ADVERTISEMENT

ವಿಶ್ವ ವಿಕಲಾಂಗರ ಜೂನಿಯರ್‌ ಚೆಸ್‌: ಸಮರ್ಥ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 19:13 IST
Last Updated 16 ಜುಲೈ 2019, 19:13 IST
ಪ್ರಶಸ್ತಿಯೊಂದಿಗೆ ಸಮರ್ಥ್‌ ಜೆ.ರಾವ್‌
ಪ್ರಶಸ್ತಿಯೊಂದಿಗೆ ಸಮರ್ಥ್‌ ಜೆ.ರಾವ್‌   

ಬೆಂಗಳೂರು: ಕರ್ನಾಟಕದ ಸಮರ್ಥ್‌ ಜೆ.ರಾವ್ ಅವರು ಅಮೆರಿಕದ ನ್ಯೂಜರ್ಸಿಯಚೆರಿ ಹಿಲ್‌ನಲ್ಲಿ ಅಂಗವಿಕಲರಿಗಾಗಿ ನಡೆದ ಫಿಡೆ 3ನೇ ವಿಶ್ವ ಜೂನಿಯರ್‌ ಚೆಸ್‌ ಚಾಂಪಿಯನ್‌ಷಿಪ್‌ನ ದೈಹಿಕ ನ್ಯೂನತೆಯುಳ್ಳವರ ವಿಭಾಗ ದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಟೂರ್ನಿಯಲ್ಲಿ ಒಟ್ಟಾರೆ ಎರಡನೇ ಸ್ಥಾನ ಗೆದ್ದುಕೊಂಡಿದ್ದಾರೆ.

ಜುಲೈ 9 ರಿಂದ 14ರವರೆಗೆ ಈ ಟೂರ್ನಿ ನಡೆದಿತ್ತು. ಒಟ್ಟಾರೆ ವಿಭಾಗದಲ್ಲಿ ರಷ್ಯದ ಇಲಿಯ ಲಿಪಿಲಿನ್‌ 6.5 ಅಂಕ ಗಳಿಸಿ ಪ್ರಶಸ್ತಿ ಉಳಿಸಿಕೊಂಡರು. ಸಮರ್ಥ್‌ 5.5 ಅಂಕಗಳೊಡನೆ ಎರಡನೇ ಸ್ಥಾನ ಪಡೆದರು.

‘ಟೂರ್ನಿಯ ವೇಳೆ ಎಂ.ಪಿ.ಅಜಿತ್‌ ಮೈಸೂರಿನಿಂದ ಅನ್‌ಲೈನ್‌ ಮೂಲಕ ತರಬೇತಿ ನೀಡುತ್ತಿದ್ದರು. ಪಂದ್ಯದ ನಂತರ ನಡೆಗಳ ಬಗ್ಗೆ ವಿಶ್ಲೇಷಣೆಯನ್ನೂ ನಡೆಸುತ್ತಿದ್ದರು. ಚೆಸ್‌ಬೇಸ್‌ನ ಸಾಗರ್‌ ಶಾ ಅವರು ಚೆಸ್‌ ಮೆಗಾಡೇಟಾಬೇಸ್‌ ಜೊತೆ ₹ 51,000 ವೆನಿಸ್‌ಕೋವ್‌ ಸ್ಕಾಲರ್‌ಷಿಪ್‌ ನೀಡಿ ನೆರವಾದರು’ ಎಂದು ಸಮರ್ಥ್‌ ತಂದೆ ಜಗದೀಶ್‌ ರಾವ್‌ ಮಂಗಳವಾರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಅಮೆರಿಕದಲ್ಲಿ ಪಂದ್ಯಗಳು ಮಧ್ಯಾಹ್ನ ನಡೆಯುತ್ತಿದ್ದವು. ಟೂರ್ನಿಯ ಮಧ್ಯೆ ಮೂರು ದಿನ ಬೆಳಗಿನ ಅವಧಿಯಲ್ಲಿ ಜರ್ಮನಿಯ ಗ್ರ್ಯಾಂಡ್‌ಮಾಸ್ಟರ್‌ ಥಾಮಸ್‌ ಲೂಥರ್ ಅವರು ಆಟಗಾರರಿಗೆ ತರಬೇತಿ ನೀಡುತ್ತಿದ್ದರು’ ಎಂದು ಜಗದೀಶ್‌ ಮಾಹಿತಿ ನೀಡಿದರು.

ಹೊನ್ನಾವರದ ಎಸ್‌ಡಿಎಂ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ ಓದುತ್ತಿರುವ ಸಮರ್ಥ್‌, 2017ರಲ್ಲೂ ಎರಡು ಪ್ರಶಸ್ತಿ ಗೆದ್ದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.