ADVERTISEMENT

ಭಾರತದ ಅಜಯ್‌ಗೆ ನಿರಾಸೆ

ವಿಯೆಟ್ನಾಂ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ; ಸೇಸರ್‌ ಹಿರೇನ್‌ ರುಸ್ತಾವಿಟೊಗೆ ಜಯ

ಪಿಟಿಐ
Published 12 ಆಗಸ್ಟ್ 2018, 19:30 IST
Last Updated 12 ಆಗಸ್ಟ್ 2018, 19:30 IST
ಅಜಯ್‌ ಜಯರಾಮ್‌
ಅಜಯ್‌ ಜಯರಾಮ್‌   

ಹೊ ಚಿ ಮಿನ್‌ ಸಿಟಿ: ಭಾರತದ ಅಜಯ್‌ ಜಯರಾಮ್‌ ಅವರು ಇಲ್ಲಿ ನಡೆದ ವಿಯೆಟ್ನಾಂ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ನಿರಾಸೆ ಅನುಭವಿಸಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ಅಜಯ್‌, 14–21, 10–21ರಿಂದ ಇಂಡೊನೇಷ್ಯಾದ ಶೇಸರ್‌ ಹಿರೇನ್‌ ರುಸ್ತಾವಿಟೊ ಅವರ ಎದುರು ಸೋತರು. ಇದರೊಂದಿಗೆ ಈ ಋತುವಿನ ಮೊದಲ ಪ್ರಶಸ್ತಿ ಜಯಿಸುವ ತವಕದಲ್ಲಿದ್ದ ಅಜಯ್‌ ಅವರ ಆಸೆ ಕಮರಿಹೋಯಿತು.

ಹಿಂದಿನ ತಿಂಗಳು ನಡೆದಿದ್ದ ವೈಟ್‌ ನೈಟ್ಸ್‌ ಅಂತರರಾಷ್ಟ್ರೀಯ ಚಾಲೆಂಜ್‌ ಟೂರ್ನಿಯಲ್ಲಿ ಕೂಡ ಅಜಯ್‌ ರನ್ನರ್‌ ಅಪ್‌ ಆಗಿದ್ದರು.

ADVERTISEMENT

ಪಂದ್ಯದ ಆರಂಭದಿಂದಲೂ ಎದುರಾಳಿಯ ಆಟಕ್ಕೆ ಪ್ರತ್ಯುತ್ತರ ನೀಡಲು ಅವರು ವಿಫಲವಾದರು. ಆಕ್ರಮಣಕಾರಿ ಆಟವಾಡಿದ ಶೇಸರ್‌ ಅವರಿಗೆ ಭಾರತದ ಆಟಗಾರ ಯಾವುದೇ ಹಂತದಲ್ಲೂ ಸವಾಲಾಗಲಿಲ್ಲ.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಸಿಂಗಪುರದ ಯಿಯೊ ಜಿಯಾ ಮಿನ್‌, 21–19, 21–19ರಿಂದ ಚೀನಾದ ಹನ್‌ ಯು ಅವರನ್ನು ಮಣಿಸಿದರು.

ಪುರುಷರ ಡಬಲ್ಸ್ ವಿಭಾಗದ ಅಂತಿಮ ಹಣಾಹಣಿಯಲ್ಲಿ ದಕ್ಷಿಣ ಕೊರಿಯಾದ ಕೊ ಸಂಗ್‌ ಹ್ಯುನ್‌ ಹಾಗೂ ಶಿನ್‌ ಬೆಕ್‌ ಕಿಯೊಲ್‌ ಜೋಡಿಯು 22–20, 21–18ರಿಂದ ತೈಪೆಯ ಲೀ ಶೆಂಗ್‌ ಮು ಹಾಗೂ ಯಾಂಗ್‌ ಪೊ ಸುವಾನ್‌ ಜೋಡಿಯ ಎದುರು ಗೆದ್ದಿತು.

ಮಹಿಳೆಯರ ಡಬಲ್ಸ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ಜಪಾನ್‌ನ ಮಿಸಾಟೊ ಅರಟಾಮಾ ಹಾಗೂ ಅಕಾನೆ ವಟನಾಡೆ ಜೋಡಿಯು 21–18, 21–19ರಿಂದ ಅವರದೇ ರಾಷ್ಟ್ರದ ನಮಿ ಮತ್ಸುಯಮಾ ಹಾಗೂ ಚಿಹಾರು ಶಿದಾ ಜೋಡಿಯನ್ನು ಸೋಲಿಸಿತು.

ಮಿಶ್ರ ಡಬಲ್ಸ್‌ ವಿಭಾಗದ ಅಂತಿಮ ಹಣಾಹಣಿಯಲ್ಲಿ ಥಾಯ್ಲೆಂಡ್‌ನ ನಿಪಿಟ್‌ಫೊನ್‌ ಫುವಾಂಗ್‌ಫುಪೆಟ್‌ ಹಾಗೂ ಸಾವಿತ್ರಿ ಅಮಿತ್ರಾಪಾಯಿ ಅವರು 13–21, 21–18, 21–19ರಿಂದ ಅಲ್ಫಿಯಾನ್‌ ಎಕೊ ಪ್ರಸೆತ್ಯಾ ಹಾಗೂ ಮಾರ್ಷೆಲಿಯಾ ಗಿಶಾ ಇಸ್ಲಾಮಿ ಜೋಡಿಯ ಎದುರು ಗೆದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.