ADVERTISEMENT

ಅಭಿಷೇಕ್‌ ಕೊರಳಿಗೆ ಚಿನ್ನ; ಸೌರಭ್‌ಗೆ ಕಂಚು

ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌: 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಭಾರತದ ಸ್ಪರ್ಧಿಗಳ ಸಾಧನೆ

ಪಿಟಿಐ
Published 30 ಆಗಸ್ಟ್ 2019, 15:24 IST
Last Updated 30 ಆಗಸ್ಟ್ 2019, 15:24 IST
ಅಭಿಷೇಕ್‌ ವರ್ಮಾ
ಅಭಿಷೇಕ್‌ ವರ್ಮಾ   

ರಿಯೊ ಡಿ ಜನೈರೊ: ಐಎಸ್‌ಎಸ್ಎಫ್‌ ವಿಶ್ವಕಪ್‌ ಶೂಟಿಂಗ್‌ನಲ್ಲಿ ಭಾರತದ ಶೂಟರ್‌ಗಳು ಪದಕಗಳ ಬೇಟೆ ಮುಂದುವರಿಸಿದ್ದಾರೆ.

‌ಶುಕ್ರವಾರ ನಡೆದ ಪುರುಷರ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಅಭಿಷೇಕ್‌ ವರ್ಮಾ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರೆ, ಸೌರಭ್‌ ಚೌಧರಿ ಕಂಚಿನ ಪದಕ ಗೆದ್ದಿದ್ದಾರೆ.

ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸಿದ್ದ ಅಭಿಷೇಕ್‌, 24 ಶಾಟ್‌ಗಳ ಫೈನಲ್‌ನಲ್ಲಿ ಒಟ್ಟು 244.2 ಪಾಯಿಂಟ್ಸ್‌ ಕಲೆಹಾಕಿದರು.

ADVERTISEMENT

17ರ ಹರೆಯದ ಸೌರಭ್‌, 221.9 ಪಾಯಿಂಟ್ಸ್‌ ಹೆಕ್ಕಿದರು. ಸೌರಭ್‌ ಅವರು ಈ ವರ್ಷ ವಿಶ್ವಕಪ್‌ನಲ್ಲಿ ಗೆದ್ದ ಆರನೇ ಪದಕ ಇದಾಗಿದೆ. ಇದಕ್ಕೂ ಮುನ್ನ ಅವರು ಐದು ಚಿನ್ನದ ಪದಕಗಳನ್ನು ಜಯಿಸಿದ್ದರು.

ಈ ವಿಭಾಗದ ಬೆಳ್ಳಿಯ ಪದಕವು ಟರ್ಕಿಯ ಇಸ್ಮಾಯಿಲ್‌ ಕೆಲೆಸ್‌ ಅವರ ಪಾಲಾಯಿತು. ಇಸ್ಮಾಯಿಲ್‌, 243.1 ಪಾಯಿಂಟ್ಸ್‌ ಗಳಿಸಿದರು.

ಅಭಿಷೇಕ್‌ ಮತ್ತು ಸೌರಭ್‌ ಅವರ ಸಾಧನೆಯಿಂದಾಗಿ ಭಾರತವು ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ತಂಡದ ಖಾತೆಯಲ್ಲಿ ಒಟ್ಟು ಎರಡು ಚಿನ್ನ, ತಲಾ ಒಂದು ಬೆಳ್ಳಿ ಮತ್ತು ಕಂಚಿನ ಪದಕಗಳಿವೆ.

ಗುರುವಾರ ನಡೆದಿದ್ದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಸೌರಭ್‌ ನಾಲ್ಕನೇ ಸ್ಥಾನ (584 ಪಾ.) ಗಳಿಸಿದ್ದರು. ಅಭಿಷೇಕ್‌ ಅವರು ಐದನೇ ಸ್ಥಾನದೊಂದಿಗೆ (582 ಪಾ.) ಫೈನಲ್‌ ಪ್ರವೇಶಿಸಿದ್ದರು.

ಇದೇ ವಿಭಾಗದಲ್ಲಿ ಕಣದಲ್ಲಿದ್ದ ಗೌರವ್‌ ರಾಣಾ (571 ಪಾ.) 44ನೇ ಸ್ಥಾನ ಗಳಿಸಿ ಅರ್ಹತಾ ಹಂತದಲ್ಲೇ ಹೊರಬಿದ್ದಿದ್ದರು.

ಒಲಿಂಪಿಕ್ಸ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ವೀ ಪಂಗ್‌, ಉಕ್ರೇನ್‌ನ ಒಲೆಹ್‌ ಒಮೆಲ್‌ಚುಕ್‌, ಸರ್ಬಿಯಾದ ದಮಿರ್‌ ಮಿಕೆಚ್‌ ಮತ್ತು ಟರ್ಕಿಯ ಯೂಸುಫ್‌ ಡಿಕೆಚ್‌ ಅವರೂ ಫೈನಲ್‌ ಪ್ರವೇಶಿಸಿದ್ದರು. ಹೀಗಾಗಿ ಮೊದಲ ಹಂತದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿತ್ತು.

12ನೇ ಶಾಟ್‌ನ ನಂತರ ಅಭಿಷೇಕ್‌, ನಿಖರ ಗುರಿ ಹಿಡಿದು ‍ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದರು.

ಮಹಿಳೆಯರ 25 ಮೀಟರ್ಸ್‌ ಪಿಸ್ತೂಲ್‌ ವಿಭಾಗದಲ್ಲಿ ಚಿಂಕಿ ಯಾದವ್‌, ಫೈನಲ್‌ ಪ್ರವೇಶಿಸಲು ವಿಫಲರಾದರು.

ಅರ್ಹತಾ ಸುತ್ತಿನಲ್ಲಿ ಒಟ್ಟು 584 ಪಾಯಿಂಟ್ಸ್‌ ಗಳಿಸಿದ್ದ ಅವರು 10ನೇ ಸ್ಥಾನ ಪಡೆದರು.

ಅನುರಾಜ್‌ ಸಿಂಗ್‌ (579 ಪಾ.) ಮತ್ತು ಅಭಿದನ್ಯಾ ಅಶೋಕ್‌ ಪಾಟೀಲ್‌ (572 ಪಾ.) ಕ್ರಮವಾಗಿ 25 ಮತ್ತು 53ನೇ ಸ್ಥಾನಗಳೊಂದಿಗೆ ಹೋರಾಟ ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.