ADVERTISEMENT

ವಿಶ್ವ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿ : ಸಿಂಧು ಮೇಲೆ ನಿರೀಕ್ಷೆ

ವಿಶ್ವ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿ ಇಂದಿನಿಂದ: ಚಿರಾಗ್‌–ಸಾತ್ವಿಕ್‌ ಮೇಲೆ ಗಮನ

ಪಿಟಿಐ
Published 30 ನವೆಂಬರ್ 2021, 13:02 IST
Last Updated 30 ನವೆಂಬರ್ 2021, 13:02 IST
ಲಕ್ಷ್ಯ ಸೇನ್‌– ಪ್ರಜಾವಾಣಿ ಚಿತ್ರ
ಲಕ್ಷ್ಯ ಸೇನ್‌– ಪ್ರಜಾವಾಣಿ ಚಿತ್ರ   

ಬಾಲಿ: ಇತ್ತೀಚಿನ ಬಹುತೇಕ ಟೂರ್ನಿಗಳ ಅಂತಿಮ ಹಂತಗಳಲ್ಲಿ ಎಡವಿರುವ ಭಾರತದ ಪಿ.ವಿ. ಸಿಂಧು, ಲಕ್ಷ್ಯ ಸೇನ್‌ , ಬುಧವಾರ ಆರಂಭವಾಗುವ ಬಿಡಬ್ಲ್ಯುಎಫ್‌ ವಿಶ್ವ ಟೂರ್ ಫೈನಲ್ಸ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದು, ಪ್ರಶಸ್ತಿ ನಿರೀಕ್ಷೆಯಲ್ಲಿದ್ದಾರೆ.

ಟೂರ್ನಿಗೆ ಮೊದಲ ಬಾರಿ ಅರ್ಹತೆ ಗಿಟ್ಟಿಸಿರುವ ಲಕ್ಷ್ಯ ಸೇನ್‌, ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ ಉತ್ತಮ ಸಾಮರ್ಥ್ಯ ತೋರುವ ಹಂಬಲದಲ್ಲಿದ್ದಾರೆ.

₹ 1 ಕೋಟಿ 12.50 ಲಕ್ಷ ಒಟ್ಟು ಬಹುಮಾನ ಮೊತ್ತದ ಟೂರ್ನಿಯಲ್ಲಿ ಭಾರತದ ಏಳು ಮಂದಿ ಕಣಕ್ಕಿಳಿಯುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

ADVERTISEMENT

ಮಿಶ್ರ ಡಬಲ್ಸ್ ಹೊರತುಪಡಿಸಿ ಎಲ್ಲ ವಿಭಾಗಗಳಲ್ಲೂ ಭಾರತದ ಪಟುಗಳು ಆಡಲಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ–ಎನ್‌.ಸಿಕ್ಕಿ ರೆಡ್ಡಿ, ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್‌ ಕಣಕ್ಕಿಳಿಯಲಿರುವ ಇನ್ನುಳಿದ ಆಟಗಾರರು.

2018ರಲ್ಲಿ ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದ ಸಿಂಧು, ಹೋದ ವರ್ಷ ಟೂರ್ನಿಯ ಫೈನಲ್‌ ತಲುಪಿದ್ದರು. ಅವರು ಇಲ್ಲಿ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಮೊದಲ ಪಂದ್ಯದಲ್ಲಿ ಅಗ್ರಶ್ರೇಯಾಂಕದ ಆಟಗಾರ್ತಿ ಥಾಯ್ಲೆಂಡ್‌ನ ಪಾರ್ನ್‌ಪವೀ ಚೋಚುವಾಂಗ್ ಅವರನ್ನು ಎದುರಿಸಲಿದ್ದಾರೆ.

ಇತ್ತೀಚಿಗೆ ನಡೆದ ಸತತ ಮೂರು ಟೂರ್ನಿಗಳಲ್ಲಿ ನಾಲ್ಕರ ಘಟ್ಟ ತಲುಪಿದ್ದ, ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು, ಇಲ್ಲಿ ಕಿರೀಟ ಧರಿಸುವ ವಿಶ್ವಾಸದಲ್ಲಿದ್ದಾರೆ.

’ಬಿ‘ ಗುಂಪಿನಲ್ಲಿರುವ ಶ್ರೀಕಾಂತ್‌ ಅವರಿಗೆ ಮೊದಲ ಸುತ್ತಿನಲ್ಲಿ ಮಲೇಷ್ಯಾದ ಲೀ ಜಿ ಜಿನ್ ಸವಾಲು ಎದುರಾಗಿದೆ.

2019ರಲ್ಲಿ ಐದು ಪ್ರಶಸ್ತಿಗಳನ್ನು ಗೆದ್ದಿದ್ದ ಲಕ್ಷ್ಯ ಅವರು ಅಗ್ರ ಶ್ರೇಯಾಂಕದ ಮತ್ತು ಒಲಿಂಪಿಕ್ ಚಾಂಪಿಯನ್ ವಿಕ್ಟರ್ ಅಕ್ಸೆಲ್ಸೆನ್, ಎರಡು ಬಾರಿ ವಿಶ್ವ ಚಾಂಪಿಯನ್ ಜಪಾನ್‌ನ ಕೆಂಟೊ ಮೊಮೊಟಾ ಮತ್ತು ಡೆನ್ಮಾರ್ಕ್‌ನ ರಾಸ್ಮಸ್ ಗೆಮ್ಕೆ ಅವರೊಂದಿಗೆ ‘ಎ’ ಗುಂಪಿನಲ್ಲಿದ್ದು, ಕಠಿಣ ಸವಾಲು ಎದುರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.