ADVERTISEMENT

ಕೋವಿಡ್‌: ‘ಶೂಟರ್‌ ದಾದಿ’ ಚಂದ್ರೊ ತೋಮರ್‌ ನಿಧನ

ಪಿಟಿಐ
Published 30 ಏಪ್ರಿಲ್ 2021, 12:57 IST
Last Updated 30 ಏಪ್ರಿಲ್ 2021, 12:57 IST
‘ಶೂಟರ್ ದಾದಿ‘ ಚಂದ್ರೊ ತೋಮರ್ (ಎಡ) ಹಾಗೂ ಅವರ ಮೊಮ್ಮಗಳು ಶೆಫಾಲಿ ತೋಮರ್– ಪ್ರಜಾವಾಣಿ ಸಂಗ್ರಹ ಚಿತ್ರ
‘ಶೂಟರ್ ದಾದಿ‘ ಚಂದ್ರೊ ತೋಮರ್ (ಎಡ) ಹಾಗೂ ಅವರ ಮೊಮ್ಮಗಳು ಶೆಫಾಲಿ ತೋಮರ್– ಪ್ರಜಾವಾಣಿ ಸಂಗ್ರಹ ಚಿತ್ರ   

ನವದೆಹಲಿ: ‘ಶೂಟರ್ ದಾದಿ‘ ಎಂದೇ ಹೆಸರಾಗಿದ್ದ ಹಿರಿಯ ಶೂಟರ್ ಚಂದ್ರೊ ತೋಮರ್ (89) ಕೋವಿಡ್‌ನಿಂದಾಗಿ ಶುಕ್ರವಾರ ನಿಧನರಾದರು. ತಮ್ಮ 60ನೇ ವಯಸ್ಸಿನಲ್ಲಿ ಗನ್ ಹಿಡಿದಿದ್ದ ಚಂದ್ರೊ, ವಿಶ್ವದ ಅತಿ ಹಿರಿಯ ಶಾರ್ಪ್ ಶೂಟರ್ ಎನಿಸಿಕೊಂಡಿದ್ದರು. ಹಲವು ರಾಷ್ಟ್ರಮಟ್ಟದ ಸ್ಪ‍ರ್ಧೆಗಳಲ್ಲಿ ಪ್ರಶಸ್ತಿ ಜಯಿಸಿದ್ದರು.

ಕೊರೊನಾ ಸೋಂಕಿತರಾಗಿದ್ದ ಅವರು ಏಪ್ರಿಲ್ 26ರಿಂದ ಮೀರತ್‌ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

‘ಮೇರಾ ಸಾಥ್‌ ಚೂಟ್ ಗಯಾ, ಚಂದ್ರೊ ಕಹಾ ಗಯಿ (ಅವಳು ನನ್ನನ್ನು ತೊರೆದಳು, ಚಂದ್ರೊ ಎಲ್ಲಿಗೆ ಹೋದೆ?)‘ ಎಂದು ಚಂದ್ರೊ ಅವರ ಸಂಬಂಧಿ ಪ್ರಕಾಶಿ ತೋಮರ್ ಟ್ವೀಟ್ ಮಾಡಿದ್ದಾರೆ. ಪ್ರಕಾಶಿ ಕೂಡ ಹಿರಿಯ ಮಹಿಳಾ ಶಾರ್ಪ್ ಶೂಟರ್‌ಗಳಲ್ಲಿ ಒಬ್ಬರು.

ADVERTISEMENT

ಉತ್ತರ ಪ್ರದೇಶದ ಭಾಗ್‌ಪತ್‌ ಜಿಲ್ಲೆಯೊಂದರ ಹಳ್ಳಿಯವರಾದ ತೋಮರ್, 60ನೇ ವಯಸ್ಸಿನಲ್ಲಿ ಸ್ಪರ್ಧೆಗಿಳಿದು, ವೆಟರನ್ಸ್ ಟೂರ್ನಿಗಳಲ್ಲಿ ಚಾಂಪಿಯನ್ ಆಗಿದ್ದರು. ಅವರ ಈ ಸಾಧನೆಯಿಂದಾಗಿ ‘ಸಾಂಡ್‌ ಕಿ ಆಂಖ್‌‘ ಎಂಬ ಬಾಲಿವುಡ್ ಚಿತ್ರಕ್ಕೂ ಸ್ಫೂರ್ತಿಯಾಗಿದ್ದರು.

ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ‘ಸಾಂಡ್‌ ಕಿ ಆಂಖ್‌‘ ಚಿತ್ರದಲ್ಲಿ ಚಂದ್ರೊ ಪಾತ್ರ ನಿರ್ವಹಿಸಿದ್ದ ನಟಿ ಭೂಮಿ ಪಡ್ನೇಕರ್,ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ, ಬಾಕ್ಸರ್‌ ಅಖಿಲ್ ಕುಮಾರ್, ಶೂಟರ್ ಜಾಯ್‌ದೀಪ್ ಕರ್ಮಾಕರ್‌ ಸೇರಿದಂತೆ ಹಲವರು ಚಂದ್ರೊ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

‘ನಮ್ಮ ಪ್ರೀತಿಯ ದಾದಿ ಚಂದ್ರೊ ತೋಮರ್ ಜೀ ಅವರ ನಿಧನದಿಂದ ತುಂಬ ದುಃಖವಾಗಿದೆ. ಕೋಟ್ಯಂತರ ಜನರಿಗೆ ಅವರು ಸ್ಫೂರ್ತಿಯಾಗಿದ್ದಾರೆ ಮುಂದೆಯೂ ಆಗಿರುತ್ತಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ‘ ಎಂದು ರಿಜಿಜು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.