
ಕ್ವೀನ್ಸ್ ಪ್ರೀಮಿಯರ್ ಲೀಗ್‌ನ ಎರಡನೇ ಆವೃತ್ತಿಯ ಸಮಗ್ರ ಪ್ರಶಸ್ತಿಯ ಗೆದ್ದ ಶಿವಮೊಗ್ಗ ಕ್ವೀನ್ಸ್ ತಂಡ ಟ್ರೋಫಿಯೊಂದಿಗೆ ಸಂಭ್ರಮಿಸಿತು
ಬೆಂಗಳೂರು: ನಟಿ ಭಾವನಾ ರಾವ್ ನಾಯಕತ್ವದ ಶಿವಮೊಗ್ಗ ಕ್ವೀನ್ಸ್ ತಂಡವು ಕ್ವೀನ್ಸ್ ಪ್ರೀಮಿಯರ್ ಲೀಗ್‌ನ ಎರಡನೇ ಆವೃತ್ತಿಯ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
12 ಕ್ರೀಡೆಗಳನ್ನು ಒಳಗೊಂಡ ಕ್ರೀಡೋತ್ಸವದಲ್ಲಿ ಅಮೋಘ ಪ್ರದರ್ಶನ ನೀಡಿದ ಶಿವಮೊಗ್ಗ ತಂಡವು 20 ಅಂಕಗಳೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. 17 ಪಾಯಿಂಟ್ಸ್ ಸಂಪಾದಿಸಿದ ಶಾನ್ವಿ ಶ್ರೀವಾಸ್ತವ ನಾಯಕತ್ವದ ಹಾಸನ ಕ್ವೀನ್ಸ್ ತಂಡವನ್ನು ರನ್ನರ್ಸ್ ಅಪ್ ಆಯಿತು. ಧನ್ಯಾ ರಾಮ್‌ಕುಮಾರ್ ಸಾರಥ್ಯದ ಬಳ್ಳಾರಿ ಕ್ವೀನ್ಸ್ (14) ತಂಡವು ಮೂರನೇ ಸ್ಥಾನ ಗಳಿಸಿತು.
ನ.10ರಂದು ಆರಂಭಗೊಂಡು ಭಾನುವಾರ ಮುಕ್ತಾಯಗೊಂಡ ಈ ಕ್ರೀಡೋತ್ಸವದಲ್ಲಿ ಖ್ಯಾತ ನಟಿಯರ ನಾಯಕತ್ವದ ಹತ್ತು ತಂಡಗಳು ಉತ್ಸಾಹದಿಂದ ಪಾಲ್ಗೊಂಡವು. ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕ್ಯೂಪಿಎಲ್‌ನ ಪ್ರಚಾರ ರಾಯಭಾರಿ ನಟಿ ರಮ್ಯಾ ಭಾಗವಹಿಸಿ, ಕೂಟಕ್ಕೆ ಮತ್ತಷ್ಟು ರಂಗು ತುಂಬಿದರು.
‘ಕ್ವೀನ್ಸ್ ಪ್ರೀಮಿಯರ್ ಲೀಗ್‌ನ ಭಾಗವಾಗಿರುವುದು ಸಂತಸವಾಗಿದೆ. ಲೀಗ್‌ನಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಮಹಿಳೆಯನ್ನು ಅಭಿನಂದಿಸುತ್ತೇನೆ. ಮೂರನೇ ಆವೃತ್ತಿಯನ್ನು ಎದುರು ನೋಡುತ್ತಿದ್ದೇನೆ’ ಎಂದು ರಮ್ಯಾ ಹೇಳಿದರು.
ರಮ್ಯಾ ಅವರೊಂದಿಗೆ ಮಾಜಿ ಶಾಸಕಿ ಸೌಮ್ಯ ರೆಡ್ಡಿ, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಕ್ಯೂಪಿಎಲ್ ಸಂಸ್ಥಾಪಕರಾದ ಮಹೇಶ್ ಕುಮಾರ್ ಮತ್ತು ಪ್ರಮೋದ್ ಶೆಟ್ಟಿ ವಿಜೇತ ತಂಡಕ್ಕೆ ಟ್ರೋಫಿ ಪ್ರದಾನ ಮಾಡಿದರು.
ಕೊನೆಯ ದಿನ ನಡೆದ ಮಹಿಳಾ ಕ್ರಿಕೆಟ್‌ನ ರೋಚಕ ಫೈನಲ್‌ನಲ್ಲಿ ಮಂಗಳೂರು ಕ್ವೀನ್ಸ್ ತಂಡವು 4 ರನ್‌ಗಳಿಂದ ಬೆಳಗಾವಿ ಕ್ವೀನ್ಸ್ ತಂಡವನ್ನು ಮಣಿಸಿತು. ಕುತೂಹಲ ಕೆರಳಿಸಿದ್ದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಶಿವಮೊಗ್ಗ ತಂಡವು ಬಳ್ಳಾರಿ ತಂಡವನ್ನು ಸೋಲಿಸಿತು.
ಶಿವಮೊಗ್ಗ ತಂಡವು ಹಗ್ಗಜಗ್ಗಾಟ, ಬ್ಯಾಡ್ಮಿಂಟನ್, ಪಿಕಲ್‌ಬಾಲ್ ಮತ್ತು ಲಗೋರಿಯಲ್ಲಿ ಅಸಾಧಾರಣ ಪ್ರದರ್ಶನ ನೀಡಿ ಅಗ್ರಸ್ಥಾನ ಪಡೆಯಿತು. ಭಾವನಾ ರಾವ್ ಅವರೊಂದಿಗೆ ಅಕ್ಷತಾ ಕುಲಕರ್ಣಿ, ಪ್ರಿಯಾಂಕಾ ಕಾಮತ್, ಸ್ಫೂರ್ತಿ ಗೌಡ, ಶ್ರುತಿ ವೆಂಕಟೇಶ್, ಗೀತಾ ಪಿ, ಸುರೇಖಾ ಕುಲಕರ್ಣಿ, ವಿಂಧ್ಯಾ ರಂಗಸ್ವಾಮಿ, ರಾಣ್ಯಾ ಶೃತಿ, ಮಾನ್ಯ ಗೌಡ, ಮಾನಸಾ ಗುರುಸ್ವಾಮಿ, ಗಮನಾ ಜಿ. ಗೌಡ, ರಾಗಶ್ರೀ ಬಿಜಿ, ಶೃತಿ ಸಿ, ವೈಷ್ಣವಿ ಬಿ, ಮತ್ತು ರಕ್ಷಿಕಾ ಶೆಟ್ಟಿ ತಂಡದ ಗೆಲುವಿಗೆ ವಿಶೇಷ ಕೊಡುಗೆ ನೀಡಿದರು.
ಚೆಸ್, ಗೋ ಕಾರ್ಟಿಂಗ್ ಮತ್ತು ಕೇರಂ ಮತ್ತು ಲುಡೊದಲ್ಲಿ ಉತ್ತಮ ಪ್ರದರ್ಶನ ನೀಡಿದ ಹಾಸನ ತಂಡವು ಎರಡನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿತು. ಹರ್ಬ್ ಸಿಯನ್ಸ್‌ನ ನಿರ್ದೇಶಕಿ ರೂಪಾ ಡಿ.ಎನ್. ಮಾಲೀಕತ್ವದ ತಂಡಕ್ಕೆ ಕೇವಲ ಮೂರು ಅಂಕದಿಂದ ಅಗ್ರಸ್ಥಾನ ಕೈತಪ್ಪಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.