ಬೆಂಗಳೂರು: ಇನ್ನು ಎಂಟು ತಿಂಗಳು ಗಳ ನಂತರ ನಡೆಯಲಿರುವ ಒಲಿಂ ಪಿಕ್ ಕ್ರೀಡೆಗಳಿಗಾಗಿ ಜಪಾನಿನ ಟೋಕಿ ಯೊದಲ್ಲಿ ಈಗಾಗಲೇ ಸುಸಜ್ಜಿತ ಕ್ರೀಡಾಂಗಣ ಸಿದ್ಧವಾಗಿದೆ. ಆ ಬೆಡಗಿನ ಭವನದಲ್ಲಿ ಕನ್ನಡನಾಡಿನ ಎಷ್ಟು ಕ್ರೀಡಾಪಟುಗಳು ಹೆಜ್ಜೆಗುರುತು ಮೂಡಿಸಲಿದ್ದಾರೆ?
ರಾಜ್ಯದ ಕ್ರೀಡಾವಲಯದಲ್ಲಿ ಯಾರಿಗಾದರೂ ಈ ಪ್ರಶ್ನೆ ಕೇಳಿದರೆ, ತಕ್ಷಣಕ್ಕೆ ಉತ್ತರ ಸಿಗುವುದಿಲ್ಲ. ಆದರೆ ಹತ್ತಾರು ಕಾರಣಗಳನ್ನು ನೀಡುತ್ತಾರೆ. ಅದರಲ್ಲೊಂದು ಪ್ರಮುಖ ಕಾರಣ, ಶಾಲಾ ಶಿಕ್ಷಣದಲ್ಲಿ ಕ್ರೀಡೆಗಳನ್ನು ಗಂಭೀರ ವಾಗಿ ಪರಿಗಣಿಸದೇ ಇರುವುದು. ಬೆಂಗಳೂರಿನಂತಹ ಊರಿನಲ್ಲಿಯೇ ಇರುವ ಸುಮಾರು 7,000 ಶಾಲೆಗಳ ಪೈಕಿ ಶೇ 40ರಷ್ಟರಲ್ಲಿ ಸುಸಜ್ಜಿತ ಕ್ರೀಡಾ ಮೈದಾನಗಳಿಲ್ಲ. ಸಲಕರಣೆಗಳೂ ಇಲ್ಲ. ಇದರಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆ ಎಂಬ ತಾರತಮ್ಯವೇನಿಲ್ಲ. ರಾಜ್ಯದಲ್ಲಿರುವ 1,300ಕ್ಕೂ ಹೆಚ್ಚು ಪಿಯು ಕಾಲೇ ಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕರ ಸಂಖ್ಯೆ 200 ಕೂಡ ದಾಟಿಲ್ಲ ಎಂದು ದೈಹಿಕ ಶಿಕ್ಷಣ ಇಲಾಖೆಯ ಮೂಲಗಳೇ ಹೇಳುತ್ತವೆ.
ರಾಜ್ಯ ಶಿಕ್ಷಣ ಇಲಾಖೆಯಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡೆಯು ಕೇವಲ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸುವುದಕ್ಕೆ ಮತ್ತು ಪದಕ ಗೆಲ್ಲುವುದಕ್ಕಷ್ಟೇ ಸೀಮಿತವಾಗಿದೆ. ಇನ್ನು ಒಲಿಂಪಿಕ್ಸ್ ಬಹಳ ದೂರದ ಮಾತಾಯಿತು.
‘ಎಸ್‌ಜಿಎಫ್‌ಐ ನಡೆಸುವ ರಾಷ್ಟ್ರೀಯ ಶಾಲಾ ಕ್ರೀಡೆಗಳಲ್ಲಿ ನಮ್ಮ ಸಾಧನೆ ಚೆನ್ನಾಗಿದೆ. ಪ್ರತಿವರ್ಷ ನಮ್ಮ ರಾಜ್ಯ ತಂಡಗಳು ಅಗ್ರ ಐದರಲ್ಲಿ ಸ್ಥಾನ ಪಡೆಯುತ್ತವೆ. ರಾಜ್ಯ ತಂಡದಲ್ಲಿ ನಮ್ಮ ಶಾಲೆಯ ಮಕ್ಕಳು ಇರಬೇಕು. ಅಷ್ಟರ ಮಟ್ಟಿಗೆ ನಾವು ಶ್ರಮವಹಿಸಿದರೆ, ಎಲ್ಲರೂ ಖುಷಿಪಡುತ್ತಾರೆ. ನಮಗೂ ಒಳ್ಳೆಯದು. ಅದಕ್ಕಿಂತ ಹೆಚ್ಚು ಇನ್ನೇನೂ ಬೇಡ’ ಎಂದು ಕೆಲವು ದೈಹಿಕ ಶಿಕ್ಷಣ ಶಿಕ್ಷಕರೇ ಹೇಳುತ್ತಾರೆ.
12 ವರ್ಷಗಳ ಹಿಂದೆ ದೈಹಿಕ ಶಿಕ್ಷಣ ತಜ್ಞ ವೈದ್ಯನಾಥನ್ ಸಮಿತಿಯು ನೀಡಿದ ವರದಿಯ ಭಾಗವಾಗಿ ಶಿಕ್ಷಣದಲ್ಲಿ ದೈಹಿಕ ಶಿಕ್ಷಣ ಪಠ್ಯಕ್ರಮ ಸೇರಿಸಲಾಯಿತು. ಧಾರವಾಡದ ಮಲ್ಲಸಜ್ಜನ ಆರೋಗ್ಯ ಶಿಕ್ಷಣ ಸಂಸ್ಥೆ ನಿರ್ದೇಶಕರ ಆನಂದ್ ನಾಡಗೀರ್ ನೇತೃತ್ವದಲ್ಲಿ ಪಠ್ಯಪುಸ್ತಕವನ್ನೂ ಸಿದ್ಧಪಡಿಸಿ ಜಾರಿಗೊಳಿಸಲಾಯಿತು.
‘ದೈಹಿಕ ಶಿಕ್ಷಣದ ಅರ್ಥವ್ಯಾಪ್ತಿ ದೊಡ್ಡದು. ಕ್ರೀಡೆಯ ಮಾಧ್ಯಮದ ಮೂಲಕ ಜೀವನದ ಪಾಠ ಹೇಳುವ ಸಮಗ್ರ ವ್ಯಕ್ತಿತ್ವ ವಿಕಸನದ ಧ್ಯೇಯ ಅದರದ್ದು. ಆರೋಗ್ಯವಂತ ದೇಹವಿ ರುವ ವ್ಯಕ್ತಿಯು ತನ್ನ ಆಸಕ್ತಿಯ ರಂಗದಲ್ಲಿ ಬೆಳೆಯುತ್ತಾನೆ. ಆದರೆ, ತಮ್ಮ ಶಾಲೆಯ ತಂಡದ ಗೆಲುವು, ಎಸ್‌ಜಿಎಫ್‌ಐ ಕೂಟದಲ್ಲಿ ಭಾಗವಹಿಸುವಿಕೆಗೆ ಮಾತ್ರ ಸೀಮಿತವಾಗುತ್ತಿದೆ’ ಎಂದು ಆನಂದ್ ನಾಡಗೀರ್ ಹೇಳು ತ್ತಾರೆ. ದೈಹಿಕ ಪಠ್ಯಕ್ರಮ ಜಾರಿಯಾದ ನಂತರ ಅದರಿಂದಾದ ಪ್ರಯೋಜನಗಳ ಬಗ್ಗೆಯೂ ಸಮೀಕ್ಷೆ ನಡೆಸಬೇಕು ಎಂದು ಅವರು ಸಲಹೆ ನೀಡುತ್ತಾರೆ.
ಚೀನಾ, ಯುರೋಪ್, ಅಮೆರಿಕ, ಕೊರಿಯಾ ಮತ್ತು ಜಪಾನ್‌ನಲ್ಲಿ ಶಾಲೆಗೆ ವಿದ್ಯಾಭ್ಯಾಸಕ್ಕಾಗಿ ಸೇರುವ ಮಕ್ಕಳಿಗೆ ಆಯಾ ದೇಶಗಳ ಪ್ರಮುಖ ಕ್ರೀಡೆಗಳನ್ನು ಆಯ್ಕೆ ಮಾಡಿಕೊಂಡು ಅಭ್ಯಾಸ ಮಾಡಿಸುವ ಕ್ರಮವಿದೆ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಎಳೆಯ ವಯಸ್ಸಿನಿಂದಲೇ ಅವರನ್ನು ಬೆಳೆಸುತ್ತಾರೆ. ಅದಕ್ಕಾಗಿಯೇ ಅಮೆರಿಕದ ಬಾಲಕಿ ಸಿಮೋನೆ ಬೈಲ್ಸ್ 16ನೇ ವಯಸ್ಸಿನಲ್ಲಿಯೇ ಒಲಿಂಪಿಕ್ಸ್‌ನಲ್ಲಿ ಜಿಮ್ನಾಸ್ಟಿಕ್ಸ್ ಚಿನ್ನ ಗೆಲ್ಲಲು ಸಾಧ್ಯವಾಗಿದ್ದು.
ಆದರೆ ಇಲ್ಲಿ ಶಾಲಾ ಕ್ರೀಡೆಗಳು ನಡೆಯುವ ಪರಿಯನ್ನು ನೋಡಬೇಕು. ದೆಹಲಿಯ ಋತುಮಾನಕ್ಕೆ ಹೊಂದು ವಂತಹ ವೇಳಾಪಟ್ಟಿ ಸಿದ್ಧವಾಗುತ್ತದೆ. ಅದರಿಂದಾಗಿ ದಕ್ಷಿಣ ಭಾರತದಲ್ಲಿ ಮಳೆಗಾಲವಿದ್ದಾಗಲೇ ತಾಲ್ಲೂಕು, ಜಿಲ್ಲೆ, ರಾಜ್ಯ ಮಟ್ಟದ ಕೂಟಗಳು ನಡೆಯಲೇಬೇಕಾದ ಪರಿಸ್ಥಿತಿ. ಕೆಸರು ತುಂಬಿರುವ, ಜಾರುವ ಕ್ರೀಡಾಂಗಣದಲ್ಲಿ ನಡೆಯುವ ಪ್ರಾಥಮಿಕ, ಪ್ರೌಢಶಾಲಾ ಕೂಟದಲ್ಲಿ ಜಾರಿ ಬೀಳದವನೇ ಜಾಣ!
ಬರಿಗಾಲಿನಲ್ಲಿಯೇ ಓಡುವ, ಜಿಗಿ ಯುವ ಮಕ್ಕಳ ಸ್ಥಿತಿ ದೇವರಿಗೇ ಪ್ರೀತಿ. ಪ್ರತಿವರ್ಷ ನಡೆಯುವ ಈ ಕೂಟಗಳ ಕ್ರೀಡೆಗಳ ಕುರಿತ ಅಂಕಿ ಅಂಶಗಳ ನಿರ್ವಹಣೆಯಂತೂ ಇಲ್ಲ. ಒಟ್ಟಾರೆ ತಂಡಗಳು ರಚನೆಯಾಗಿ ಹೋದರೆ ಸಾಕೆಂಬ ಪ್ರಹಸನ ನಡೆಯುತ್ತದೆ. ಇನ್ನು ರಾಜ್ಯದ ಬಹುತೇಕ ನಗರಗಳಲ್ಲಿರುವ ಎಷ್ಟೋ ಶಾಲೆಗಳಿಗೆ ಮೈದಾನಗಳೂ ಇಲ್ಲ, ಒಳಾಂಗಣ ಕ್ರೀಡಾಂಗಣಗಳೂ ಇಲ್ಲ. ಇದ ರಿಂದಾಗಿ ತಮ್ಮ ಮೂಲಭೂತ ಹಕ್ಕಿನಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ.
ಪಕ್ಕದ ಕೇರಳ, ತಮಿಳುನಾಡು, ಹರಿಯಾಣ, ಪಂಜಾಬ್, ಉತ್ತರ ಪ್ರದೇಶದ ಬಹಳಷ್ಟು ಕ್ರೀಡಾಪಟುಗಳು ಈಗಾಗಲೇ ತಮ್ಮ ಒಲಿಂಪಿಕ್ಸ್ ಸೀಟು ಗಿಟ್ಟಿಸಿಕೊಂಡಿದ್ದಾರೆ. ಆಯಾ ರಾಜ್ಯಗಳಲ್ಲಿರುವ ಶಾಲಾ ಕ್ರೀಡೆಗಳ ವ್ಯವಸ್ಥೆಯು ಅವರನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಆದರೆ, ಅವರ ಮಟ್ಟಕ್ಕೆ ಏರಲು ನಮಗಿನ್ನೆಷ್ಟು ಕಾಲ ಬೇಕೋ?
ಸರ್ಕಾರಿ ಶಾಲೆಗಳಲ್ಲಿ ಮೈದಾನ ಕೊರತೆ ಇಲ್ಲ: ಸುರೇಶ್ ಕುಮಾರ್
ಸರ್ಕಾರಿ ಶಾಲೆಗಳಲ್ಲಿ ಮೈದಾನಗಳು ಇವೆ. ಖಾಸಗಿ ಶಾಲೆಗಳಿಗೂ ಇಂತಿಷ್ಟು ಜಾಗ ಇರಬೇಕು ಎಂಬ ನಿಯಮ ಇದೆ. ಇಲ್ಲದಿದ್ದರೆ ಅನುಮತಿ ಕೊಡುವುದಿಲ್ಲ. ಬೆಂಗಳೂರಿನಲ್ಲಿ ಶಾಲೆ ಆರಂಭಿಸಲು ಕನಿಷ್ಠ ಒಂದು ಎಕರೆ ಜಾಗ ಇರಬೇಕು. ಈ ನಿಯಮ ಜಾರಿಗೂ ಮುನ್ನ ಆರಂಭಗೊಂಡ ಶಾಲೆಗಳಲ್ಲಿ ಮೈದಾನಗಳ ಕೊರತೆ ಇರಬಹುದು. ಆದರೆ ಈಗ ನಿಯಮ ಕಟ್ಟುನಿಟ್ಟಾಗಿದೆ. ಶಾಲೆಯಲ್ಲಿ 200 ಮಕ್ಕಳು ಇದ್ದರೆ ಮಾತ್ರ ಒಬ್ಬ ದೈಹಿಕ ಶಿಕ್ಷಣ ಶಿಕ್ಷಕ ಇರಬೇಕೆಂಬ ನಿಯಮ ಇದೆ. ಆದರೆ ಕಡಿಮೆ ಸಂಖ್ಯೆಯ ಮಕ್ಕಳಿರುವ ಶಾಲೆಗಳಲ್ಲೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ಮಾಡಲು ನಿಯಮ ಪರಿಷ್ಕರಣೆಗೆ ಚಿಂತನೆ ನಡೆದಿದೆ.
ಎಸ್. ಸುರೇಶ್ ಕುಮಾರ್,ಶಿಕ್ಷಣ ಸಚಿವ
ನಗರಗಳ ಬಹುತೇಕ ಶಾಲೆಗಳಲ್ಲಿ ಮೈದಾನ ಮತ್ತು ಮೂಲ ಸೌಲಭ್ಯಗಳ ಕೊರತೆಯಿಂದಾಗಿ ದೈಹಿಕ ಶಿಕ್ಷಣ ಜಾರಿಗೆ ಹಿನ್ನಡೆಯಾಗಿದೆ.
-ಆನಂದ್ ನಾಡಗೀರ್, ನಿರ್ದೇಶಕರು, ಮಲ್ಲಸಜ್ಜನ ದೈಹಿಕ ಶಿಕ್ಷಣ ಸಂಸ್ಥೆ, ಧಾರವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.