ADVERTISEMENT

ಪ್ರೊ ಕಬಡ್ಡಿ ಲೀಗ್‌: ಪಿಂಕ್‌ ಪ್ಯಾಂಥರ್ಸ್‌ಗೆ ಗೆಲುವು

ಪ್ರೊ ಕಬಡ್ಡಿ ಲೀಗ್‌: ದೀಪಕ್ ಹೂಡಾ ‘ಸೂಪರ್ ಟೆನ್‌’

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 21:03 IST
Last Updated 7 ಫೆಬ್ರುವರಿ 2022, 21:03 IST
ಜೈಪುರ್ ಪಿಂಕ್ ಪ್ಯಾಂಥರ್ಸ್‌ ತಂಡದ ರೇಡರ್‌ನನ್ನು ಹಿಡಿಯಲು ಯತ್ನಿಸಿದ ಗುಜರಾತ್ ಜೈಂಟ್ಸ್ ಆಟಗಾರರು
ಜೈಪುರ್ ಪಿಂಕ್ ಪ್ಯಾಂಥರ್ಸ್‌ ತಂಡದ ರೇಡರ್‌ನನ್ನು ಹಿಡಿಯಲು ಯತ್ನಿಸಿದ ಗುಜರಾತ್ ಜೈಂಟ್ಸ್ ಆಟಗಾರರು   

ಬೆಂಗಳೂರು: ದೀಪಕ್ ನಿವಾಸ್ ಹೂಡಾ ‘ಸೂಪರ್‌‘ ಆಟವಾಡಿ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡಕ್ಕೆ ಗೆಲುವು ತಂದುಕೊಟ್ಟರು. ವೈಟ್‌ಫೀಲ್ಡ್‌ನ ಶೆರಟಾನ್ ಗ್ರ್ಯಾಂಡ್‌ ಹೋಟೆಲ್‌ ಆವರಣದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್‌ನ ಸೋಮವಾರದ ಪಂದ್ಯದಲ್ಲಿ ಜೈಪುರ್‌ 36–31ರಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಜಯ ಗಳಿಸಿತು.

ಆರಂಭದಲ್ಲಿ ಉಭಯ ತಂಡಗಳು ಸಮಬಲದ ಪೈಪೋಟಿ ನೀಡಿದವು. ನಂತರ ಜೈಪುರ್‌ ನಿಧಾನಕ್ಕೆ ಆಧಿಪತ್ಯ ಸಾಧಿಸಿತು. ಮಧ್ಯಂತರ ಅವಧಿಯ ವೇಳೆ ಆ ತಂಡ 20–14ರ ಮುನ್ನಡೆ ಸಾಧಿಸಿತು. ವಿರಾಮದ ನಂತರವೂ ಪಂದ್ಯ ಮೊದಲಾರ್ಧದ ರೀಯಲ್ಲೇ ಸಾಗಿತು. ಕೊನೆಯ ಹಂತದಲ್ಲಿ ಗುಜರಾತ್ ಸಮಬಲ ಸಾಧಿಸಿತು. ಆದರೆ ಪರಿಸ್ಥಿತಿಯನ್ನು ನಿಭಾಯಿಸಿದ ಜೈಪುರ್‌ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು.

ಲೀಗ್‌ನ ಎಂಟನೇ ಆವೃತ್ತಿಯ 100ನೇ ಪಂದ್ಯವಾಗಿತ್ತು ಇದು. ಪಂದ್ಯದುದ್ದಕ್ಕೂ ರೇಡಿಂಗ್‌ನಲ್ಲಿ ಮಿಂಚಿದ ದೀಪಕ್ 10 ಟಚ್ ಪಾಯಿಂಟ್ ಗಳಿಸಿದರು. ಒಂದು ಟ್ಯಾಕಲ್ ಪಾಯಿಂಟ್ ಕೂಡ ಅವರ ಪಾಲಾಯಿತು. ರೇಡಿಂಗ್‌ನಲ್ಲಿ ಅರ್ಜುನ್ ದೇಶ್ವಾಲ್ ಕೂಡ ಮಿಂಚಿದರು. ಅವರು 6 ಟಚ್ ಪಾಯಿಂಟ್‌ಗಳೊಂದಿಗೆ ಏಳು ಪಾಯಿಂಟ್ ಕಲೆ ಹಾಕಿದರು. ಸಂದೀಪ್ ಧುಳ್, ದೀಪಕ್ ಸಿಂಗ್ ಮತ್ತು ವಿಶಾಲ್ ಕೂಡ ತಂಡಕ್ಕೆ ಕಾಣಿಕೆ ನೀಡಿದರು.

ADVERTISEMENT

ಗುಜರಾತ್‌ ಜೈಂಟ್ಸ್‌ಗಾಗಿ ರಾಕೇಶ್ ನರ್ವಾಲ್ ಎಂಟು ಪಾಯಿಂಟ್ ಗಳಿಸಿದರು.

ಟೈ ಪಂದ್ಯದಲ್ಲಿ ಟೈಟನ್ಸ್‌: ಮತ್ತೊಂದು ಪಂದ್ಯದಲ್ಲಿ ತೆ‌‌ಲುಗು ಟೈಟನ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ತಂಡಗಳು 32–32ರಲ್ಲಿ ಸಮಬಲ ಸಾಧಿಸಿದವು. ಅಂಕಿತ್ ಬೇನಿವಾಲ್‌ (9 ಪಾಯಿಂಟ್ಸ್) ಮತ್ತು ರಜನೀಶ್‌ (7 ಪಾಯಿಂಟ್ಸ್‌) ಅವರ ಭರ್ಜರಿ ಆಟದ ನೆವಿನಿಂದ ಆರಂಭದಲ್ಲಿ ಮುನ್ನಡೆ ಸಾಧಿಸಿದ ಟೈಟನ್ಸ್ ಜಯದ ಭರವಸೆಯಲ್ಲಿತ್ತು. ಆದರೆ ನಾಯಕ ಮಣಿಂದರ್ ಸಿಂಗ್ (11) ಮತ್ತು ಮನೋಜ್ ಗೌಡ (6) ಅಮೋಘ ಆಟದ ಮೂಲಕ ಬೆಂಗಾಲ್ ತಿರುಗೇಟು ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.