ADVERTISEMENT

ಈಜು ತರಬೇತಿ: ಕನ್ನಡಿಗ ಶ್ರೀಹರಿ ನಟರಾಜ್‌ಗೆ ಅವಕಾಶ

ಭಾರತದ ಮೂವರು ಈಜುಪಟುಗಳಿಗೆ ತರಬೇತಿ ಪುನರಾರಂಭಿಸಲು ದುಬೈಗೆ ಕಳುಹಿಸಲಿರುವ ಸಾಯ್‌

ಪಿಟಿಐ
Published 15 ಆಗಸ್ಟ್ 2020, 13:41 IST
Last Updated 15 ಆಗಸ್ಟ್ 2020, 13:41 IST
ಶ್ರೀಹರಿ ನಟರಾಜ್‌
ಶ್ರೀಹರಿ ನಟರಾಜ್‌   

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ ಮೇಲೆ ಕಣ್ಣಿಟ್ಟಿರುವಕನ್ನಡಿಗ ಶ್ರೀಹರಿ ನಟರಾಜ್ ಸೇರಿದಂತೆ ಮೂವರು ಈಜುಪಟುಗಳಿಗೆ ಭಾರತ ಕ್ರೀಡಾ ಪ್ರಾಧಿಕಾರವು (ಸಾಯ್‌) ಸಿಹಿಸುದ್ದಿ ನೀಡಿದೆ. ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ತರಬೇತಿ ಇಲ್ಲದೆ ‘ಗೃಹಬಂಧನ’ದಲ್ಲಿದ್ದ ಶ್ರೀಹರಿ, ವೀರ್‌ಧವಳ್‌ ಖಾಡೆ ಹಾಗೂ ಕುಶಾಗ್ರ ರಾವತ್‌ ಅವರಿಗೆ ತರಬೇತಿಯನ್ನು ಪುನರಾರಂಭಿಸಲು ದುಬೈಗೆ ಕಳುಹಿಸುತ್ತಿದೆ.

ದುಬೈನ ಅಕ್ವಾ ನೇಷನ್‌ ಈಜು ಅಕಾಡೆಮಿಯಲ್ಲಿ ತಾಲೀಮು ನಡೆಸಲಿರುವ ಈ ತ್ರಿವಳಿಗೆ ಕೋಚ್‌ ಜಯರಾಜನ್‌ ಸಾಥ್‌ ನೀಡಲಿದ್ದಾರೆ.₹ 35 ಲಕ್ಷ ವೆಚ್ಚದಲ್ಲಿ ತರಬೇತಿಯು ಎರಡು ತಿಂಗಳ ಕಾಲ ನಡೆಯಲಿದೆ.

‘ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್‌ಗೆ ಪೂರ್ವಸಿದ್ಧತೆಯಾಗಿ ₹ 35 ಲಕ್ಷ ವೆಚ್ಚದಲ್ಲಿ ಮೂವರು ಈಜುಪಟುಗಳನ್ನು ತರಬೇತಿಗಾಗಿ ದುಬೈಗೆ ಕಳುಹಿಸಲು ಒಪ್ಪಿಗೆ ನೀಡಲಾಗಿದೆ‘ ಎಂದು ಸಾಯ್‌ ಹೇಳಿದೆ.

ADVERTISEMENT

‘ನಾವು ಈಗಾಗಲೇ ವೀಸಾ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ. ಆಗಸ್ಟ್‌ 24–25ಕ್ಕೆ ಈಜುಪಟುಗಳು ದುಬೈಗೆ ಪ್ರಯಾಣ ಬೆಳೆಸಲಿದ್ದಾರೆ‘ ಎಂದು ಭಾರತ ಈಜು ಫೆಡರೇಷನ್‌ (ಎಸ್‌ಎಫ್‌ಐ) ಪ್ರಧಾನ ಕಾರ್ಯದರ್ಶಿ ಮೋನಾಲ್‌ ಚೋಕ್ಸಿ ಹೇಳಿದ್ದಾರೆ.

‘ಶ್ರೀಹರಿ ಅವರ ತರಬೇತುದಾರ ಜಯರಾಜನ್‌ ಅವರು ಈಜುಪಟುಗಳ ಜೊತೆ ತೆರಳಲಿದ್ದು, ರಾಷ್ಟ್ರೀಯ ಕೋಚ್‌ ಪ್ರದೀಪ್‌ ಎಸ್‌.ಕುಮಾರ್‌ ಅವರು ಈಗಾಗಲೇ ದುಬೈನ ಅಕಾಡೆಮಿಯಲ್ಲಿದ್ದಾರೆ‘ ಎಂದು ಚೋಕ್ಸಿ ವಿವರಿಸಿದರು.

ಶ್ರೀಹರಿ (100 ಮೀಟರ್‌ ಬ್ಯಾಕ್‌ಸ್ಟ್ರೋಕ್‌), ಖಾಡೆ (50 ಮೀ. ಫ್ರೀಸ್ಟೈಲ್‌‌) ಹಾಗೂ ರಾವತ್‌ (400 ಮೀ, 800 ಮೀ, ಹಾಗೂ 1500 ಮೀ. ಫ್ರೀಸ್ಟೈಲ್‌‌) ಅವರು ಟೋಕಿಯೊ ಒಲಿಂಪಿಕ್ಸ್‌ಗೆ ‘ಬಿ’ ಅರ್ಹತೆ ಗಿಟ್ಟಿಸಿದ್ದಾರೆ.

ಈಜುಪಟುಗಳ ಸಂತಸ: ತರಬೇತಿ ಪಡೆಯಲು ಸಾಧ್ಯವಾಗುತ್ತಿರುವುದಕ್ಕೆ ಈಜುಪಟುಗಳು ಸಂತಸ ವ್ಯಕ್ತಪಡಿಸಿದ್ದಾರೆ.

‘ಮತ್ತೆ ಈಜುಕೊಳಕ್ಕೆ ಮರಳುತ್ತಿರುವುದು ಸಂತಸ ತಂದಿದೆ. ಇದಕ್ಕೆ ಕಾರಣವಾದ ಎಸ್‌ಎಫ್‌ಐ ಹಾಗೂ ಸಾಯ್‌ಗೆ ಧನ್ಯವಾದ ಸಲ್ಲಿಸುತ್ತೇನೆ. ಇತರ ಈಜುಪಟುಗಳೂ ಶೀಘ್ರ ತರಬೇತಿ ಆರಂಭಿಸಲಿದ್ದಾರೆ ಎಂಬ ವಿಶ್ವಾಸವಿದೆ’ ಎಂದು ಶ್ರೀಹರಿ ನಟರಾಜ್‌ ಹೇಳಿದರು.

‘ಐದು ತಿಂಗಳ ಬಿಡುವಿನ ಬಳಿಕ ಈಜುಕೊಳಕ್ಕೆ ಇಳಿಯಲಿದ್ದು ಖುಷಿಯಾಗುತ್ತಿದೆ. ನನ್ನ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಿಕೊಳ್ಳುತ್ತೇನೆ. ಶಿಬಿರ ಆರಂಭಿಸುವ ನಿರ್ಧಾರವು ನನ್ನ ಉತ್ಸಾಹ ಹೆಚ್ಚಿಸಿದೆ‘ ಎಂದು ರಾವತ್‌ ನುಡಿದರು.

ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಏರಿಕೆ ಕಾರಣಘೋಷಣೆಯಾದ ಮೊದಲ ಲಾಕ್‌ಡೌನ್‌ (ಮಾರ್ಚ್‌ 25ರಿಂದ) ಬಳಿಕ ಭಾರತದ ಈಜುಪಟುಗಳು ಈಜುಕೊಳಕ್ಕೆ ಇಳಿದಿರಲಿಲ್ಲ. ನಿರ್ಬಂಧಗಳಲ್ಲಿ ಸಡಿಲಿಕೆ ಮಾಡಿದ ಬಳಿಕವೂ ಆಗಸ್ಟ್‌ 31ರವರೆಗೆ ಈಜುಕೊಳಕ್ಕೆ ಇಳಿಯುವುದನ್ನು ನಿಷೇಧಿಸಲಾಗಿತ್ತು.

ಹೋದ ವರ್ಷದ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ 54.69 ಸೆಕೆಂಡುಗಳಲ್ಲಿ ಗುರಿ ತಲುಪಿದ್ದ ಶ್ರೀಹರಿ ರಾಷ್ಟ್ರೀಯ ದಾಖಲೆಯೊಂದಿಗೆ ಒಲಿಂಪಿಕ್ಸ್‌ಗೆ ‘ಬಿ’ ಅರ್ಹತೆ ಗಳಿಸಿದ್ದರು. ಟೋಕಿಯೊ ಟಿಕೆಟ್‌ ಖಚಿತಪಡಿಸಿಕೊಳ್ಳಲು ಅವರು ಈ ಸಮಯವನ್ನು 53.85 ಸೆಕೆಂಡುಗಳಿಗೆ ಇಳಿಸಿಕೊಳ್ಳಬೇಕಿದೆ.

ಭಾರತದ ಸಾಜನ್‌ ಪ್ರಕಾಶ್‌, ಆರ್ಯನ್‌ ಮಖೀಜಾ ಹಾಗೂ ಅದ್ವೈತ್‌ ಪೇಜ್‌ ಅವರೂ ಒಲಿಂಪಿಕ್ಸ್‌ಗೆ ‘ಬಿ’ ಅರ್ಹತೆ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.