ADVERTISEMENT

ಚಿನ್ನ ಗೆದ್ದ ಶ್ರೀಹರಿ, ಸಾಜನ್‌

ಬೆಲ್‌ಗ್ರೇಡ್‌ ಟ್ರೋಫಿ ಈಜು ಸ್ಪರ್ಧೆಗಳು: ಒಲಿಂಪಿಕ್ಸ್ ಅರ್ಹತೆ ಗಳಿಕೆಗೆ ಇನ್ನೂ ಕಾಯಬೇಕು

ಪಿಟಿಐ
Published 20 ಜೂನ್ 2021, 13:54 IST
Last Updated 20 ಜೂನ್ 2021, 13:54 IST
ಶ್ರೀಹರಿ ನಟರಾಜ್ –ಪ್ರಜಾವಾಣಿ ಸಂಗ್ರಹ ಚಿತ್ರ
ಶ್ರೀಹರಿ ನಟರಾಜ್ –ಪ್ರಜಾವಾಣಿ ಸಂಗ್ರಹ ಚಿತ್ರ   

ಬೆಲ್‌ಗ್ರೇಡ್‌, ಸರ್ಬಿಯ: ಈಜುಕೊಳದಲ್ಲಿ ಸಂಚಲನ ಮೂಡಿಸಿದ ಭಾರತದ ಶ್ರೀಹರಿ ನಟರಾಜ್‌ ಹಾಗೂ ಸಾಜನ್ ಪ್ರಕಾಶ್‌ ಅವರು ಬೆಲ್‌ಗ್ರೇಡ್‌ ಟ್ರೋಫಿ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಕೊರಳಿಗೇರಿಸಿಕೊಂಡರು. ಆದರೆ ಒಲಿಂಪಿಕ್ಸ್ ಟಿಕೆಟ್‌ ಗಳಿಸಲು ಬೇಕಾದ ‘ಎ’ ಅರ್ಹತೆ ಗಳಿಸಲು ವಿಫಲರಾದರು.

ಫಿನಾ ಮಾನ್ಯತೆ ಪಡೆದ ಈ ಒಲಿಂಪಿಕ್ಸ್ ಅರ್ಹತೆ ಸ್ಪರ್ಧೆಯಲ್ಲಿ ಕರ್ನಾಟಕದ ಶ್ರೀಹರಿ, ಶನಿವಾರ 100 ಮೀಟರ್ ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ 54.45 ಸೆಕೆಂಡುಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಗಳಿಸಿದರು.

ಕೇರಳದ ಪ್ರಕಾಶ್‌ 200 ಮೀ. ಬಟರ್‌ಫ್ಲೈ ವಿಭಾಗದಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. 1 ನಿಮಿಷ 56.96 ಸೆಕೆಂಡುಗಳಲ್ಲಿ ನಿಗದಿತ ಗುರಿ ಕ್ರಮಿಸಿದ ಅವರು ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು (1 ನಿ. 57.73 ಸೆ.) ಉತ್ತಮಪಡಿಸಿಕೊಂಡರು. 2018ರಲ್ಲಿ ಅವರು ಈ ದಾಖಲೆ ಸ್ಥಾಪಿಸಿದ್ದರು. ಕೇವಲ 0.48 ಸೆಕೆಂಡುಗಳಲ್ಲಿ ಟೋಕಿಯೊ ಕೂಟಕ್ಕೆ ಅರ್ಹತೆ ತಪ್ಪಿಸಿಕೊಂಡರು.

ADVERTISEMENT

ಈ ಇಬ್ಬರೂ ಈಜುಪಟುಗಳು ಈಗಾಗಲೇ ಒಲಿಂಪಿಕ್ಸ್ ‘ಬಿ’ ಅರ್ಹತೆ ಗಳಿಸಿದ್ದಾರೆ.

ಒಲಿಂಪಿಕ್ಸ್ ‘ಎ’ ಅರ್ಹತೆಗೆ, ಪುರುಷರ 200 ಮೀ. ಬಟರ್‌ಫ್ಲೈ ವಿಭಾಗದಲ್ಲಿ 1 ನಿಮಿಷ, 56.48 ಸೆಕೆಂಡು ಮಾನದಂಡ ನಿಗದಿಪಡಿಸಿದ್ದರೆ, 100 ಮೀ, ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ 53.85 ಸೆಕೆಂಡು ನಿಗದಿ ಮಾಡಲಾಗಿದೆ.

ಭಾರತದ ಯಾವುದೇ ಈಜುಪಟುಗಳು ಇದುವರೆಗೆ ‘ಎ‘ ಅರ್ಹತೆ ಗಳಿಸಿಲ್ಲ.

ಈ ಟೂರ್ನಿಯಲ್ಲಿ ಶನಿವಾರ ಶಾನ್ ಗಂಗೂಲಿ ಕೂಡ 400 ಮೀ. ಮೆಡ್ಲೆ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಮಹಿಳೆಯರ 50 ಮೀ. ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ಮಾನಾ ಪಟೇಲ್‌ (29.79 ಸೆ.) ಬೆಳ್ಳಿ ಗೆದ್ದರೆ, ಪುರುಷರ 200 ಮೀ. ಬಟರ್‌ಫ್ಲೈನಲ್ಲಿ ತನಿಶ್ ಮ್ಯಾಥ್ಯು (2 ನಿ. 13.55 ಸೆಕೆಂಡು) ಕಂಚು ತಮ್ಮದಾಗಿಸಿಕೊಂಡಿದ್ದರು.

ಪ್ರಕಾಶ್ ಮತ್ತು ಶ್ರೀಹರಿಗೆ ಒಲಿಂಪಿಕ್ಸ್ ಅರ್ಹತೆ ಗಿಟ್ಟಿಸಲು ಮತ್ತೊಂದು ಅವಕಾಶವಿದೆ. ಮುಂದಿನ ವಾರ ರೋಮ್‌ನಲ್ಲಿ ನಡೆಯುವ ಅರ್ಹತಾ ಕೂಟದಲ್ಲಿ ಅವರು ಟೋಕಿಯೊ ಟಿಕೆಟ್‌ಗೆ ಪ್ರಯತ್ನಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.