ADVERTISEMENT

ಡೆನ್ಮಾರ್ಕ್‌ ಓಪನ್‌:ಸೈನಾ ಟ್ವೀಟ್‌ಗೆ ಸ್ಪಂದಿಸಿದ ವಿದೇಶಾಂಗ ಸಚಿವಾಲಯ

ಪಿಟಿಐ
Published 8 ಅಕ್ಟೋಬರ್ 2019, 16:24 IST
Last Updated 8 ಅಕ್ಟೋಬರ್ 2019, 16:24 IST
ಸೈನಾ ನೆಹ್ವಾಲ್‌
ಸೈನಾ ನೆಹ್ವಾಲ್‌   

ನವದೆಹಲಿ: ನಿಗದಿತ ಅವಧಿಯೊಳಗೆ ವೀಸಾ ಸಿಗದಿದ್ದರೆ, ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ‍ಪಾಲ್ಗೊಳ್ಳಲು ಆಗುವುದಿಲ್ಲ ಎಂದು ಸೋಮವಾರ ಆತಂಕ ವ್ಯಕ್ತಪಡಿಸಿದ್ದ ಸೈನಾ ನೆಹ್ವಾಲ್‌, ಈಗ ನಿರಾಳರಾಗಿದ್ದಾರೆ.

ಸೈನಾ ಅವರು ಮಾಡಿದ್ದ ಟ್ವೀಟ್‌ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸ್ಪಂದಿಸಿದೆ.

‘ಡೆನ್ಮಾರ್ಕ್‌ ವೀಸಾಗಾಗಿ ಅರ್ಜಿ ಸಲ್ಲಿಸುವವರೆಲ್ಲಾ ವೀಸಾ ಕೇಂದ್ರಕ್ಕೆ ಹಾಜರಾಗಿ ಅಗತ್ಯ ಮಾಹಿತಿಗಳನ್ನು ಒದಗಿಸಲೇಬೇಕು. ರಾಯಭಾರ ಕಚೇರಿಯ ಸೂಚನೆ ಮೇರೆಗೆ ಹೈದರಾಬಾದ್‌ನಲ್ಲಿರುವ ವೀಸಾ ಅರ್ಜಿ ಕೇಂದ್ರದ ಬಾಗಿಲು ತೆರೆಯಲಾಗಿತ್ತು. ಸೈನಾ ಅವರು ಬಯೋಮೆಟ್ರಿಕ್‌ ಸೇರಿದಂತೆ ಇತರೆ ದಾಖಲೆಗಳನ್ನು ಸಲ್ಲಿಸಿದ್ದಾರೆ. ಡೆನ್ಮಾರ್ಕ್‌ ರಾಯಭಾರ ಕಚೇರಿಯು ಅರ್ಜಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದೆ’ ಎಂದು ವಿಎಫ್‌ಎಸ್‌ ಗ್ಲೋಬಲ್‌ ಸಂಸ್ಥೆ ತಿಳಿಸಿದೆ.

ADVERTISEMENT

‘ಸೋಮವಾರ ವೀಸಾ ಕೇಂದ್ರಕ್ಕೆ ಹಾಜರಾಗಿ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದೇನೆ. ಸೋಮವಾರ ರಜೆ ಇದ್ದರೂ ನನಗಾಗಿ ಕಾರ್ಯನಿರ್ವಹಿಸಿದ ಸಿಬ್ಬಂದಿಗೆ ಧನ್ಯವಾದಗಳು. ನನ್ನ ಮನವಿಗೆ ಸ್ಪಂದಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ರಾಯಭಾರ ಕಚೇರಿಯ ಅಧಿಕಾರಿಗಳಿಗೂ ಆಭಾರಿಯಾಗಿದ್ದೇನೆ. ಶುಕ್ರವಾರದೊಳಗೆ ವೀಸಾ ಸಿಗುವ ವಿಶ್ವಾಸವಿದೆ’ ಎಂದು ಸೈನಾ ಟ್ವೀಟ್‌ ಮಾಡಿದ್ದಾರೆ.

ಡೆನ್ಮಾರ್ಕ್‌ ಓಪನ್‌ ಟೂರ್ನಿಯು ಇದೇ ತಿಂಗಳ 15ರಿಂದ 20ರವರೆಗೆ ನಡೆಯಲಿದೆ. ಹಿಂದಿನ ಆವೃತ್ತಿಯಲ್ಲಿ ಸೈನಾ ರನ್ನರ್‌ ಅಪ್‌ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.