ಪುಣೆ: ಅಧಿಕಾರಯುತ ಪ್ರದರ್ಶನ ನೀಡಿದ ಯು.ಪಿ. ಯೋಧಾಸ್ ತಂಡ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಗುರುವಾರ ಗುಜರಾತ್ ಜೈಂಟ್ಸ್ ತಂಡದ ಮೇಲೆ 59–23 ರಲ್ಲಿ ಸುಲಭ ಗೆಲುವನ್ನು ಸಾಧಿಸಿತು. ಯೋಧಾಸ್ ತಂಡದಲ್ಲಿರುವ ಕನ್ನಡಿಗ ರೇಡರ್ ಗಗನ್ ಗೌಡ ಮತ್ತೊಮ್ಮೆ ಮಿಂಚಿ ಪಂದ್ಯದ ಗರಿಷ್ಠ 19 ಅಂಕಗಳನ್ನು ಕಲೆಹಾಕಿದರು.
ಬಾಲೇವಾಡಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನ ಬ್ಯಾಡ್ಮಿಂಟನ್ ಹಾಲ್‌ನಲ್ಲಿ ನಡೆದ ಪಂದ್ಯದಲ್ಲಿ ಯೋಧಾಸ್ ತಂಡ ವಿರಾಮದ ವೇಳೆಗೆ 29–11 ಅಂಕಗಳಿಂದ ಮುಂದಿತ್ತು. ಗಗನ್‌ಗೆ ಬೆಂಬಲ ನೀಡಿದ ಭವಾನಿ ರಜಪೂತ್ 11 ಅಂಕ ಗಳಿಸಿದರು. ಜೈಂಟ್ಸ್ ಪರ ನಾಯಕ ಗುಮನ್ ಸಿಂಗ್ 7 ಅಂಕ ಗಳಿಸಿದರು.
ಒಳ್ಳೆಯ ಲಯದಲ್ಲಿರುವ ಗಗನ್ ಮೊದಲಾರ್ಧದಲ್ಲೇ ಸೂಪರ್ ಟೆನ್ ಸಂಪಾದಿಸಿದರು. ಯೋಧಾಸ್ ಡಿಫೆಂಡರ್‌ಗಳೂ ಸಾಂಘಿಕ ಪ್ರದರ್ಶನ ನೀಡಿದರು.
ಯೋಧಾಸ್‌ಗೆ ಈ ಮೂಲಕ 21 ಪಂದ್ಯಗಳಿಂದ 12 ಗೆಲುವಿನಡೊನೆ 74 ಅಂಕಗಳನ್ನು ಕಲೆಹಾಕಿ ಮೂರನೇ ಸ್ಥಾನದಲ್ಲಿದೆ. ಪ್ಲೇ ಆಫ್ ಅವಕಾಶ ಉಜ್ವಲವಾಗಿರಿಸಿಕೊಂಡಿದೆ. ಜೈಂಟ್ಸ್ 11ನೇ ಸ್ಥಾನದಲ್ಲಿದೆ.
ಮುಂಬಾಕ್ಕೆ ಜಯ: ಯು ಮುಂಬಾ ತಂಡ ಇನ್ನೊಂದು ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ ತಂಡವನ್ನು 43–37 ಅಂಕಗಳಿಂದ ಸೋಲಿಸಿತು. ಈ ಸೋಲಿನ ಹೊರತಾಗಿಯೂ ಪೈರೇಟ್ಸ್ ತಂಡ (21 ಪಂದ್ಯಗಳಿಂದ 74 ಅಂಕ) ಎರಡನೇ ಸ್ಥಾನ ಕಾಪಾಡಿಕೊಂಡಿದೆ.
ಮುಂಬಾ ಪರ ಅಜಿತ್ ಚೌಹಾನ್ 15 ಅಂಕ ಗಳಿಸಿದರೆ, ಪೈರೇಟ್ಸ್ ಪರ ದೇವಾಂಕ್ 12 ಅಂಕ ಕಲೆಹಾಕಿದರು.
ಶುಕ್ರವಾರದ ಪಂದ್ಯಗಳು
ಜೈಪುರ ಪಿಂಕ್ ಪ್ಯಾಂಥರ್ಸ್– ಬೆಂಗಾಲ್ ವಾರಿಯರ್ಸ್ (ರಾತ್ರಿ 8)
ಪುಣೇರಿ ಪಲ್ಟನ್– ತೆಲುಗು ಟೈಟನ್ಸ್ (ರಾತ್ರಿ 9)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.