ADVERTISEMENT

BWF ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಸೇನ್‌ ಮುನ್ನಡೆ, ಸಿಂಧು ನಿರ್ಗಮನ

ಪಿಟಿಐ
Published 22 ಆಗಸ್ಟ್ 2023, 20:14 IST
Last Updated 22 ಆಗಸ್ಟ್ 2023, 20:14 IST
ಲಕ್ಷ್ಯ ಸೇನ್‌
ಲಕ್ಷ್ಯ ಸೇನ್‌   

ಕೋಪನ್‌ಹೆಗನ್‌: ಮಾಜಿ ಚಾಂಪಿಯನ್‌ ಭಾರತದ ಪಿ.ವಿ. ಸಿಂಧು ಅವರು ಮಂಗಳವಾರ ನಡೆದ ಬಿಡಬ್ಲ್ಯುಎಫ್‌ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ನೇರ ಗೇಮ್‌ಗಳಿಂದ ಪರಾಭವಗೊಂಡು, ಟೂರ್ನಿಯಿಂದ ಹೊರಬಿದ್ದರು. ಲಕ್ಷ್ಯ ಸೇನ್‌ ಅವರು ಪುರುಷರ ಸಿಂಗಲ್ಸ್‌ನಲ್ಲಿ ಮೂರನೇ ಸುತ್ತು ಪ್ರವೇಶಿಸಿದರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಚಿನ್ನ ಸೇರಿದಂತೆ 5 ಪದಕಗಳನ್ನು ತಂದುಕೊಟ್ಟಿದ್ದ ಸಿಂಧು ಅವರಿಗೆ ಮೊದಲ ಸುತ್ತಿನಲ್ಲಿ ‘ಬೈ’ ದೊರಕಿತ್ತು. ಎರಡನೇ ಸುತ್ತಿನಲ್ಲಿ 16ನೇ ಕ್ರಮಾಂಕದ ಅವರು ಜಪಾನ್‌ನ ನೊಜೊಮಿ ಒಕುಹರಾ ವಿರುದ್ಧ 14–21, 14–21ರಿಂದ ಪರಾಭವಗೊಂಡರು. ಇದೇ ಮೊದಲ ಬಾರಿಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ತಲುಪದೆ ಹೊರಬಿದ್ದಿದ್ದಾರೆ.

ಗಾಯದ ಕಾರಣದಿಂದ ಕಳೆದ ಆವೃತ್ತಿಯಿಂದ ದೂರ ಉಳಿದಿದ್ದ ಸಿಂಧು, ಈ ಆವೃತ್ತಿಯಲ್ಲಿ ಉತ್ಸಾಹದಿಂದ ಕಣಕ್ಕೆ ಇಳಿದಿದ್ದರು. 110 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಎದುರಾಳಿ ಆಟಗಾರ್ತಿಯ ಚುರುಕಿನ ಆಟದ ಎದುರು ಮುಗ್ಗರಿಸಿದರು. ಎರಡನೇ ಗೇಮ್‌ನಲ್ಲಿ ಆರಂಭದಲ್ಲಿ 9–0 ಮುನ್ನಡೆ ‍ಪಡೆದು, ಪ್ರತಿರೋಧ ತೋರಿದರೂ ನಂತರ ಮೇಲುಗೈ ಸಾಧಿಸಲು ವಿಫಲವಾದರು.

ADVERTISEMENT

2021ರ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದಿರುವ ಸೇನ್‌ 21–11, 21–12ರಿಂದ ಕೊರಿಯಾದ ಜಿಯೋನ್ ಹ್ಯೊಕ್ ಜಿನ್ ಅವರನ್ನು ಪರಾಭವಗೊಳಿಸಿದರು. ವಿಶ್ವದ 11ನೇ ಕ್ರಮಾಂಕದ ಭಾರತದ ಆಟಗಾರನಿಗೆ ಮುಂದಿನ ಸುತ್ತಿನಲ್ಲಿ ಮೂರನೇ ಶ್ರೇಯಾಂಕದ ಕುನ್ಲವುಟ್ ವಿಟಿಡ್ಸರ್ನ್ (ಥಾಯ್ಲೆಂಡ್‌) ಎದುರಾಗುವ ಸಾಧ್ಯತೆ ಇದೆ.

ಸೇನ್‌ ಪಂದ್ಯದ ಆರಂಭದಿಂದಲೇ ನಿಖರವಾದ ಹೊಡೆತಗಳ ಮೂಲಕ ಅಂತ್ಯದವರೆಗೂ ಹಿಡಿತ ಸಾಧಿಸಿ, 16ರ ಘಟ್ಟವನ್ನು ಪ್ರವೇಶಿಸಿದರು. 2022ರ ಏಷ್ಯಾ ಟೀಮ್‌ ಚಾಂಪಿಯನ್‌ಷಿಪ್‌ನಲ್ಲಿ ಸೇನ್‌ ಅವರನ್ನು ಜಿಯೋನ್ ಮಣಿಸಿದ್ದರು. ಅಂದಿನ ಮುಯ್ಯಿಯನ್ನು ಸೇನ್‌ ತೀರಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.