ADVERTISEMENT

ಜಪಾನ್‌ ಓಪನ್‌: ಹೋರಾಡಿ ಸೋತ ಲಕ್ಷ್ಯ ಸೇನ್

ಫೈನಲ್‌ಗೆ ಕ್ರಿಸ್ಟಿ– ಆಕ್ಸೆಲ್ಸನ್‌

ಪಿಟಿಐ
Published 29 ಜುಲೈ 2023, 22:11 IST
Last Updated 29 ಜುಲೈ 2023, 22:11 IST
ಇಂಡೋನೇಷ್ಯಾದ ಜೊನಾಟನ್ ಕ್ರಿಸ್ಟಿ –ಎಪಿ ಚಿತ್ರ
ಇಂಡೋನೇಷ್ಯಾದ ಜೊನಾಟನ್ ಕ್ರಿಸ್ಟಿ –ಎಪಿ ಚಿತ್ರ   

ಟೋಕಿಯೊ: ಭಾರತದ ಲಕ್ಷ್ಯ ಸೇನ್‌ ಅವರು ಜಪಾನ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ವೀರೋಚಿತ ಸೋಲು ಅನುಭವಿಸಿದರು. ಲಕ್ಷ್ಯ, ಮೂರು ಗೇಮ್‌ಗಳನ್ನು ಕಂಡ ಸೆಣಸಾಟದಲ್ಲಿ ಏಷ್ಯನ್ ಗೇಮ್ಸ್ ಚಾಂಪಿಯನ್ ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿ ಅವರಿಗೆ ಮಣಿದರು.

ಶನಿವಾರ ನಡೆದ ಪಂದ್ಯದಲ್ಲಿ ವಿಶ್ವದ 13ನೇ ಕ್ರಮಾಂಕದ ಸೇನ್‌ 68 ನಿಮಿಷಗಳ ಹಣಾಹಣಿಯಲ್ಲಿ ವಿಶ್ವದ 9ನೇ ಕ್ರಮಾಂಕದ ಆಟಗಾರನಿಗೆ 15–21, 21–13, 16–21ರಿಂದ ಶರಣಾದರು. ಈ ಮೂಲಕ ಜಪಾನ್‌ ಓಪನ್‌ ಟೂರ್ನಿಯಲ್ಲಿ ಭಾರತದ ಆಟಗಾರರ ಸವಾಲು ಅಂತ್ಯಗೊಂಡಿದೆ.

ಆರಂಭದಲ್ಲಿ ಕ್ರಿಸ್ಟಿ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದರು. ಇದರ ಲಾಭ ಪಡೆದ ಸೇನ್‌ 7–4 ರಿಂದ ಮುನ್ನಡೆ ಪಡೆದರೂ ನಂತರ ಸೈಡ್‌ಲೈನ್‌ಲ್ಲಿ ಮಾಡಿದ ತಪ್ಪುಗಳಿಂದಾಗಿ ಹಿನ್ನಡೆ ಅನುಭವಿಸಬೇಕಾಯಿತು.

ADVERTISEMENT

ಮೊದಲ ಗೇಮ್‌ ಅನ್ನು ಸೋತರೂ ಎರಡನೇ ಗೇಮ್‌ನಲ್ಲಿ ಪುಟಿದೆದ್ದ ಸೇನ್‌, ಪ್ರಬಲ ಹೊಡೆತಗಳ ಮೂಲಕ ಮೇಲುಗೈ ಸಾಧಿಸಿ 1–1ರ ಸಮಬಲ ಸಾಧಿಸಿದರು. ಆದರೆ, ನಿರ್ಣಾಯಕ ಗೇಮ್‌ನಲ್ಲಿ ಐದನೇ ಶ್ರೇಯಾಂಕದ ಇಂಡೋನೇಷ್ಯಾದ ಆಟಗಾರ ರಕ್ಷಣಾತ್ಮಕ ಆಟದೊಂದಿಗೆ ಹಿಡಿತ ಸಾಧಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿದರು.

ಇದೇ ತಿಂಗಳ ಆರಂಭದಲ್ಲಿ ಲಕ್ಷ್ಯ ಸೇನ್‌ ಕೆನಡಾ ಓಪನ್‌ ಚಾಂಪಿಯನ್‌ ಆಗಿದ್ದರು. ಅಮೆರಿಕ ಓಪ‍ನ್‌ನಲ್ಲೂ ಸೆಮಿಫೈನಲ್‌ ಪ್ರವೇಶಿಸಿದ್ದರು.

ಜೊನಾಥನ್‌ ಫೈನಲ್‌ನಲ್ಲಿ ಅಗ್ರ ಕ್ರಮಾಂಕದ ವಿಕ್ಟರ್‌ ಆಕ್ಸೆಲ್ಸನ್‌ ಅವರನ್ನು ಎದುರಿಸಲಿದ್ದಾರೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಡೆನ್ಮಾರ್ಕ್‌ನ ಆಕ್ಸೆಲ್ಸನ್ 21–11, 21–11 ರಿಂದ ಜಪಾನ್‌ನ ಕೊಡೈ ನರವೋಕಾ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.