ADVERTISEMENT

ಆಸ್ಟ್ರೇಲಿಯಾ ಸರ್ಫರ್ ಪ್ರಾಣ ಅಪಹರಿಸಿದ ಯಮಸ್ವರೂಪಿ ಶಾರ್ಕ್

ರಾಯಿಟರ್ಸ್
Published 7 ಜೂನ್ 2020, 7:13 IST
Last Updated 7 ಜೂನ್ 2020, 7:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮೆಲ್ಬರ್ನ್: ನ್ಯೂ ಸೌತ್ ವೇಲ್ಸ್‌ನ ಸಮುದ್ರದಲ್ಲಿ ಭಾನುವಾರ ಸರ್ಫಿಂಗ್‌ಗೆ ಇಳಿದ ವ್ಯಕ್ತಿ ಶಾರ್ಕ್‌ ದಾಳಿಗೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ 60 ವರ್ಷದ ಈ ವ್ಯಕ್ತಿಯ ಮೇಲೆಬೆಳಿಗ್ಗೆ 10 ಗಂಟೆಯ ವೇಳೆ 10 ಅಡಿ ಉದ್ದದ ಶಾರ್ಕ್ ಎರಗಿತ್ತು ಎಂದು ನ್ಯೂಸೌತ್ ವೇಲ್ಸ್‌ ಪೊಲೀಸರು ತಿಳಿಸಿದ್ದಾರೆ.

ಸಿಡ್ನಿಯ ಉತ್ತರ ಭಾಗದ ಕಿಂಗ್ಸ್‌ ಕ್ಲಿಫ್‌ನಿಂದ ಸುಮಾರು 800 ಕಿಲೋಮೀಟರ್ಸ್ ದೂರದ ಸಾಲ್ಟ್‌ ಬೀಚ್‌ನಲ್ಲಿ ಈ ಘಟನೆ ಸಂಭವಿಸಿದೆ. ವ್ಯಕ್ತಿಯು ಇತರ ಸರ್ಫರ್‌ಗಳ ಜೊತೆ ಸಮುದ್ರಕ್ಕೆ ಇಳಿದಿದ್ದರು. ದಾಳಿ ಮಾಡಿದ ಶಾರ್ಕ್ ವ್ಯಕ್ತಿಯನ್ನು ಎಳೆದುಕೊಂಡು ಹೋಗುತ್ತಿದ್ದಂತೆ ಇತರ ಸರ್ಫರ್‌ಗಳು ನೆರವಿಗೆ ಧಾವಿಸಿದರು. ಯಮಸ್ವರೂಪಿ ಮೀನು ಮತ್ತು ಸರ್ಫರ್‌ಗಳ ನಡುವೆ ಕೆಲಕಾಲ ಭಾರಿ ಹೋರಾಟ ನಡೆಯಿತು. ಕೊನೆಗೆ ಮೀನಿನ ಬಾಯಿಂದ ವ್ಯಕ್ತಿಯನ್ನು ಬಿಡಿಸಿಕೊಂಡು ಕಿನಾರೆಗೆ ತರಲಾಯಿತು. ಆದರೆ ಅಷ್ಟರಲ್ಲಿ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು.

‘ವ್ಯಕ್ತಿಯ ಬಲಗಾಲಿಗೆ ತೀವ್ರ ಗಾಯವಾಗಿತ್ತು. ಅವರಿಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಲಾಯಿತು. ಆದರೆ ಪ್ರಾಣ ಉಳಿಸಲು ಆಗಲಿಲ್ಲ’ ಎಂದು ಪೊಲೀಸರು ತಿಳಿಸಿದರು.

ಮೋಹಕ ಸರೋವರಗಳನ್ನು ಒಳಗೊಂಡಆಸ್ಟ್ರೇಲಿಯಾದ ಸಮುದ್ರ ಕಿನಾರೆಗಳು ವಿಶ್ವದ ಎಲ್ಲ ಕಡೆಯಿಂದ ಸರ್ಫರ್‌ಗಳನ್ನು ಆಕರ್ಷಿಸುತ್ತವೆ. ಇಲ್ಲಿ ಸರ್ಫರ್‌ಗಳು ಮತ್ತು ಇತರ ಈಜುಗಾರರ ಮೇಲೆ ಶಾರ್ಕ್‌ಗಳ ದಾಳಿ ಪದೇ ಪದೇ ನಡೆಯುತ್ತಿರುತ್ತದೆ. ಅನಿರೀಕ್ಷಿತ ದಾಳಿಗೆ ಒಳಗಾಗಿ ಬೆದರಿದ ವ್ಯಕ್ತಿಗಳು ಎದ್ದು ಬಿದ್ದು ಸಮುದ್ರ ಬದಿಗೆ ಬಂದು ಸೇರಿದ ಅದೆಷ್ಟೋ ಉದಾಹರಣೆಗಳೂ ಇವೆ. ಆದರೆ ದಾಳಿಯಿಂದ ಪ್ರಾಣ ಕಳೆದುಕೊಂಡ ಈ ಪ್ರಕರಣ ಅಪರೂಪದ್ದು.

ಜಲಚರ ಮತ್ತು ‍ಪ್ರಾಣಿ ಸಂರಕ್ಷಣಾ ಸೊಸೈಟಿ ‘ತರೊಂಗಾ’ ಕಲೆ ಹಾಕಿರುವ ಮಾಹಿತಿಗಳ ಪ್ರಕಾರ ಈ ವರೆಗೆ ಕೇವಲ ಇಬ್ಬರು ಮಾತ್ರ ಶಾರ್ಕ್ ದಾಳಿಗೆ ತುತ್ತಾಗಿ ಜೀವ ಕಳೆದುಕೊಂಡಿದ್ದಾರೆ. ಭಾನುವಾರದ ಪ್ರಕರಣ ಮೂರನೇಯದು. ತರೊಂಗಾ ಸೊಸೈಟಿಯು ಸರ್ಕಾರಿ ಸ್ವಾಮ್ಯದ ಏಜೆನ್ಸಿಯಾಗಿದ್ದು ಈ ಭಾಗದ ಅನೇಕ ಮೃಗಾಲಯಗಳ ಸಂರಕ್ಷಣೆಯ ಜವಾಬ್ದಾರಿಯನ್ನೂ ಹೊತ್ತುಕೊಂಡಿದೆ. ಸೊಸೈಟಿ ನೀಡಿರುವ ಮಾಹಿತಿಗಳ ಪ್ರಕಾರ ಕಳೆದ ವರ್ಷ ಶಾರ್ಕ್ ದಾಳಿಯಿಂದ ಸಾವು ಸಂಭವಿಸಿದ ಪ್ರಕರಣ ನಡೆಯಲಿಲ್ಲ.

ಘಟನೆ ನಡೆದ ನಂತರ ಕಿಂಗ್ಸ್‌ಕ್ಲಿಫ್ ಮತ್ತು ಕ್ಯಾಬರಿತಾ ನಡುವಿನ ಸಮುದ್ರ ಕಿನಾರೆಯಲ್ಲಿ ಜನರ ಸಂಚಾರವನ್ನು ನಿರ್ಬಂಧಿಸಲಾಗಿದ್ದು ಮರೈನ್ ಏರಿಯಾ ಕಮಾಂಡ್ ಪಡೆಯವರು ಮತ್ತು ಸ್ಥಳೀಯ ಸರ್ಫರ್‌ಗಳ ಜೀವರಕ್ಷಕರು ಠಿಕಾಣಿ ಹೂಡಿದ್ದಾರೆ. 24 ತಾಸು ಕಾಲ ಈ ಭಾಗದ ಸಮುದ್ರ ಕಿನಾರೆಯಲ್ಲಿ ನಿರ್ಬಂಧಗಳು ಮುಂದುವರಿಯಲಿವೆ ಎಂದು ತಿಳಿಸಲಾಗಿದೆ.

ಭಾನುವಾರದ ಪ್ರಕರಣಕ್ಕೆ ಸಂಬಂಧಿಸಿ ಅನೇಕರು ಟ್ವೀಟ್ ಮಾಡಿದ್ದು ಎಲಿಯಾಸ್ ವಿಸೊಂಟೊ ಎಂಬ ವ್ಯಕ್ತಿ ಶುಕ್ರವಾರ ಸಂಜೆ ಸಮುದ್ರದಲ್ಲಿ ಕಾಣಿಸಿಕೊಂಡ ‘ಬುಲ್ ಶಾರ್ಕ್’ ಒಂದರ ಚಿತ್ರವನ್ನು ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿ ಇಂಥ ದೃಶ್ಯಗಳು ಇಲ್ಲಿ ಸಾಮಾನ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.