ಸೇಂಟ್ ಲೂಯಿ: ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರು ಸೇಂಟ್ ಲೂಯಿ ರ‍್ಯಾಪಿಡ್ ಮತ್ತು ಬ್ಲಿಟ್ಝ್ ಟೂರ್ನಿಯ ಬ್ಲಿಟ್ಝ್ ವಿಭಾಗದಲ್ಲಿ ಹಿನ್ನಡೆ ಕಂಡರು. ಗುರುವಾರ ಅವರು ಒಂದು ಪಂದ್ಯ ಮಾತ್ರ ಗೆದ್ದು, ನಾಲ್ಕು ಡ್ರಾ ಮಾಡಿಕೊಂಡು, ನಾಲ್ಕರಲ್ಲಿ ಸೋಲನುಭವಿಸಿ ಒಟ್ಟಾರೆ ಜಂಟಿ ಆರನೇ ಸ್ಥಾನಕ್ಕೆ ಸರಿದರು.
ಬ್ಲಿಟ್ಝ್ ವಿಭಾಗವು 18 ಸುತ್ತುಗಳನ್ನು ಒಳಗೊಂಡಿದ್ದು, ಗುರುವಾರ 9 ಸುತ್ತುಗಳು ನಡೆದವು. ಇದರಲ್ಲಿ ಅಮೆರಿಕದ ಲೆವೊನ್ ಅರೋನಿಯನ್ ಆರು ಅಂಕ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.
ರ್‍ಯಾಪಿಡ್ ಮತ್ತು ಬ್ಲಿಟ್ಝ್ ಸೇರಿ ಅರೋನಿಯನ್ ಅವರು ಒಟ್ಟು 19 ಅಂಕ ಸಂಗ್ರಹಿಸಿದ್ದಾರೆ. ಅಮೆರಿಕದ ಇನ್ನೊಬ್ಬ ಆಟಗಾರ ಫ್ಯಾಬಿಯಾನೊ ಕರುವಾನ (17) ಎರಡನೇ ಸ್ಥಾನದಲ್ಲಿದ್ದಾರೆ. ಫ್ರಾನ್ಸ್‌ನ ಗ್ರ್ಯಾಂಡ್‌ಮಾಸ್ಟರ್ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ (16.5) ಅವರು ಅಮೆರಿಕದ ಆಟಗಾರನ ಬೆನ್ನಟ್ಟಿದ್ದಾರೆ.
ರ್‍ಯಾಪಿಡ್‌ನಲ್ಲಿ ಹಿನ್ನಡೆ ಕಂಡಿದ್ದ ಉಜ್ಬೇಕ್ ಜಿಎಂ ನದಿರ್ಬೆಕ್ ಅಬ್ದುಸತ್ತಾರೋವ್ ಬ್ಲಿಟ್ಜ್ ವಿಭಾಗದಲ್ಲಿ ಪುಟಿದೆದ್ದು ಒಟ್ಟು 15 ಅಂಕ ಸಂಗ್ರಹಿಸಿದ್ದು, ಅಮೆರಿಕದ ವೆಸ್ಲಿ ಸೊ (15) ಜೊತೆ ನಾಲ್ಕನೇ ಸ್ಥಾನ ಹಂಚಿಕೊಂಡಿದ್ದಾರೆ.
ಗುಕೇಶ್ ಮತ್ತು ವಿಯೆಟ್ನಾಮ್‌ನ ಲೀಮ್ ಲೆ ಕ್ವಾಂಗ್ (ತಲಾ 13) ಅವರು ಆರನೇ ಸ್ಥಾನ ಹಂಚಿಕೊಂಡಿದ್ದಾರೆ.
ಒಟ್ಟು 10 ಆಟಗಾರರು ಕಣದಲ್ಲಿದ್ದಾರೆ.
ಗುಕೇಶ್ ಅವರು ಬ್ಲಿಟ್ಝ್ ವಿಭಾಗದಲ್ಲಿ ಮೊದಲ ದಿನ ತಮ್ಮ ಏಕೈಕ ಜಯವನ್ನು ಅಮೆರಿಕದ ಲೀನಿಯರ್ ಡೊಮಿಂಗೆಝ್ ಪೆರೆಝ್ ವಿರುದ್ಧ ಐದನೇ ಸುತ್ತಿನಲ್ಲಿ ದಾಖಲಿಸಿದರು. ಅವರು ಅರೋನಿಯನ್, ಸ್ಯಾಮ್ ಶಂಕ್ಲಾಂಡ್ (ಅಮೆರಿಕ), ಕರುವಾನ, ಗ್ರೆಗೊರಿ ಒಪಾರಿನ್ (ಅಮೆರಿಕ) ಜೊತೆ ಡ್ರಾ ಮಾಡಿಕೊಂಡರು. ಆದರೆ ವೆಸ್ಲಿ ಸೊ, ಅಬ್ದುಸತ್ತಾರೋವ್, ಲೀಮ್ ಮತ್ತು ವೇಷಿಯರ್ ಲಗ್ರಾವ್ ಅವರಿಗೆ ಸೋತರು.
ವೇಷಿಯರ್ ಲಗ್ರಾವ್ ಅವರು ಈ ವಿಭಾಗದಲ್ಲಿ ಅಜೇಯರಾಗುಳಿದರು. ಎರಡು ಪಂದ್ಯ ಗೆದ್ದ ಅವರು ಉಳಿದ ಏಳನ್ನು ಡ್ರಾ ಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.