ADVERTISEMENT

ಎಫ್‌ಐಎಚ್ ಹಾಕಿ ಪ್ರೊ ಲೀಗ್‌: ಭಾರತ ಮಹಿಳಾ ತಂಡಕ್ಕೆ ಸವಿತಾ ನಾಯಕಿ

ರಾಣಿ ರಾಂಪಾಲ್‌ಗೆ ವಿಶ್ರಾಂತಿ; ಸಂಗೀತ ಕುಮಾರಿ ಹೊಸಮುಖ

ಪಿಟಿಐ
Published 21 ಫೆಬ್ರುವರಿ 2022, 11:29 IST
Last Updated 21 ಫೆಬ್ರುವರಿ 2022, 11:29 IST
ತಂಡಕ್ಕೆ ಆಯ್ಕೆಯಾದ ಆಟಗಾರ್ತಿಯರು (ಹಾಕಿ ಇಂಡಿಯಾ ಚಿತ್ರ)
ತಂಡಕ್ಕೆ ಆಯ್ಕೆಯಾದ ಆಟಗಾರ್ತಿಯರು (ಹಾಕಿ ಇಂಡಿಯಾ ಚಿತ್ರ)   

ನವದೆಹಲಿ: ಗೋಲ್‌ಕೀಪರ್ ಸವಿತಾ ಪೂನಿಯಾ ಇದೇ 26ರಂದು ಆರಂಭವಾಗಲಿರುವ ಎಫ್‌ಐಎಚ್‌ ಮಹಿಳೆಯರ ಹಾಕಿ ಪ್ರೊ ಲೀಗ್‌ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸುವರು.

22 ಮಂದಿಯನ್ನೊಳಗೊಂಡ ತಂಡವನ್ನು ಸೋಮವಾರ ಪ್ರಕಟಿಸಲಾಗಿದ್ದು ಗಾಯಗೊಂಡಿರುವ ರಾಣಿ ರಾಂಪಾಲ್ ಅವರಿಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ. ಸಂಗೀತ ಕುಮಾರಿ ಅವರನ್ನು ಮೊದಲ ಬಾರಿ ತಂಡಕ್ಕೆ ಕರೆಸಿಕೊಳ್ಳಲಾಗಿದೆ.

ಎಫ್‌ಐಎಚ್‌ ಹಾಕಿ ಪ್ರೊ ಲೀಗ್‌ನಲ್ಲಿ ಭಾರತಕ್ಕೆ ಇದು ಪದಾರ್ಪಣೆ ಆವೃತ್ತಿ. ಭುವನೇಶ್ವರದಲ್ಲಿ ನಡೆಯಲಿರುವ ಟೂರ್ನಿಯ ಎರಡು ಲೆಗ್‌ಗಳನ್ನು ಒಳಗೊಂಡ ಮೊದಲ ಹಣಾಹಣಿಯಲ್ಲಿ ಭಾರತ ತಂಡ ಸ್ಪೇನ್ ವಿರುದ್ಧ ಸೆಣಸಲಿದೆ. ಪಂದ್ಯಗಳು ಇದೇ 26 ಮತ್ತು 27ರಂದು ನಡೆಯಲಿವೆ.

ADVERTISEMENT

ರಾಣಿ ರಾಂಪಾಲ್ ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದಲ್ಲಿದ್ದಾರೆ. ಕಳೆದ ತಿಂಗಳು ಮಸ್ಕತ್‌ನಲ್ಲಿ ನಡೆದ ಏಷ್ಯಾ ಕಪ್‌ ಟೂರ್ನಿಯಲ್ಲೂ ತಂಡವನ್ನು ಸವಿತಾ ಮುನ್ನಡೆಸಿದ್ದರು. ಟೂರ್ನಿಯಲ್ಲಿ ಭಾರತ ಮೂರನೇ ಸ್ಥಾನ ಗಳಿಸಿತ್ತು. ಪ್ರೊ ಲೀಗ್‌ನಲ್ಲೂ ಅವರನ್ನೇ ಮುಂದುವರಿಸಲು ನಿರ್ಧರಿಸಲಾಗಿದ್ದು ದೀಪ್ ಗ್ರೇಸ್ ಎಕ್ಕಾ ಅವರಿಗೆ ಉಪನಾಯಕಿಯ ಜವಾಬ್ದಾರಿ ನೀಡಲಾಗಿದೆ.

ಸವಿತಾ ಅವರೊಂದಿಗೆ ರಜನಿ ಎತಿಮರ್ಪು ಮತ್ತು ಬಿಚ್ಚುದೇವಿ ಖಾರಿಬಂ ಅವರೂ ಗೋಲ್‌ಕೀಪರ್‌ಗಳ ಕಾರ್ಯನಿರ್ವಹಿಸಲು ಸಜ್ಜಾಗಿದ್ದಾರೆ. ಜಾರ್ಖಂಡ್‌ನ ಯುವ ಆಟಗಾರ್ತಿ, ಸ್ಟ್ರೈಕರ್‌ ಸಂಗೀತ ಹೊಸಮುಖ. ಏಷ್ಯಾಕಪ್ ಟೂರ್ನಿಗೆ ಆಯ್ಕೆ ಮಾಡಿದ ತಂಡದಲ್ಲಿದ್ದ ನಾಲ್ವರು ಹೊಸಬರನ್ನೂ ಉಳಿಸಿಕೊಳ್ಳಲಾಗಿದೆ.

ಬಿಚ್ಚುದೇವಿ, ಡಿಫೆಂಡರ್‌ ಇಶಿಕಾ ಚೌಧರಿ, ಮಿಡ್‌ಫೀಲ್ಡರ್ ನಮಿತಾ ಟೊಪ್ಪೊ ಮತ್ತು ಸ್ಟ್ರೈಕರ್‌ ರಾಜ್‌ವಿಂದರ್ ಕೌರ್ ಅವರನ್ನು ಹೆಚ್ಚುವರಿಯಾಗಿ ಸೇರಿಸಿಕೊಳ್ಳಲಾಗಿದೆ. ಕಾಯ್ದಿರಿಸಿದ ಆಟಗಾರ್ತಿಯರಾಗಿ ಐವರನ್ನು ಆಯ್ಕೆ ಮಾಡಲಾಗಿದೆ.

ತಂಡ:
ಸವಿತಾ (ನಾಯಕಿ),ಗೋಲ್‌ಕೀಪರ್‌ಗಳು: ಬಿಚ್ಚು ದೇವಿ ಖಾರಿಬಂ, ರಜನಿ ಎತಿಮರ್ಪು; ಡಿಫೆಂಡರ್‌ಗಳು: ದೀಪ್ ಗ್ರೇಸ್ ಎಕ್ಕ (ಉಪನಾಯಕಿ), ಗುರ್‌ಜೀತ್ ಕೌರ್‌, ನಿಕ್ಕಿ ಪ್ರಧಾನ್, ಉದಿತಾ, ಇಶಿಕಾ ಚೌಧರಿ; ಮಿಡ್‌ಫೀಲ್ಡರ್ಸ್‌: ನಿಶಾ, ಸಲೀಮಾ ಟೆಟೆ, ಸುಶೀಲಾ ಚಾನು, ಜ್ಯೋತಿ, ಮೋನಿಕಾ, ನೇಹಾ, ನವಜೋತ್‌ ಕೌರ್‌, ನಮಿತಾ ಟೊಪ್ಪೊ; ಫಾರ್ವರ್ಡರ್‌ಗಳು: ವಂದನಾ ಕಟಾರಿಯ, ಶರ್ಮಿಳ ದೇವಿ, ನವನೀತ್ ಕೌರ್‌, ಲಾಲ್‌ರೆಮ್ಸಿಯಾಮಿ, ಸಂಗೀತ ಕುಮಾರಿ, ರಾಜ್‌ವಿಂದರ್‌ ಕೌರ್‌; ಕಾಯ್ದಿರಿಸಿದ ಅಟಗಾರ್ತಿಯರು: ರಶ್ಮಿತ ಮಿನೆಜ್, ಅಕ್ಷತಾ ಅಬಾಸೊ ಢೆಕಲೆ, ಸೋನಿಕ, ಮರಿಯಾನ ಕುಜುರ್‌, ಐಶ್ವರ್ಯ ರಾಜೇಶ್‌ ಚವಾಣ್‌.

****

ಒಮನ್‌ನಿಂದ ಮರಳಿದ ನಂತರ ಉತ್ತಮ ಅಭ್ಯಾಸಕ್ಕೆ ಎರಡು ವಾರಗಳು ಲಭಿಸಿವೆ. ಹೀಗಾಗಿ ಆಟಗಾರ್ತಿಯರು ಹುರುಪಿನಲ್ಲಿದ್ದಾರೆ. ಸ್ಪೇನ್ ವಿರುದ್ಧ ಅಡಲು ಕಾತರರಾಗಿದ್ದಾರೆ.

-ಜಮೇಕ್ ಶಾಪ್‌ಮನ್‌ ಭಾರತ ತಂಡದ ಕೋಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.