ಮಂಗಳೂರು: ಮಂಗಳೂರಿನ ಶರಣ್ ರಾವ್ ಅವರು ಇಟಲಿಯಲ್ಲಿ ಗುರುವಾರ ಮುಕ್ತಾಯಗೊಂಡ ಇಂಟರ್‌ನ್ಯಾಷನಲ್ ಡಿ ಸ್ಕಾಚಿ ಫೆಸ್ಟಿವಲ್ ಚೆಸ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಗಳಿಸಿದ್ದಾರೆ. ಮೊಟೆಸಿಲ್ವಾನಾಗ್ರ್ಯಾಂಡ್ ಹೋಟೆಲ್ ಅಡ್ರಿಯಾಟಿಕೊದಲ್ಲಿ ನಡೆದ ಟೂರ್ನಿಯ ಎಂಟು ಸುತ್ತುಗಳಲ್ಲಿ ಒಟ್ಟು 6.5 ಪಾಯಿಂಟ್ ಕಲೆ ಹಾಕಿರುವ ಫಿಡೆ ಮಾಸ್ಟರ್ ಶರಣ್ ಈ ಗೆಲುವಿನೊಂದಿಗೆ ಇಂಟರ್‌ನ್ಯಾಷನಲ್ ಮಾಸ್ಟರ್ ಎರಡನೇ ನಾರ್ಮ್ ಕಲೆ ಹಾಕಿದ್ದಾರೆ.
ಅಂತಿಮ ಸುತ್ತಿನಲ್ಲಿ ಶರಣ್ ಸ್ಥಳೀಯ ಆಟಗಾರ ಲೊಯಕಾನೊ ಲಿಯೊನಾರ್ಡೊ ವಿರುದ್ಧ ಗೆದ್ದು ಪೂರ್ಣ ಪಾಯಿಂಟ್ ಕಲೆಹಾಕುವುದರೊಂದಿಗೆ ಪ್ರಶಸ್ತಿ ತಮ್ಮದಾಗಿಸಿಕೊಂಡರು.ಇಟಲಿಯ ಇಂಟರ್‌ನ್ಯಾಷನಲ್ ಮಾಸ್ಟರ್ ಅಘಯೆವ್ ಮಿರಾಗ 6 ಪಾಯಿಂಟ್ ಗಳಿಸಿ ರನ್ನರ್ ಅಪ್ ಪಟ್ಟ ತಮ್ಮದಾಗಿಸಿಕೊಂಡರು. 5.5 ಪಾಯಿಂಟ್ ಗಳಿಸಿದ ಇಟಲಿಯ ಲೊಯಕಾನೊ ಆ್ಯಂಟೊನಿಯೊ ಮೂರನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು.
ಇಟಲಿಯ ಆ್ಯಂಟೊನಿಯೊ ನೆರಿ, ಒರ್ಫಿನಿ ನಿಕೊಲೊ ಮತ್ತು ಮಾರ್ಟಿನೆರಿ ವಲೆರಿಯಾ ಕೂಡ ತಲಾ 5.5 ಪಾಯಿಂಟ್ ಗಳಿಸಿದ್ದಾರೆ.
ಮೊದಲ ಸುತ್ತಿನಲ್ಲಿ ಶರಣ್ ಇಟಲಿಯ ಮ್ಯಾಕ್ಸಿಮೊವಿಚ್ ಮೊಯೊಡ್ರ್ಯಾಗ್ ಅವರನ್ನು ಮಣಿಸಿದ್ದರು. ಎರಡನೇ ಸುತ್ತಿನಲ್ಲಿ ಇಟಲಿಯ ಮಯೋನ್ ಮೆಲಿಸಾ ವಿರುದ್ಧ ಜಯ ಗಳಿಸಿದ್ದರು. ಮೂರನೇ ಸುತ್ತಿನಲ್ಲಿ ಇಟಲಿಯ ಪಸಿನಿ ನಿಕೊಲೊ ಜೊತೆ ಡ್ರಾ ಮಾಡಿಕೊಂಡಿದ್ದರು. ನಾಲ್ಕನೇ ಸುತ್ತಿನಲ್ಲಿ ಒರ್ಫಿನಿ ನಿಕೊಲೊ ಅವರನ್ನು ಸೋಲಿಸಿದ್ದರು. ಐದನೇ ಸುತ್ತಿನಲ್ಲಿ ಲೊಯಕಾನೊ ಆ್ಯಂಟೊನಿಯೊ ವಿರುದ್ಧ ಗೆದ್ದಿದ್ದರು. ಆರು ಮತ್ತು ಏಳನೇ ಸುತ್ತುಗಳಲ್ಲಿ ಕ್ರಮವಾಗಿ ಆ್ಯಂಟೊನಿಯೊ ನೆರಿ ಹಾಗೂ ಬೆತಾಲಿ ಫ್ರಾನ್ಸಿಸ್ಕೊ ಜೊತೆ ಡ್ರಾ ಮಾಡಿಕೊಂಡರು.
ಶರಣ್ ಅವರು ಲೇಡಿಹಿಲ್‌ನ ಶುಭಾನಂದ ರಾವ್ ಮತ್ತು ಜ್ಯೋತಿ ದಂಪತಿಯ ಪುತ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.