ADVERTISEMENT

ಸಿಂಗಪುರ ಓಪನ್ ಬ್ಯಾಡ್ಮಿಂಟನ್ | ಸಿಂಧುಗೆ ಮುನ್ನಡೆ, ಲಕ್ಷ್ಯ ಸೇನ್‌ಗೆ ಹಿನ್ನಡೆ

ಪಿಟಿಐ
Published 29 ಮೇ 2024, 13:39 IST
Last Updated 29 ಮೇ 2024, 13:39 IST
<div class="paragraphs"><p>ಸಿಂಧು </p></div>

ಸಿಂಧು

   

ಪಿಟಿಐ ಚಿತ್ರ

ಸಿಂಗಪುರ: ಮಾಜಿ ಚಾಂಪಿಯನ್ ಪಿ.ವಿ.ಸಿಂಧು ಅವರು ಬುಧವಾರ ಸಿಂಗಪುರ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತಿಗೆ ಮುನ್ನಡೆದರು. ಆದರೆ ಪುರುಷರ ವಿಭಾಗದಲ್ಲಿ ಲಕ್ಷ್ಯ ಸೇನ್ ಅವರು ತೀವ್ರ ಹೋರಾಟ ಪ್ರದರ್ಶಿಸಿದರೂ ವಿಶ್ವದ ಅಗ್ರಮಾನ್ಯ ಆಟಗಾರ ವಿಕ್ಟರ್ ಆಕ್ಸೆಲ್‌ಸನ್‌ ಅವರಿಗೆ ಸೋಲಬೇಕಾಯಿತು.

ADVERTISEMENT

ಎರಡು ವರ್ಷ ಹಿಂದೆ ಕೊನೆಯ ಸಲ ಇಲ್ಲಿಯೇ ಬಿಡಬ್ಲ್ಯುಎಫ್‌ ಪ್ರಶಸ್ತಿ ಗೆದ್ದಿದ್ದ ಸಿಂಧು 21–12, 22–20 ರಿಂದ ವಿಶ್ಬದ 21ನೇ ಕ್ರಮಾಂಕದ ಆಟಗಾರ್ತಿ ಲಿನೆ ಹೊಜ್‌ರಮಾಕ್‌ ಕಾಯರ್ಸ್‌ಫೆಲ್ಟ್‌ ಅವರನ್ನು ಸೋಲಿಸಿದರು. ಕಳೆದ ವಾರ ಥಾಯ್ಲೆಂಡ್‌ ಓಪನ್‌ನಲ್ಲಿ ರನ್ನರ್‌ ಅಪ್‌ ಆಗಿದ್ದ ಸಿಂಧು ಈ ಪಂದ್ಯದಲ್ಲಿ ಗೆಲುವಿಗೆ ತೆಗೆದುಕೊಂಡಿದ್ದು 44 ನಿಮಿಷಗಳನ್ನಷ್ಟೇ. ಅವರ ಮುಂದಿನ ಎದುರಾಳಿ, ರಿಯೊ ಒಲಿಂಪಿಕ್ ಚಾಂಪಿಯನ್ ಕರೊಲಿನಾ ಮರಿನ್ ಅವರು.

ವಿಶ್ವದ ಮೂರನೇ ಕ್ರಮಾಂಕದ ಆಟಗಾರ್ತಿ ಮರಿನ್ ಮತ್ತು ಸಿಂಧು ಡೆನ್ಮಾರ್ಕ್ ಓಪನ್‌ನಲ್ಲಿ ಕೊನೆಯ ಬಾರಿ ಎದುರಾಳಿಗಳಾಗಿದ್ದಾಗ ಇಬ್ಬರ ನಡುವೆ ವಾಗ್ವಾದ ನಡೆದು, ಎಲ್ಲೊ ಕಾರ್ಡ್ ಎಚ್ಚರಿಕೆ ಪಡೆದಿದ್ದರು. ಮರಿನ್‌, ಸಿಂಧು ವಿರುದ್ಧ 11–5ರ ಗೆಲುವಿನ ದಾಖಲೆ ಹೊಂದಿದ್ದಾರೆ.‌

ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಲಿರುವ ವಿಶ್ವದ 14ನೇ ನಂಬರ್ ಆಟಗಾರ ಲಕ್ಷ್ಯ ಹೋರಾಟ ನಡೆಸಿದರೂ ಅಂತಿಮವಾಗಿ ಆಕ್ಸೆಲ್‌ಸನ್‌ ಎದುರು ಮಣಿಯಬೇಕಾಯಿತು. 62 ನಿಮಿಷಗಳ ಸೆಣಸಾಟದಲ್ಲಿ ಆಕ್ಸೆಲ್‌ಸನ್‌ 21–13, 16–21, 21–13 ರಿಂದ ಜಯಗಳಿಸಿದರು. ಆಕ್ಸೆಲ್‌ಸನ್‌ ಕಳೆದ ವಾರವಷ್ಟೇ ಥಾಯ್ಲೆಂಡ್ ಓಪನ್‌ನಲ್ಲಿ ಈ ಋತುವಿನ ಮೊದಲ ಪ್ರಶಸ್ತಿ ಗಳಿಸಿದ್ದರು.

ಕಿದಂಬಿ ಶ್ರೀಕಾಂತ್ ಅವರ ಮೊದಲ ಸುತ್ತಿನ ಪಂದ್ಯವೂ ನಿರಾಸೆಯಲ್ಲಿ ಅಂತ್ಯಕಂಡಿತು. ಅವರು 14–21, 3–11 ರಲ್ಲಿ ಐದನೇ ಶ್ರೇಯಾಂಕದ ಜಪಾನ್‌ನ ಆಟಗಾರ ಕೊಡಯಿ ನರವೋಕಾ ಎದುರು ಪಂದ್ಯದಿಂದ ನಿವೃತ್ತರಾದರು.

ಮಿಶ್ರ ಡಬಲ್ಸ್ ವಿಭಾಗದಲ್ಲಿ ಬಿ.ಸುಮೀತ್ ರೆಡ್ಡಿ – ಎನ್‌.ಸಿಕ್ಕಿ ರೆಡ್ಡಿ 18–21, 19–21ರಲ್ಲಿ ಮಲೇಷ್ಯಾದ ಗೊಹ್ ಸೂನ್ ಹುವತ್ – ಲಾಯಿ ಶೆವನ್ ಜೋಡಿಗೆ ಮಣಿಸಿದರು. ಇನ್ನೊಂದು ಪಂದ್ಯದಲ್ಲಿ ವೆಂಕಟ್‌ ಗೌರವ್ ಪ್ರಸಾದ್– ಜೂಹಿ ದೇವಾಂಗನ್ ಜೋಡಿ 8–21, 8–21ರಲ್ಲಿ ಮಾಡ್ಸ್‌ ವೆಸ್ಟರ್‌ಗಾರ್ಡ್‌– ಕ್ರಿಸ್ಟಿನ್‌ ಬುಷ್‌ ಎದುರು ಸೋಲನುಭವಿಸಿದರು.

ಲಿನೆ ವಿರುದ್ಧ ಪಂದ್ಗದಲ್ಲಿ ಸಿಂಧು 3–0 ಮುನ್ನಡೆ ಪಡೆದರೂ, ಸ್ಕೋರ್ ನಂತರ 8–8ರಲ್ಲಿ ಸಮನಾಯಿತು. ಭಾರತ ಆಟಗಾರ್ತಿ ನಂತರ ಸತತ ಪಾಯಿಂಟ್ಸ್‌ಗಳನ್ನು ಪಡೆದು 16–11ರಲ್ಲಿ ಉತ್ತಮ ಮುನ್ನಡೆ ಪಡೆದರು. ಲಿನೆ, ಸ್ವಯಂಕೃತ ತಪ್ಪುಗಳನ್ನು ಎಸಗಿದ್ದು ಇದಕ್ಕೆ ಕಾರಣವಾಯಿತು.  ನಂತರ ಸಿಂಧು ಗೆಲುವು ಕಷ್ಟವಾಗಲಿಲ್ಲ. ಎರಡನೇ ಸೆಟ್‌ನಲ್ಲಿ ಆರಂಭದಲ್ಲೇ 5–1, ನಂತರ 11–7ರಲ್ಲಿ ಮುನ್ನಡೆ ಪಡೆದ ಸಿಂಧು ಗೆಲುವಿನತ್ತ ಮುನ್ನಡೆಯುವಂತೆ ಕಂಡಿತ್ತು. ಆದರೆ ಚೇತರಿಸಿಕೊಂಡ ಡೆನ್ಮಾರ್ಕ್ ಆಟಗಾರ್ತಿ 14–14ರಲ್ಲಿ ಸಮ ಮಾಡಿಕೊಂಡರಲ್ಲದೇ, ಮುನ್ನಡೆಯನ್ನೂ ಪಡೆದರು. ಆದರೆ ಸಿಂಧು ಸತತ ಆರು ಪಾಯಿಂಟ್ಸ್ ಪಡೆದು ಪಂದ್ಯವನ್ನು ತಮ್ಮದಾಗಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.