ADVERTISEMENT

ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌: ಗೀತಾ ಸವಾಲು ಮೀರಿದ ಸರಿತಾ

ಸಂಗೀತಾ, ಪಿಂಕಿಗೆ ಚಿನ್ನ

ಪಿಟಿಐ
Published 12 ನವೆಂಬರ್ 2021, 14:12 IST
Last Updated 12 ನವೆಂಬರ್ 2021, 14:12 IST
ಸರಿತಾ ಮೊರ್ –ಟ್ವಿಟರ್ ಚಿತ್ರ
ಸರಿತಾ ಮೊರ್ –ಟ್ವಿಟರ್ ಚಿತ್ರ   

ಗೊಂಡಾ, ಉತ್ತರಪ್ರದೇಶ: ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಗೀತಾ ಪೋಗಟ್‌ ಅವರನ್ನು ಚಿತ್ ಮಾಡಿದ ಸರಿತಾ ಮೋರ್‌ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಶುಕ್ರವಾರ ನಡೆದ 59 ಕೆಜಿ ವಿಭಾಗದ ಫೈನಲ್‌ ಬೌಟ್‌ನಲ್ಲಿ ರೈಲ್ವೇಸ್‌ನ ಸರಿತಾ ಅವರಿಗೆ 8–0ಯಿಂದ ಹರಿಯಾಣದ ಗೀತಾ ಎದುರು ಗೆಲುವು ಒಲಿಯಿತು. ಪ್ರಮುಖ ಸ್ಪರ್ಧಿಗಳು ಎನಿಸಿಕೊಂಡಿದ್ದ ದಿವ್ಯಾ ಕಾಕ್ರನ್ ಹಾಗೂ ಸಾಕ್ಷಿ ಮಲಿಕ್ ಚಿನ್ನದ ಪದಕದಿಂದ ವಂಚಿತರಾದರೆ, ಸಂಗೀತಾ ಪೋಗಟ್‌ ಹಾಗೂ ಪಿಂಕಿ ವಿಜೇತರಾದರು.

ಮೂರು ಮಂದಿ ವಿಶ್ವಚಾಂಪಿಯನ್‌ಷಿಪ್ ಪದಕ ವಿಜೇತರು ಇದ್ದ 59 ಕೆಜಿ ವಿಭಾಗದ ಅತ್ಯಂತ ಸವಾಲಿನ ವಿಭಾಗಗಳಲ್ಲಿ ಒಂದಾಗಿತ್ತು. 2018ರ ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತೆ ಪೂಜಾ ದಂಡಾ ಈ ವಿಭಾಗದಲ್ಲೇ ಇದ್ದರು. ಗೀತಾ 2012ರ ಆವೃತ್ತಿಯಲ್ಲಿ ಕಂಚು ಗೆದ್ದಿದ್ದರು.

ADVERTISEMENT

ತಾಯ್ತನದ ವಿರಾಮ ತೆಗೆದುಕೊಂಡಿದ್ದ ಗೀತಾ ಮೂರು ವರ್ಷಗಳ ಬಳಿಕ ಕಣಕ್ಕಿಳಿದಿದ್ದರು. ಉತ್ತಮ ಸಾಮರ್ಥ್ಯ ತೋರಿದರೂ ಫೈನಲ್‌ನಲ್ಲಿ ಎಡವಿದರು. ಸರಿತಾ ತಾನು ಆಡಿದ ಮೂರೂ ಬೌಟ್‌ಗಳಲ್ಲಿ ಪಾರಮ್ಯ ಮೆರೆದರು. ಪೂಜಾ ಮಾತ್ರ ಅವರಿಗೆ ಸ್ವಲ್ಪ ಪ್ರತಿರೋಧ ತೋರಿದರು.

2012ರ ವಿಶ್ವ ಚಾಂಪಿಯನ್‌ಷಿಪ್ ಕಂಚು ವಿಜೇತೆ ಗೀತಾ ಎದುರು, ಚಿನ್ನದ ಪದಕದ ಸುತ್ತಿನಲ್ಲಿ ಸರಿತಾ ಚುರುಕಿನ ನಡೆಗಳ ಮೂಲಕ ಹೆಚ್ಚು ಆಕ್ರಮಣಕಾರಿಯಾದರು. ಈ ಹಂತದಲ್ಲಿ ಗೀತಾ ರಕ್ಷಣಾ ತಂತ್ರಗಳಿಗೆ ಮೊರೆ ಹೋಗಿದ್ದು ಮುಳುವಾಯಿತು. ಬೌಟ್‌ ಮೇಲಿನ ಹಿಡಿತವನ್ನು ಬಿಗಿಗೊಳಿಸುತ್ತಲೇ ಸಾಗಿದ ಸರಿತಾ ಪಾಯಿಂಟ್ಸ್ ಹೆಚ್ಚಿಸಿಕೊಂಡರು.

2017ರಲ್ಲಿ ಕೊನೆಯ ಬಾರಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿದ್ದ ಗೀತಾ ಅವರು ಸರಿತಾ ಎದುರು ಗೆದ್ದು ಚಿನ್ನ ತಮ್ಮದಾಗಿಸಿಕೊಂಡಿದ್ದರು.

ಗೀತಾ ಅವರ ಕಿರಿಯ ಸಹೋದರಿ ಸಂಗೀತಾ 62 ಕೆಜಿ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಇದೇ ವಿಭಾಗದಲ್ಲಿ ಸಾಕ್ಷಿ ಮಲಿಕ್‌ 1–6ರಿಂದ ಮನೀಷಾ ಎದುರು ಮಣಿದರು.

23 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಷಿಪ್ ಕಂಚು ವಿಜೇತೆ ದಿವ್ಯಾ ಕಾಕ್ರನ್ ಅವರು 72 ಕೆಜಿ ವಿಭಾಗದಲ್ಲಿ ಪಿಂಕಿ ಅವರಿಂದ ಸೋತರು. ಈ ವಿಭಾಗದ ಚಿನ್ನದ ಪದಕವು ಪಿಂಕಿ ಅವರ ಪಾಲಾಯಿತು. ಕುಲ್ವಿಂದರ್ ಬೆಳ್ಳಿ ಪದಕ ಗೆದ್ದುಕೊಂಡರು.

50 ಕೆಜಿ ವಿಭಾಗದಲ್ಲಿ ಶಿವಾನಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.