ಸಿಂಗಪುರ: ಭಾರತದ ಅಗ್ರಮಾನ್ಯ ಪುರುಷರ ಡಬಲ್ಸ್ ಆಟಗಾರರಾದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಈ ವರುಷದ ಮೊದಲ ಪ್ರಶಸ್ತಿ ಗೆಲ್ಲುವ ಹಾದಿಯಲ್ಲಿ ದಿಟ್ಟಹೆಜ್ಜೆಯಿಟ್ಟರು. ವಿಶ್ವದ ಅಗ್ರ ಕ್ರಮಾಂಕದ ಡಬಲ್ಸ್ ಆಟಗಾರರಾದ ಗೊ ಸ್ಜೆ ಫೀ– ನೂರ್ ಇಝ್ಝುದ್ದೀನ್ ಜೋಡಿಯನ್ನು ನೇರ ಗೇಮ್‌ಗಳಿಂದ ಸೋಲಿಸಿದ ಭಾರತದ ಜೋಡಿ ಸಿಂಗಪುರ ಓಪನ್ ಸೂಪರ್ 750 ಟೂರ್ನಿಯ ಸೆಮಿಫೈನಲ್ ತಲುಪಿತು.
ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸಾತ್ವಿಕ್– ಚಿರಾಗ್ ಜೋಡಿ 21–17, 21–15 ರಿಂದ ಮಲೇಷ್ಯಾದ ಜೋಡಿಯನ್ನು ಸೋಲಿಸಿತು.
ಫಿಟ್ನೆಸ್ ಎದುರಿಸುತ್ತಿದ್ದ ಭಾರತದ ಆಟಗಾರರು ಈ ವರ್ಷ ಹೆಚ್ಚಿನ ಟೂರ್ನಿಗಳಲ್ಲಿ ಆಡಿರಲಿಲ್ಲ. ಈ ವರ್ಷ ಇದು ಭಾರತದ ಜೋಡಿಗೆ ಮೂರನೇ ಸೆಮಿಫೈನಲ್ ಆಗಿದೆ. ಈ ವರ್ಷದ ಆರಂಭದಲ್ಲಿ ಇವರಿಬ್ಬರು ಮಲೇಷ್ಯಾ ಮತ್ತು ಇಂಡಿಯನ್ ಓಪನ್ ಟೂರ್ನಿಗಳಲ್ಲಿ ಸೆಮಿಫೈನಲ್ ತಲುಪಿದ್ದರು.
ಈ ಟೂರ್ನಿಯಲ್ಲಿ ಉತ್ತಮವಾಗಿ ಆಡುತ್ತಿರುವ ಇವರಿಬ್ಬರು ಎಂಟರ ಘಟ್ಟದ ಪಂದ್ಯದಲ್ಲಿ ಪ್ರಬಲ ರಕ್ಷಣೆಯ ಆಟ ಪ್ರದರ್ಶಿಸಿದರು. ಕರಾರುವಾಕ್ ಹೊಡೆತಗಳಿಂದ ಕೋರ್ಟ್‌ನ ಮುಂಭಾಗವನ್ನೂ ನಿಯಂತ್ರಿಸಿ 39 ನಿಮಿಷಗಳಲ್ಲಿ ಪಂದ್ಯ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.