ದಾಂತೇವಾಡ: ಛತ್ತೀಸಗಢದ ಪ್ರಮುಖ ನಕ್ಸಲ್ ಪೀಡಿತ ಪ್ರದೇಶವಾದ ದಾಂತೇವಾಡ ಇದೀಗ ಕ್ರೀಡಾ ಕೇಂದ್ರವಾಗಿ ಬದಲಾಗುತ್ತಿದೆ. ಸಚಿನ್ ತೆಂಡೂಲ್ಕರ್ ಫೌಂಡೇಶನ್ ವತಿಯಿಂದ 50 ಕ್ರೀಡಾಂಗಣಗಳನ್ನು ನವೀಕರಣಗೊಳಿಸಲಾಗುತ್ತಿದೆ.
ದೇಶದ ಹಿಂದುಳಿದ ಭಾಗಗಳನ್ನು ಗುರುತಿಸಿ, ಅಲ್ಲಿ ಕ್ರೀಡಾ ವಾತಾವರಣ ಸೃಷ್ಠಿಸುವ ಕೆಲಸವನ್ನು ಸಚಿನ್ ತೆಂಡೂಲ್ಕರ್ ಫೌಂಡೇಶನ್ ಮಾಡುತ್ತಿದೆ. ಇದೀಗ ನಕ್ಸಲ್ ಪೀಡಿತ ಪ್ರದೇಶವಾದ ದಾಂತೇವಾಡದ ಬೇರೆ ಬೇರೆ ಹಳ್ಳಿಗಳಲ್ಲಿ ಸ್ಥಳೀಯ ಆಡಳಿತದ ನೆರವಿನಿಂದ ಕ್ರೀಡಾಂಗಣಗಳನ್ನು ನವೀಕರಿಸಲು ಮುಂದಾಗಿದೆ.
ಸಚಿನ್ ತೆಂಡೂಲ್ಕರ್ ಫೌಂಡೇಶನ್ ಹಾಗೂ ಮಾನ್ ದೇಸಾಯಿ ಫೌಂಡೇಶನ್ ಸಹಯೋಗದೊಂದಿಗೆ ಸ್ಥಳಿಯ ಆಡಳಿತವು ‘ಮೈದಾನ್ ಕಪ್’ಹೆಸರಿನಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದೆ. ಸಮುದಾಯದ ನೆರವಿನಿಂದ ಇದುವರೆಗೂ 20ಕ್ಕೂ ಅಧಿಕ ಕ್ರೀಡಾಂಗಣಗಳನ್ನು ನವೀಕರಿಸಲಾಗಿದ್ದು, ಅಕ್ಟೋಬರ್ ವೇಳೆಗೆ ಗುರಿ ತಲುಪಲಿದ್ದೇವೆ ಎಂದು ದಾಂತೇವಾಡ ಜಿಲ್ಲಾಧಿಕಾರಿ ಕುನಾಲ್ ದುದಾವತ್ ತಿಳಿಸಿದ್ದಾರೆ.
ಛತ್ತೀಸಗಢ ಸರ್ಕಾರವು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕ್ರೀಡೆಯನ್ನು ಉತ್ತೇಜಿಸುವ ದೃಷ್ಠಿಯಲ್ಲಿ ಕಳೆದ ವರ್ಷ ದಾಂತೇವಾಡ ಸೇರಿದಂತೆ ಬಸ್ತಾರ್ ಪ್ರಾಂತ್ಯದ ನಕ್ಸಲ್ ಪೀಡಿತ ಆರು ಜಿಲ್ಲೆಗಳನ್ನು ಸೇರಿಸಿಕೊಂಡು ‘ಬಸ್ತಾರ್ ಓಲಂಪಿಕ್ಸ್–2024’ಆಯೋಜಿಸಿತ್ತು. ನಕ್ಸಲ್ ಪೀಡಿತ ಪ್ರದೇಶಗಳ ಕ್ರೀಡಾಪಟುಗಳನ್ನು ಹೊರ ಪ್ರಪಂಚಕ್ಕೆ ಪರಿಚಯಿಸುವುದು ಇದರ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ಗ್ರಾಮಗಳ ಸರ್ಕಾರಿ ಶಾಲೆಗಳ ಆವರಣದಲ್ಲಿ ರನ್ನಿಂಗ್ ಟ್ರ್ಯಾಕ್, ಜಾವೆಲಿನ್, ಗುಂಡು ಎಸೆತ, ಉದ್ದ ಜಿಗಿತ ಸೇರಿದಂತೆ 13ಕ್ಕೂ ಅಧಿಕ ಕ್ರೀಡೆಗಳಿಗೆ ನೆರವಾಗುವಂತೆ ಕ್ರೀಡಾಂಗಣಗಳನ್ನು ನವೀಕರಿಸಲಾಗುತ್ತಿದೆ. ಸರ್ಕಾರದ ವತಿಯಿಂದಲೇ ಈ ಕೆಲಸವನ್ನು ಮಾಡಬಹುದಾಗಿದ್ದರೂ, ಯುವ ಜನರನ್ನು ಆಕರ್ಷಿಸುವ ಉದ್ದೇಶದಿಂದ ಸಚಿನ್ ತೆಂಡೂಲ್ಕರ್ ಫೌಂಡೇಶನ್ ನೆರವು ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.