
ಬೆಂಗಳೂರು: ಕನ್ನಡಿಗ ಕಿಶನ್ ಗಂಗೊಳ್ಳಿ ಅವರು ಕಜಾಕಸ್ತಾನದ ಅಸ್ತಾನಾದಲ್ಲಿ ನಡೆದ ದೈಹಿಕ ನ್ಯೂನತೆಯಳ್ಳವರಿಗಾಗಿ ನಡೆದ ಎರಡನೇ ಫಿಡೆ ಚೆಸ್ ಒಲಿಂಪಿಯಾಡ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಮೂರನೇ ಬೋರ್ಡ್‌ನಲ್ಲಿ ನೀಡಿದ ಉತ್ತಮ ಆಟಕ್ಕೆ ಅವರಿಗೆ ಚಿನ್ನದ ಪಕದ ಒಲಿದಿದೆ.
ಈ ತಿಂಗಳ 19 ರಿಂದ 26ರವರೆಗೆ ನಡೆದ ಟೂರ್ನಿಯಲ್ಲಿ ಅಜೇಯರಾಗುಳಿದ ಅವರು ಆರು ಸುತ್ತುಗಳಿಂದ ಐದು ಪಾಯಿಂಟ್ಸ್ (4 ಗೆಲುವು, 2 ಡ್ರಾ) ಕಲೆಹಾಕಿದರು. ಆದರೆ ಭಾರತ ತಂಡ 12ನೇ ಸ್ಥಾನ ಗಳಿಸಲಷ್ಟೇ ಶಕ್ತವಾಯಿತು. 2023ರಲ್ಲಿ ನಡೆದ ಈ ಹಿಂದಿನ ಒಲಿಂಪಿಯಾಡ್‌ನಲ್ಲಿ ಭಾರತ ನಾಲ್ಕನೇ ಸ್ಥಾನ ಪಡೆದಿತ್ತು.
ಈ ಬಾರಿ 34 ತಂಡಗಳು ಕಣದಲ್ಲಿದ್ದವು. ರಷ್ಯಾ ಆಟಗಾರರಿಗೆ ಫಿಡೆ (1) ತಂಡ ಮೊದಲ ಸ್ಥಾನ ಪಡೆದರೆ, ಪೋಲೆಂಡ್ ಎರಡನೇ ಸ್ಥಾನ ಗಳಿಸಿತು.
ತಿಂಗಳ ಹಿಂದೆಷ್ಟೇ ಬೆಂಗಳೂರಿನಲ್ಲಿ ಸಹಕಾರ ಲೆಕ್ಕಪರಿಶೋಧಕ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ನೇಮಕಗೊಂಡ ಕಿಶನ್ ಅವರು ಸರ್ಬಿಯಾದಲ್ಲಿ ನಡೆದಿದ್ದ ಮೊದಲ ಒಲಿಂಪಿಯಾಡ್‌ನಲ್ಲಿ ವೈಯಕ್ತಿಕ ಆಟಕ್ಕೆ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.
‘ಚಿನ್ನದ ಪದಕ ನಿರೀಕ್ಷಿಸಿರಲಿಲ್ಲ. ಕರ್ತವ್ಯಕ್ಕೆ ಹಾಜರಾದ ಬಳಿಕ ಈ ಟೂರ್ನಿಗೆ ಸಿದ್ಧತೆ ನಡೆಸಲು ನನಗೆ ಎರಡು ವಾರಗಳ ಅವಧಿಯಷ್ಟೇ ಲಭಿಸಿತ್ತು’ ಎಂದು ಶಿವಮೊಗ್ಗದವರಾದ ಕಿಶನ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.