ADVERTISEMENT

ಜಂಗಿ ನಿಕಾಲಿ ಕುಸ್ತಿ: ಮಹಾರಾಷ್ಟ್ರದ ಸಿಖಂದರ್‌ ಜಯಭೇರಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2023, 23:30 IST
Last Updated 14 ಸೆಪ್ಟೆಂಬರ್ 2023, 23:30 IST
<div class="paragraphs"><p>ಚಿಕ್ಕೋಡಿ ತಾಲ್ಲೂಕಿನ ಶಿರಗಾಂವದಲ್ಲಿ ಬುಧವಾರ ರಾತ್ರಿ ನಡೆದ ಅಂತರರಾಷ್ಟ್ರೀಯ ಕುಸ್ತಿ ಪಂದ್ಯದ ಮೊದಲ ಕ್ರಮಾಂಕದಲ್ಲಿ ಆಟವಾಡಿದ ಕೊಲ್ಹಾಪುರ ಸಿಖಂದರ್ ಶೇಖ್ (ಕೆಂಪು ಚಡ್ಡಿ) ಮತ್ತು ಮಥುರಾದ ಪಾಲೆಂದರ್</p></div>

ಚಿಕ್ಕೋಡಿ ತಾಲ್ಲೂಕಿನ ಶಿರಗಾಂವದಲ್ಲಿ ಬುಧವಾರ ರಾತ್ರಿ ನಡೆದ ಅಂತರರಾಷ್ಟ್ರೀಯ ಕುಸ್ತಿ ಪಂದ್ಯದ ಮೊದಲ ಕ್ರಮಾಂಕದಲ್ಲಿ ಆಟವಾಡಿದ ಕೊಲ್ಹಾಪುರ ಸಿಖಂದರ್ ಶೇಖ್ (ಕೆಂಪು ಚಡ್ಡಿ) ಮತ್ತು ಮಥುರಾದ ಪಾಲೆಂದರ್

   

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಕೊಲ್ಹಾಪುರದ ಪೈಲ್ವಾನ್‌ ಸಿಖಂದರ್ ಶೇಖ್‌ ಅವರು ಬಸವೇಶ್ವರ ಜಾತ್ರೆ ಪ್ರಯುಕ್ತ ತಾಲ್ಲೂಕಿನ ಶಿರಗಾಂವ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದ ಅಂತರರಾಷ್ಟ್ರೀಯ ಮಟ್ಟದ ಜಂಗಿ ನಿಕಾಲಿ ಕುಸ್ತಿ ಪಂದ್ಯದಲ್ಲಿ ವಿಜೇತರಾಗಿ ನಗದು ಬಹುಮಾನ ₹3.50 ಲಕ್ಷ ತಮ್ಮದಾಗಿಸಿಕೊಂಡರು.

ಈ ಪ್ರಶಸ್ತಿಗೆ ‘ಮಹಾರಾಷ್ಟ್ರದ ಮಹಾನ್ ಭಾರತ ಕೇಸರಿ’ ಸಿಖಂದರ್‌ ಶೇಖ್‌ ಮತ್ತು ಮಥುರಾದ ಪೈಲ್ವಾನ್‌ ಪಾಲೆಂದರ್ ಮಧ್ಯೆ ತುರುಸಿನ ಕುಸ್ತಿ ನಡೆಯಿತು. ಒಂದು ಹಂತದಲ್ಲಿ ಪಾಲೆಂದರ್ ಅವರನ್ನು ಕಬ್ಜಾ ಪಡೆದು ಚಿತ್ ಮಾಡುವ ಮೂಲಕ ಸಿಖಂದರ್ ಶೇಖ್ ವಿಜಯಮಾಲೆ ಧರಿಸಿದರು.

ADVERTISEMENT

ಹರಿಯಾಣಾದ ಮಾವುಲೆ ಕೋಕಾಟೆ ಮತ್ತು ದೆಹಲಿಯ ಜಿತು ಗುಜ್ಜರ್ ಸೆಣಸಾಟ ಕೂಡ ರೋಚಕವಾಗಿತ್ತು. ಕೋಕಾಟೆ ವಿಜಯ ಸಾಧಿಸಿ ₹2.5 ಲಕ್ಷ ನಗದು ಮತ್ತು ಪ್ರಶಸ್ತಿ ಫಲಕ ಪಡೆದರು.

ತೀವ್ರ ಹಣಾಹಣಿ: ‘ಮಹಾರಾಷ್ಟ್ರ ಕೇಸರಿ’ ಪ್ರಥ್ವಿರಾಜ ಚವ್ಹಾಣ ಮತ್ತು ದೆಹಲಿಯ ಆಶಿಷ್‌ ಹುಡಾ ನಡುವೆ ಅಬ್ಬರದ ಕಾಳಗ ನಡೆಯಿತು. ಪೈಲ್ವಾನ್ ಹುಡಾ ಗೆಲುವು ತಮ್ಮದಾಗಿಸಿಕೊಂಡು ₹2 ಲಕ್ಷ ಬಾಚಿಕೊಂಡರು.

ಕೊಲ್ಹಾಪುರದ ಉಮೇಶ ಚವ್ಹಾಣ ಮತ್ತು ಹರಿಯಾಣಾದ ರೋಹಿಲ್ ಅವರ ಮಧ್ಯೆ ನಡೆದ ಸೆಣಸಾಟದಲ್ಲಿ ಹರಿಯಾಣದ ರೋಹಿಲ್ ಗೆಲುವು ಸಾಧಿಸಿದರು. ದಾವಣಗೆರೆಯ ಕಾರ್ತಿಕ್‌ ಕಾಟೆ ಮತ್ತು ಹರಿಯಾಣಾದ ಪವನಕುಮಾರ ಒಬ್ಬರಿಗೊಬ್ಬರು ಕಡಿಮೆ ಇಲ್ಲದಂತೆ ಸೆಣಸಿದರು. ಕೊನೆಗೆ ಇವರ ಕುಸ್ತಿಯನ್ನು ‘ಸಮಬಲ’ ಎಂದು ಘೋಷಿಸಲಾಯಿತು.

ಕುಳ್ಳಗಿನ ಶರೀರದ ನೇಪಾಳದ ಪೈಲ್ವಾನ್‌ ದೇವ್‌ ಥಾಪಾ ಅವರು ಇಡೀ ಕುಸ್ತಿ ಪಂದ್ಯದ ಆಕರ್ಷಣೆಯ ಕೇಂದ್ರವಾದರು. ದೇವ್ ಥಾಪಾ, ಹಿಮಾಚಲ ಪ್ರದೇಶದ ಆಜಾನುಬಾಹು ನವೀನ ಅವರನ್ನು ಚಿತ್ ಮಾಡಿದಾಗ ಮೈದಾನದಲ್ಲಿ ರೋಮಾಂಚನ ಉಂಟಾಯಿತು.

ಆರು ಕ್ರಮಾಂಕಗಳಲ್ಲಿ ನಡೆದ ಈ ಹಣಾಹಣಿಯಲ್ಲಿ ಗೆದ್ದ ಎಲ್ಲರಿಗೂ ನಗದು ಬಹುಮಾನ ನೀಡಲಾಯಿತು. ಛತ್ರಪತಿ ಶಾಹೂ ಮಹಾರಾಜರ ಕಾಲದಿಂದಲೂ ಶಿರಗಾಂವ ಗ್ರಾಮದಲ್ಲಿ ಕುಸ್ತಿ ಪಂದ್ಯಗಳು ನಡೆಯುತ್ತಿವೆ.

ಚಿಕ್ಕೋಡಿ ತಾಲ್ಲೂಕಿನ ಶಿರಗಾಂವದಲ್ಲಿ ಬುಧವಾರ ರಾತ್ರಿ ನಡೆದ ಅಂತರರಾಷ್ಟ್ರೀಯ ಕುಸ್ತಿ ಪಂದ್ಯದ ಮೊದಲ ಕ್ರಮಾಂಕದಲ್ಲಿ ಗೆಲುವು ಸಾಧಿಸಿದ ಕೊಲ್ಹಾಪುರ ಸಿಖಂದರ್ ಶೇಖ್ ಅವರನ್ನು ಪ್ರೇಕ್ಷಕರು ಹೊತ್ತು ಕುಣಿದರು
ಚಿಕ್ಕೋಡಿ ತಾಲ್ಲೂಕಿನ ಶಿರಗಾಂವದಲ್ಲಿ ಬುಧವಾರ ರಾತ್ರಿ ನಡೆದ ಅಂತರರಾಷ್ಟ್ರೀಯ ಕುಸ್ತಿ ಪಂದ್ಯದಲ್ಲಿ ನೇಪಾಳದ ದೇವ ಥಾಪಾ (ಕೆಂಪು ಚಡ್ಡಿ) ಎದುರಾಳಿಯನ್ನು ಮಣಿಸಿದ ರೀತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.