ADVERTISEMENT

ಗಾಲ್ಫ್‌: ದಾಖಲೆ ಬರೆದ ಶುಭಾಂಕರ್‌

ಪಿಟಿಐ
Published 8 ಡಿಸೆಂಬರ್ 2018, 16:52 IST
Last Updated 8 ಡಿಸೆಂಬರ್ 2018, 16:52 IST
ಶುಭಾಂಕರ್‌ ಶರ್ಮಾ
ಶುಭಾಂಕರ್‌ ಶರ್ಮಾ   

ನವದೆಹಲಿ: ಪ್ರತಿಭಾನ್ವಿತ ಗಾಲ್ಫರ್‌ ಶುಭಾಂಕರ್‌ ಶರ್ಮಾ, ಶನಿವಾರ ಏಷ್ಯನ್‌ ಟೂರ್‌ ಆರ್ಡರ್‌ ಆಫ್‌ ಮೆರಿಟ್‌ ಗೌರವಕ್ಕೆ ಭಾಜನರಾಗಿದ್ದಾರೆ. ಈ ಸಾಧನೆ ಮಾಡಿದ ಭಾರತದ ಅತಿ ಕಿರಿಯ ಗಾಲ್ಫರ್‌ ಎಂಬ ದಾಖಲೆಯನ್ನೂ ನಿರ್ಮಿಸಿದ್ದಾರೆ.

ಈ ಪುರಸ್ಕಾರಕ್ಕೆ ಪಾತ್ರರಾದ ಭಾರತದ ಐದನೇ ಗಾಲ್ಫರ್‌ ಎಂಬ ಶ್ರೇಯಕ್ಕೂ ಶುಭಾಂಕರ್‌, ಪಾತ್ರರಾಗಿದ್ದಾರೆ. ಜ್ಯೋತಿ ರಾಂಧವಾ (2002), ಅರ್ಜುನ್‌ ಅತ್ವಾಲ್‌ (2003), ಜೀವ್‌ ಮಿಲ್ಖಾ ಸಿಂಗ್‌ (2006 ಮತ್ತು 2008) ಮತ್ತು ಅನಿರ್ಬನ್‌ ಲಾಹಿರಿ (2015) ಅವರು ಮೊದಲು ಈ ಸಾಧನೆ ಮಾಡಿದ್ದರು.

ಜೊಹಾನ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಓಪನ್‌ನಲ್ಲಿ ಜಸ್ಟಿನ್‌ ಹಾರ್ಡಿಂಗ್‌ ಮತ್ತು ಜಿಂಬಾಬ್ವೆಯ ಸ್ಕಾಟ್‌ ವಿನ್ಸೆಂಟ್‌ ಅವರು ನಿರೀಕ್ಷಿತ ಸಾಮರ್ಥ್ಯ ತೋರಲು ವಿಫಲರಾದರು. ಹೀಗಾಗಿ ಶುಭಾಂಕರ್‌ ಅವರ ಪ್ರಶಸ್ತಿಯ ಹಾದಿ ಸುಗಮವಾಯಿತು.

ADVERTISEMENT

ಹೋದ ವರ್ಷ ಜಾಬರ್ಗ್‌ ಓಪನ್‌ನಲ್ಲಿ ಚಾಂಪಿಯನ್‌ ಆಗಿದ್ದ 22 ವರ್ಷ ವಯಸ್ಸಿನ ಶುಭಾಂಕರ್‌, ಈ ವರ್ಷವೂ ಮೋಡಿ ಮಾಡಿದ್ದರು. ಫೆಬ್ರುವರಿಯಲ್ಲಿ ಮಲೇಷ್ಯಾದಲ್ಲಿ ನಡೆದಿದ್ದ ಮೇ ಬ್ಯಾಂಕ್‌ ಚಾಂಪಿಯನ್‌ಷಿಪ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದ ಅವರು ಮಾರ್ಚ್‌ನಲ್ಲಿ ನಡೆದಿದ್ದ ಇಂಡಿಯನ್‌ ಓಪನ್‌ನಲ್ಲಿ ಅಗ್ರ 10ರೊಳಗೆ ಸ್ಥಾನ ಗಳಿಸಿದ್ದರು. ಈ ಮೂಲಕ ರ‍್ಯಾಂಕಿಂಗ್‌ನಲ್ಲಿ 64ನೇ ಸ್ಥಾನಕ್ಕೇರಿದ್ದರು. ಸರ್ ಹೆನ್ರಿ ಕಾಟನ್‌ ವರ್ಷದ ಶ್ರೇಷ್ಠ ಗಾಲ್ಫರ್‌ ಮತ್ತು ಯುರೋಪಿಯನ್‌ ಟೂರ್‌ನ ವರ್ಷದ ಶ್ರೇಷ್ಠ ಗಾಲ್ಫರ್‌ ಗೌರವಗಳೂ ಅವರಿಗೆ ಒಲಿದಿದ್ದವು.

ಈ ವರ್ಷ ಶುಭಾಂಕರ್‌, ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೂ ಭಾಜನರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.