ADVERTISEMENT

ಆರು ತಜ್ಞರ ನಿಗಾ ಸಮಿತಿ ರಚನೆ

ಲಾಕ್‌ಡೌನ್‌ ತೆರವು ನಂತರ ಎಲ್ಲ ಸಾಯ್ ಕೇಂದ್ರಗಳಲ್ಲಿ ತರಬೇತಿ ಆಯೋಜನೆಗೆ ಸಿದ್ದತೆ

ಪಿಟಿಐ
Published 10 ಮೇ 2020, 20:00 IST
Last Updated 10 ಮೇ 2020, 20:00 IST
ಭಾರತ ಹಾಕಿ ತಂಡದ ಆಟಗಾರರು ಬೆಂಗಳೂರಿನ ಸಾಯ್ ದಕ್ಷಿಣ ಭಾರತ ಕೇಂದ್ರದಲ್ಲಿ ಅಭ್ಯಾಸ ನಡೆಸಿದ ಸಂದರ್ಭ
ಭಾರತ ಹಾಕಿ ತಂಡದ ಆಟಗಾರರು ಬೆಂಗಳೂರಿನ ಸಾಯ್ ದಕ್ಷಿಣ ಭಾರತ ಕೇಂದ್ರದಲ್ಲಿ ಅಭ್ಯಾಸ ನಡೆಸಿದ ಸಂದರ್ಭ   

ನವದೆಹಲಿ: ಕೊರೊನಾ ಹಾವಳಿಯಿಂದಾಗಿ ಜಾರಿ ಮಾಡಿರುವ ಲಾಕ್‌ಡೌನ್ ತೆರವುಗೊಂಡ ನಂತರ ಎಲ್ಲ ಕೇಂದ್ರಗಳಲ್ಲೂ ತರಬೇತಿ ಮುಂದುವರಿಸಲು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಯೋಜನೆ ಹಮ್ಮಿಕೊಂಡಿದೆ. ತರಬೇತಿಯ ಗುಣಮಟ್ಟದ ಮೇಲೆ ನಿಗಾ ವಹಿಸಲು (ಎಸ್ಒಪಿ) ಆರು ಮಂದಿ ತಜ್ಞರ ತಂಡವನ್ನು ಭಾನುವಾರ ರಚಿಸಿದೆ. ಎಲ್ಲ ವಿಭಾಗಗಳಲ್ಲೂ ತರಬೇತಿ ಆರಂಭಿಸುವುದು ಸಾಯ್ ಚಿಂತನೆ.

ಸಾಯ್ ಕಾರ್ಯದರ್ಶಿ ರೋಹಿತ್ ಭಾರದ್ವಾಜ್ ಅವರು ಆರು ಮಂದಿಯ ತಂಡದ ನೇತೃತ್ವ ವಹಿಸಲಿದ್ದು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆಯ (ಟಾಪ್ಸ್‌) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ರಾಜಗೋಪಾಲನ್, ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್‌.ಎಸ್.ರಾಯ್‌, ಎಸ್‌.ಎಸ್‌.ಸಾರ್ಲ, ಕರ್ನಲ್ ಬಿ.ಕೆ.ನಾಯಕ್‌ ಮತ್ತು ಟಾಪ್ಸ್‌ನ ಸಹಾಯಕ ನಿರ್ದೇಶಕ ಸಚಿನ್ ಕೆ ಅವರೂ ಒಳಗೊಂಡಿದ್ದಾರೆ.

ಕೋವಿಡ್ ಹಾವಳಿ ಆರಂಭವಾದಾಗಿನಿಂದ ಪ್ರಾಧಿಕಾರದ ಎಲ್ಲ ಕೇಂದ್ರಗಳಲ್ಲೂ ತರಬೇತಿಯನ್ನು ಸ್ಥಗಿತಗೊಳಿಸಲಾಗಿದೆ. ತರಬೇತಿ ಪುನರಾರಂಭಗೊಳ್ಳುವ ವೇಳೆ ಕ್ರೀಡಾಪಟುಗಳು, ಕೋಚ್‌ಗಳು, ತಾಂತ್ರಿಕ ಅಧಿಕಾರಿಗಳು, ನೆರವು ಸಿಬ್ಬಂದಿ, ಆಡಳಿತಗಾರರು, ಭೋಜನಶಾಲೆಯವರು, ಕ್ರೀಡಾನಿಲಯದ ಸಿಬ್ಬಂದಿ ಮತ್ತು ಸಂದರ್ಶಕರು ಅನುಸರಿಸಬೇಕಾದ ನಿಯಮ ಮತ್ತು ಪಾಲಿಸಬೇಕಾದ ಶಿಸ್ತನ್ನು ಈ ತಂಡ ಸಿದ್ಧಪಡಿಸಲಿದೆ.

ADVERTISEMENT

ಪ್ರವೇಶ, ಸ್ಯಾನಿಟೇಷನ್‌ಗೆ ಸಂಬಂಧಿಸಿದ ನಿಬಂಧನೆಗಳು, ತರಬೇತಿ ನಡೆಯುವ ಸ್ಥಳವನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ವಾಸಸ್ಥಾನದಿಂದ ತರಬೇತಿ ಕೇಂದ್ರಕ್ಕೂ ಅಲ್ಲಿಂದ ವಾಪಸ್ ವಾಸಸ್ಥಳಕ್ಕೂ ತೆರಳುವ ವೇಳೆ ಕ್ರೀಡಾಪಟುಗಳು ಅನುಸರಿಸಬೇಕಾದ ಕ್ರಮಗಳು ಮುಂತಾದವುಗಳಿಗೆ ಸಂಬಂಧಿಸಿ ಸಂಪೂರ್ಣ ಮಾಹಿತಿಗಳನ್ನು ಒಳಗೊಂಡ ನಿಯಮಗಳನ್ನು ಎಸ್‌ಒಪಿ ರೂಪಿಸಲಿದೆ.

ಈಜಿಗೆ ಪ್ರತ್ಯೇಕ ಎಸ್‌ಒಪಿ:ವಿಶೇಷ ನಿಗಾ ವಹಿಸಬೇಕಾದ ಈಜಿಗೆ ಸಂಬಂಧಿಸಿ ಪ್ರತ್ಯೇಕ ಎಸ್‌ಒಪಿ ರಚಿಸುವುದಾಗಿಯೂ ಸಾಯ್ ತಿಳಿಸಿದೆ. ನೀರಿನಲ್ಲಿ ಇಳಿದು ಅಭ್ಯಾಸ ನಡೆಸುವುದರಿಂದ ಈಜಿನಲ್ಲಿ ಆರೋಗ್ಯ ಸಮಸ್ಯೆಯ ಸಾಧ್ಯತೆ ಹೆಚ್ಚು ಇದೆ ಎಂದು ಅದು ಹೇಳಿದೆ.

ಈಜಿಗೆ ಸಂಬಂಧಿಸಿದ ಸಮಿತಿಯನ್ನು ಸಾಯ್‌ನ‘ಟೀಮ್ಸ್’ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕಿ ರಾಧಿಕಾ ಶ್ರೀಮಾನ್ ಮುನ್ನಡೆಸುವರು. ಭಾರತ ಈಜು ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಮೋನಲ್ ಚೋಕ್ಸಿ, ಹಿರಿಯ ಕೋಚ್‌ಗಳು ಮತ್ತು ವೈದ್ಯರು ತಂಡದಲ್ಲಿ ಇರುವರು.

ಕ್ರೀಡಾ ಸಚಿವಾಲಯಕ್ಕೆ ಕಳುಹಿಸುವ ಶಿಫಾರಸುಗಳನ್ನು ಸಿದ್ಧಪಡಿಸುವ ಮುನ್ನ ಎಸ್‌‌ಒ ಎಲ್ಲ ಕ್ರೀಡಾಸಂಸ್ಥೆಗಳ ಮುಖ್ಯಸ್ಥರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.