ADVERTISEMENT

ಬ್ಯಾಡ್ಮಿಂಟನ್‌: ಅಜಯ್‌ ಜಯರಾಮ್‌ಗೆ ನಿರಾಸೆ

ಪಿಟಿಐ
Published 9 ಜುಲೈ 2018, 17:24 IST
Last Updated 9 ಜುಲೈ 2018, 17:24 IST
ಅಜಯ್‌ ಜಯರಾಮ್‌
ಅಜಯ್‌ ಜಯರಾಮ್‌   

ಗಾಚಿನಾ, ರಷ್ಯಾ: ಇಲ್ಲಿ ನಡೆಯುತ್ತಿರುವ ವೈಟ್‌ ನೈಟ್ಸ್‌ ಅಂತರರಾಷ್ಟ್ರೀಯ ಚಾಲೆಂಜ್‌ ಬ್ಯಾಡ್ಮಿಂಟನ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತದ ಅಜಯ್‌ ಜಯರಾಮ್‌ ನಿರಾಸೆ ಅನುಭವಿಸಿದ್ದಾರೆ.

ಸೋಮವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ಭಾರತದ ಆಟಗಾರ ಸ್ಪೇನ್‌ನ ಪಾಬ್ಲೊ ಏಬಿಯನ್‌ ವಿರುದ್ಧ 21–11, 16–21, 17–21ರಿಂದ ಮಣಿದರು. 55 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸ್ಪೇನ್‌ನ ಆಟಗಾರನಿಗೆ ಅಜಯ್‌ ಅವರು ತೀವ್ರ ಪೈಪೋಟಿ ನೀಡಿದರು.

ಮೊದಲ ಗೇಮ್‌ ಗೆದ್ದು ಮುನ್ನಡೆ ಸಾಧಿಸಿದ ಅಜಯ್‌ ಅವರನ್ನು ಪಾಬ್ಲೊ ಎರಡನೇ ಗೇಮ್‌ನಲ್ಲಿ ಕಟ್ಟಿಹಾಕಿದರು. ಎರಡನೇ ಗೇಮ್‌ನಲ್ಲಿ ಹಲವು ತಪ್ಪುಗಳನ್ನು ಎಸಗಿದ ಅಜಯ್‌, ಎದುರಾಳಿಗೆ ಸುಲಭವಾಗಿ ಪಾಯಿಂಟ್ಸ್‌ ಬಿಟ್ಟುಕೊಟ್ಟರು. ಮೂರನೇ ಗೇಮ್‌ನಲ್ಲಿ ಸಮಬಲದ
ಹೋರಾಟ ಕಂಡುಬಂದರೂ, ಅಜಯ್‌ ಅವರ ತಂತ್ರಗಳಿಗೆ ಪ್ರತಿತಂತ್ರ ಹೆಣೆದ ಪಾಬ್ಲೊ ಗೆಲುವು ತಮ್ಮದಾಗಿಸಿಕೊಂಡರು.

ADVERTISEMENT

ಕಳೆದ ತಿಂಗಳು ನಡೆದಿದ್ದ ಅಮೆರಿಕನ್‌ ಓಪನ್‌ ವಿಶ್ವ ಟೂರ್‌ 300 ಟೂರ್ನಿಯಲ್ಲಿ ಅಜಯ್‌ ಅವರು ಸೆಮಿಫೈನಲ್‌ ಪ್ರವೇಶಿಸಿದ್ದರು.

‘ಗಾಯದ ಕಾರಣ ಹಲವು ಮಹತ್ವದ ಟೂರ್ನಿಗಳನ್ನು ತಪ್ಪಿಸಿಕೊಂಡೆ. ಆದರೆ, ಗುಣಮುಖನಾದ ನಂತರ ಸ್ಪರ್ಧಿಸುತ್ತಿರುವ ಟೂರ್ನಿಗಳಲ್ಲಿ ತೋರುತ್ತಿರುವ ಸಾಮರ್ಥ್ಯ ಬಗ್ಗೆ ಸಂತಸವಿದೆ’ ಎಂದು ಅವರು ಹೇಳಿದ್ದಾರೆ.

ಹಿಂದಿನ ವರ್ಷದ ಏಪ್ರಿಲ್‌ನಲ್ಲಿ ಅಜಯ್‌, ವಿಶ್ವ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 13ನೇ ಸ್ಥಾನಕ್ಕೇರಿದ್ದರು. ಅದು ಅವರ ವೃತ್ತಿ ಬದುಕಿನ ಶ್ರೇಷ್ಠ ಸಾಧನೆಯಾಗಿತ್ತು. ಆದರೆ, ಸೀನಿಯರ್‌ ನ್ಯಾಷನಲ್ಸ್‌ ಟೂರ್ನಿಯಲ್ಲಿ ಸ್ನಾಯು ಸೆಳೆತಕ್ಕೊಳಗಾದರು. ಇದೇ ವೇಳೆ ಮೊಣಕಾಲು ನೋವಿನಿಂದ ನರಳಿದ ಅವರು ಆರು ತಿಂಗಳ ಕಾಲ ಬ್ಯಾಡ್ಮಿಂಟನ್‌ ಕೋರ್ಟ್‌ನಿಂದ ದೂರ ಉಳಿದಿದ್ದರು.

ಡಬಲ್ಸ್‌ನಲ್ಲಿ ಸೋಲು: ಪುರುಷರ ಡಬಲ್ಸ್‌ ವಿಭಾಗದಲ್ಲಿ ಭಾರತದ ತರುಣ್‌ ಕೋನಾ ಹಾಗೂ ಸೌರಭ್‌ ಶರ್ಮಾ ಜೋಡಿಯನ್ನು ಜರ್ಮನಿಯ ಜಾರ್ನೆ ಗಿಸ್ಸ್‌ ಹಾಗೂ ಜನ್‌ ಕೊಲಿನ್‌ ವೋಲ್ಕರ್‌ ಜೋಡಿಯು 21–18, 13–21, 17–21ರಿಂದ ಪರಾಭವಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.