ADVERTISEMENT

ಸೇಂಟ್‌ ಲೂಯಿ ಟೂರ್ನಿ: ಅರೋನಿಯನ್ ಚಾಂಪಿಯನ್‌, ಗುಕೇಶ್‌ಗೆ ಜಂಟಿ 6ನೇ ಸ್ಥಾನ

ಪಿಟಿಐ
Published 16 ಆಗಸ್ಟ್ 2025, 13:20 IST
Last Updated 16 ಆಗಸ್ಟ್ 2025, 13:20 IST
   

ಸೇಂಟ್‌ ಲೂಯಿ (ಅಮೆರಿಕ): ಅಮೆರಿಕದ ಲೆವೋನ್ ಅರೋನಿಯನ್ ಅವರು ಸೇಂಟ್‌ ಲೂಯಿ ರ್‍ಯಾಪಿಡ್ ಮತ್ತು ಬ್ಲಿಟ್ಝ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಈ ಟೂರ್ನಿಯ ಕಣದಲ್ಲಿದ್ದ ಭಾರತದ ಏಕೈಕ ಆಟಗಾರ ಡಿ.ಗುಕೇಶ್‌ ಜಂಟಿ ಆರನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.

‌ವಿಶ್ವ ಚಾಂಪಿಯನ್ ಗುಕೇಶ್  ಟೂರ್ನಿಯ ಕೊನೆಯ ದಿನ ಮೊದಲ ನಾಲ್ಕು ಬ್ಲಿಟ್ಝ್ ಪಂದ್ಯಗಳಲ್ಲಿ 3.5 ಅಂಕ ಪಡೆದು ಪುನರಾಗಮನ ಮಾಡುವಂತೆ ಕಂಡಿತು. ಆದರೆ ಕೊನೆಯ ಐದು ಪಂದ್ಯಗಳಲ್ಲಿ ಮೂರನನ್ನು ಡ್ರಾ ಮಾಡಿಕೊಂಡ ಅವರು ಎರಡರಲ್ಲಿ ಸೋತು ಉತ್ತಮ ಆರಂಭದ ಲಾಭ ಪಡೆಯಲಾಗಲಿಲ್ಲ.

ರ‍್ಯಾಪಿಡ್‌ ಮತ್ತು ಬ್ಲಿಟ್ಝ್‌ನಲ್ಲಿ ಒಟ್ಟು 24.5 ಅಂಕ ಕಲೆಹಾಕಿದ ಅರೋನಿಯನ್ ಚಾಂಪಿಯನ್ ಆಗಿ ಟ್ರೋಫಿ ಜೊತೆ ₹35 ಲಕ್ಷ ನಗದು ಬಹುಮಾನ ಪಡೆದರು. ಜುಲೈನಲ್ಲಿ ಲಾಸ್‌ ವೇಗಸ್‌ ಫ್ರೀಸ್ಟೈಲ್‌ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ 42 ವರ್ಷ ವಯಸ್ಸಿನ ಅರೋನಿಯನ್ ಸತತ ಎರಡನೇ ಪ್ರಶಸ್ತಿ ಗೆದ್ದಂತಾಗಿದೆ.

ADVERTISEMENT

ಅಮೆರಿಕದ ಇನ್ನೊಬ್ಬ ಆಟಗಾರ ಫ್ಯಾಬಿಯಾನೊ ಕರುವಾನ (21.5) ಎರಡನೇ ಮತ್ತು ಅರ್ಧ ಪಾಯಿಂಟ್ ಅಂತರದಿಂದ ಹಿಂದೆಬಿದ್ದ ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ (21) ಮೂರನೇ ಸ್ಥಾನ ಗಳಿಸಿದರು. ನದಿರ್ಬೆಕ್‌ ಅಬ್ದುಸತ್ತಾರೋವ್‌ (20.5) ಮತ್ತು ವೆಸ್ಲಿ ಸೊ (19) ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಗಳಿಸಿದರು.

ಗುಕೇಶ್‌ 18 ಪಾಯಿಂಟ್‌ಗಳೊಡನೆ ಸವಾಲು ಮುಗಿಸಿದರು. ವಿಯೆಟ್ನಾಮಿನ ಲೀಮ್‌ ಲೆ ಕ್ವಾಂಗ್ ಸಹ ಇಷ್ಟೇ ಅಂಕ ಸಂಪಾದಿಸಿದರು.

ಶುಕ್ರವಾರ ಮೊದಲ ಪಂದ್ಯ ಡ್ರಾ ಮಾಡಿಕೊಂಡಿದ್ದ ಗುಕೇಶ್‌, ನಂತರ ಶಂಕ್ಲಾಂಡ್‌, ವೆಸ್ಲಿ ಸೊ ಮತ್ತು ಅಬ್ದುಸತ್ತಾರೋವ್ ಅವರನ್ನು ಮಣಿಸಿದ್ದರು. ಆದರೆ ಅದೇ ಲಯದಲ್ಲಿ ಸಾಗಲು ಸಾಧ್ಯವಾಗಲಿಲ್ಲ.

ಗುಕೇಶ್‌ ತಮ್ಮ ಮುಂದಿನ ಟೂರ್ನಿಯನ್ನು ಇನ್ನು ಎರಡೇ ದಿನಗಳಲ್ಲಿ ಸಿಂಕ್ವೆಫೀಲ್ಡ್‌ ಕಪ್‌ ಟೂರ್ನಿಯಲ್ಲಿ ಆಡಲಿದ್ದಾರೆ. ಅಲ್ಲಿ ಅವರ ಅಚ್ಚುಮೆಚ್ಚಿನ ಸಾಂಪ್ರದಾಯಿಕ ಮಾದರಿಯ ಪಂದ್ಯಗಳು ನಡೆಯಲಿವೆ. ಅವರನ್ನು ಭಾರತದ ಇನ್ನೊಬ್ಬ ಆಟಗಾರ ಪ್ರಜ್ಞಾನಂದ ಅವರೂ ಸೇರಿಕೊಳ್ಳಲಿದ್ದಾರೆ. ಈ ಟೂರ್ನಿಯೂ ಮಿಸ್ಸೋರಿಯಲ್ಲೇ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.