ಬ್ಯಾಡ್ಮಿಂಟನ್ (ಪ್ರಾತಿನಿಧಿಕ ಚಿತ್ರ)
ನವದೆಹಲಿ: ಭಾರತದ ತನ್ವಿ ಪತ್ರಿ, ಬ್ಯಾಡ್ಮಿಂಟನ್ ಏಷ್ಯಾ 17 ಮತ್ತು 15 ವರ್ಷದೊಳಗಿನವರ ಜೂನಿಯರ್ ಚಾಂಪಿಯನ್‌ಷಿಪ್ಸ್‌ನಲ್ಲಿ 15 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಳು. ಚೀನಾದ ಚೆಂಗ್ಡುವಿನಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ತನ್ವಿ ವಿಯೆಟ್ನಾಮಿನ ಥಿ ತು ಹುಯೆನ್ ಗುಯೆನ್ ಅವರನ್ನು ನೇರ ಗೇಮ್‌ಗಳಿಂದ ಮಣಿಸಿದಳು.
13 ವರ್ಷ ವಯಸ್ಸಿನ ತನ್ವಿ ತನಗೆ ನೀಡಿದ ಅಗ್ರ ಶ್ರೇಯಾಂಕಕ್ಕೆ ತಕ್ಕಂತೆ ಆಡಿ 22–20, 21–11 ರಿಂದ ಎರಡನೇ ಶ್ರೇಯಾಂಕದ ಹುಯೆನ್ ಮೇಲೆ ಜಯಗಳಿಸಿದಳು.
ಟೂರ್ನಿಯ ಆರಂಭದಿಂದಲೇ ತನ್ವಿ ಪ್ರಾಬಲ್ಯ ಮೆರೆದಿದ್ದು, ಆಡಿದ ಐದು ಪಂದ್ಯಗಳಲ್ಲಿ ಎದುರಾಳಿಗಳಿಗೆ ಒಂದೂ ಗೇಮ್ ಬಿಟ್ಟುಕೊಡದೇ ಚಿನ್ನದ ಪದಕ ಗೆದ್ದಳು.
ಫೈನಲ್‌ನ ಮೊದಲ ಗೇಮ್‌ನಲ್ಲಿ ತನ್ವಿ 11–17 ರಿಂದ ಹಿಂದೆಯಿದ್ದಳು. ಆದರೆ ಸಂಯಮ ವಹಿಸಿದ್ದು ಫಲನೀಡಿತು. ಗುಯೆನ್ ತಾವೇ ಆಗಿ ಸರಣಿ ತಪ್ಪುಗಳನ್ನು ಎಸಗಿದ್ದರಿಂದ ಭಾರತದ ಆಟಗಾರ್ತಿ ಚೇತರಿಸಿಕೊಂಡರು ಮುನ್ನಡೆ ಪಡೆದಳು. ಎರಡನೇ ಗೇಮ್‌ನಲ್ಲಿ ಅವರಿಗೆ ಹೆಚ್ಚು ಪೈಪೋಟಿ ಎದುರಾಗಲಿಲ್ಲ.
ಇದೇ ಚಾಂಪಿಯನ್‌ಷಿಪ್‌ನ 17 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ನಲ್ಲಿ ಜ್ಞಾನ ದತ್ತು ಶನಿವಾರ ಕಂಚಿನ ಪದಕ ಪಡೆದಿದ್ದನು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.