
ಹಾಂಗ್‌ಝೌ: ಭಾರತದ ಅಗ್ರ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಶನಿವಾರ ಬಿಡಬ್ಲ್ಯುಎಫ್ ಬ್ಯಾಡ್ಮಿಂಟನ್ ವಿಶ್ವ ಟೂರ್ ಫೈನಲ್ಸ್‌ನ ಸೆಮಿಫೈನಲ್‌ನಲ್ಲಿ ಸೋತ ನಂತರ ಟೂರ್ನಿಯಿಂದ ಹೊರಬಿದ್ದರು.
ಎರಡನೇ ಶ್ರೇಯಾಂಕದ ಸಾತ್ವಿಕ್–ಚಿರಾಗ್ ಜೋಡಿಯು 21-10, 17-21, 13-21 ರಿಂದ ಚೀನಾದ ಲಿಯಾಂಗ್ ವೀ ಕೆಂಗ್ ಮತ್ತು ವಾಂಗ್ ಚಾಂಗ್ ವಿರುದ್ಧ ಮುಗ್ಗರಿಸಿತು.
ಮೊದಲ ಗೇಮ್‌ನಲ್ಲಿ ಪಾರಮ್ಯ ಮೆರೆದಿದ್ದ ಭಾರತದ ಆಟಗಾರರು ನಂತರದಲ್ಲಿ ಲಯ ತಪ್ಪಿದರು. ಒಂದು ಗಂಟೆ ಮೂರು ನಿಮಿಷಗಳ ಹೋರಾಟದಲ್ಲಿ ಜಯ ಸಾಧಿಸಿದ ಚೀನಾದ ಜೋಡಿಯು ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿತು. ಭಾನುವಾರ ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಸಿಯೊ ಸೆಯುಂಗ್-ಜೇ ಮತ್ತು ಕಿಮ್ ವೊನ್-ಹೋ ಅವರನ್ನು ಎದುರಿಸಲಿದೆ.
ಗುಂಪು ಹಂತದಲ್ಲಿ ಸಾತ್ವಿಕ್– ಚಿರಾಗ್ ಅವರು ಇದೇ ಎದುರಾಳಿಯನ್ನು ಮೂರು ಗೇಮ್‌ಗಳ ಹೋರಾಟದಲ್ಲಿ ಮಣಿಸಿದ್ದರು. ಬಿ ಗುಂಪಿನಲ್ಲಿ ತನ್ನ ಮೂರೂ ಪಂದ್ಯಗಳನ್ನು ಗೆದ್ದಿದ್ದ ಭಾರತದ ಜೋಡಿ ಅಗ್ರಸ್ಥಾನದೊಂದಿಗೆ ನಾಕೌಟ್ ಪ್ರವೇಶ ಪಡೆದಿತ್ತು.
ಋತುವಿನ ಅಂತ್ಯದ ಟೂರ್ನಿಯಲ್ಲಿ ಸಾತ್ವಿಕ್–ಚಿರಾಗ್ ಅವರು ಪುರುಷರ ಡಬಲ್ಸ್ ಸೆಮಿಫೈನಲ್ ತಲುಪಿದ ಭಾರತದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.