದು ಫೀಲ್ಡ್ ಗೋಲು ದಾಖಲಿಸಿದ ಅವರು ಮುನ್ನಡೆಯನ್ನು ದ್ವಿಗುಣಗೊಳಿಸಿದರು. ಅರ್ಷದೀಪ್ ಸಿಂಗ್ ನೀಡಿದ ಪಾಸ್ ಪಡೆದ ಅವರು ಚೆಂಡನ್ನು ಯಶಸ್ವಿಯಾಗಿ ಗುರಿ ತಲುಪಿಸಿದರು. ಅದರ ಬೆನ್ನಲ್ಲೇ ದಿಲ್‌ರಾಜ್ ಗೋಲು ದಾಖಲಿಸಿದ್ದರಿಂದ ಮೊದಲಾರ್ಧದ ವೇಳೆಗೆ ಭಾರತ ತಂಡವು ಸಂಪೂರ್ಣ ಹಿಡಿತ ಸಾಧಿಸಿತು.
ಮೂರನೇ ಕ್ವಾರ್ಟರ್ ಆರಂಭಗೊಂಡ ನಾಲ್ಕನೇ ನಿಮಿಷದಲ್ಲಿ ಅಂಕಿತ್ ಪಾಲ್ ಅವರಿಂದ ಪಾಸ್ ಪಡೆದ ದಿಲ್‌ರಾಜ್ ತನ್ನ ಎರಡನೇ ಗೋಲು ದಾಖಲಿಸಿದರು. ಇದಾದ ಒಂದೇ ನಿಮಿಷದಲ್ಲಿ ಅಜಿತ್ ರಿವರ್ಸ್ ಹಿಟ್‌ನಲ್ಲಿ ಚೆಂಡನ್ನು ಆಕರ್ಷಕವಾಗಿ ಗುರಿ ಸೇರಿಸಿದರು.
40ನೇ ನಿಮಿಷದಲ್ಲಿ ಚಿಲಿ ತಂಡಕ್ಕೆ ಮೊದಲ ಪೆನಾಲ್ಟಿ ಕಾರ್ನರ್ ಸಿಕ್ಕಿತಾದರೂ, ಅವರನ್ನು ಗೋಲಾಗಿ ಪರಿವರ್ತಿಸಲು ಭಾರತದ ಡಿಫೆಂಡರ್‌ಗಳು ಅವಕಾಶ ನೀಡಲಿಲ್ಲ. 48ನೇ ನಿಮಿಷದಲ್ಲಿ ಅನ್ಮೋಲ್ ಮತ್ತು ಹೂಟರ್‌ಗೆ 49 ಸೆಕೆಂಡ್ ಬಾಕಿ ಇರುವಂತೆ ರೋಹಿತ್ ಗೋಲು ದಾಖಲಿಸಿ ಭಾರತದ ಗೆಲುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಿದರು.
ಎರಡು ಬಾರಿಯ ಚಾಂಪಿಯನ್ ಭಾರತ ತಂಡವು ತನ್ನ ಎರಡನೇ ಪಂದ್ಯದಲ್ಲಿ ಒಮಾನ್ ತಂಡವನ್ನು ಶನಿವಾರ ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.