ADVERTISEMENT

ಬ್ಯಾಡ್ಮಿಂಟನ್ | ಉಬರ್ ಕಪ್ ತಂಡದಿಂದ ಹಿಂದೆಸರಿದ ಸಿಂಧು

ಬ್ಯಾಡ್ಮಿಂಟನ್: ಡಬಲ್ಸ್‌ನಲ್ಲೂ ದುರ್ಬಲವಾದ ಮಹಿಳಾ ತಂಡ

ಪಿಟಿಐ
Published 4 ಏಪ್ರಿಲ್ 2024, 13:15 IST
Last Updated 4 ಏಪ್ರಿಲ್ 2024, 13:15 IST
ಪಿ.ವಿ.ಸಿಂಧು
ಪಿ.ವಿ.ಸಿಂಧು   

ನವದೆಹಲಿ: ಎರಡು ಒಲಿಂಪಿಕ್ಸ್‌ಗಳಲ್ಲಿ ಪದಕ ಗೆದ್ದಿರುವ ಪಿ.ವಿ.ಸಿಂಧು ಮತ್ತು ಎರಡು ಅಗ್ರ ಡಬಲ್ಸ್‌ ಜೋಡಿಗಳು ಉಬರ್‌ ಕಪ್‌ನಲ್ಲಿ ಭಾಗವಹಿಸುವ ಭಾರತ ತಂಡದಿಂದ ಹಿಂದೆ ಸರಿದಿವೆ. ಆದರೆ, ಥಾಮಸ್‌ ಕಪ್‌ಗೆ ಭಾರತದ ಪ್ರಬಲ ತಂಡ ಕಣಕ್ಕಿಳಿಯಲಿದೆ. ಚೀನಾದ ಚೆಂಗ್ಡುವಿನಲ್ಲಿ ಏ. 27 ರಿಂದ ಈ ಟೂರ್ನಿಗಳು ನಡೆಯಲಿವೆ.

ಬ್ಯಾಡ್ಮಿಂಟನ್ ಏಷ್ಯಾ ತಂಡ ಚಾಂಪಿಯನ್‌ಷಿಪ್‌ ವೇಳೆ ಮರಳಿ ಕಣಕ್ಕಿಳಿದಿದ್ದ ಸಿಂಧು, ಪ್ಯಾರಿಸ್‌ ಒಲಿಂಪಿಕ್ಸ್‌ ಸವಾಲಿಗೆ ಸಜ್ಜಾಗುವ ಕಾರಣದಿಂದ ಹಿಂದೆ ಸರಿದಿದ್ದಾರೆ.

ಸಿಂಧು ನಿರ್ಧಾರದ ಬೆನ್ನಲ್ಲೇ ತಂಡ ದುರ್ಬಲವಾಗಿರುವ ಕಾರಣ ಅಗರ ಡಬಲ್ಸ್‌ ಜೋಡಿಯಾದ ಟ್ರೀಸಾ ಜೋಳಿ – ಗಾಯತ್ರಿ ಗೋಪಿಚಂದ್ ಮತ್ತು ಅಶ್ವಿನಿ ಪೊನ್ನಪ್ಪ–ತನಿಶಾ ಕ್ರಾಸ್ಟೊ ಕೂಡ ಹಿಂದೆಸರಿಯಲು ತೀರ್ಮಾನಿಸಿದ್ದಾರೆ. ಇವರಿಬ್ಬರೂ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದಕ್ಕೆ ಉಳಿದ ಟೂರ್ನಿಗಳಲ್ಲಿ ಆಡಲು ಶ್ರಮ ಹಾಕಲಿದ್ದಾರೆ.

ADVERTISEMENT

ಹೀಗಾಗಿ ಭಾರತ ಬ್ಯಾಡ್ಮಿಂಟನ್ ಸಂಸ್ಥೆಯು ಸೀನಿಯರ್‌ ಹಂತದಲ್ಲಿ ಆಡಿರುವ ಆಟಗಾರ್ತಿಯರಿಗೆ ಭಾರತ ತಂಡದ ‘ಕ್ಯಾಪ್‌’ ನೀಡಲು ನಿರ್ಧರಿಸಿದೆ.

‘ಗಾಯಾಳಾಗಿದ್ದ ಸಿಂಧು ಈಗಷ್ಟೇ ಪುನರಾಮನ ಮಾಡಿದ್ದಾರೆ. ಹೀಗಾಗಿ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸಲು ಹೆಚ್ಚು ಸಮಯಾವಕಾಶ ಸಿಗುವ ಉದ್ದೇಶದಿಂದ ಸಿಂಧು ಹಿಂದೆಸರಿದಿದ್ದಾರೆ. ಪ್ಯಾರಿಸ್‌ನಲ್ಲಿ ಮತ್ತೊಂದು ಪದಕ ಪಡೆಯುವ ವಿಶ್ವಾಸದಲ್ಲಿದ್ದಾರೆ’ ಎಂದು ಬಿಎಐ ಕಾರ್ಯದರ್ಶಿ ಸಂಜಯ್ ಮಿಶ್ರಾ ಪಿಟಿಐಗೆ ತಿಳಿಸಿದರು.

ಥಾಮಸ್‌ ಕಪ್‌ನಲ್ಲಿ ಭಾರತ ಹಾಲಿ ಚಾಂಪಿಯನ್ ಆಗಿದೆ. 2022ರಲ್ಲಿ ಥಾಯ್ಲೆಂಡ್‌ನಲ್ಲಿ ನಡೆದ ಟೂರ್ನಿಯಲ್ಲಿ ಭಾರತ 3–0 ಯಿಂದ ಇಂಡೊನೇಷ್ಯಾ ಮೇಲೆ ಜಯಗಳಿಸಿ ಮೊದಲ ಬಾರಿ ಚಾಂಪಿಯನ್ ಆಗಿತ್ತು. ಹೀಗಾಗಿ ಅನುಭವದ ಜೊತೆ ಭರವಸೆಯ ಆಟಗಾರರನ್ನು ಹೊಂದಿರುವ  ಆಯ್ಕೆ ಮಾಡಲಾಗಿದೆ. 10 ಮಂದಿಯ ತಂಡದಲ್ಲಿ ಐವರು ಸಿಂಗಲ್ಸ್ ಆಟಗಾರರಿದ್ದಾರೆ. ವಿಶ್ವದ ನಂಬರ್ ವನ್ ಡಬಲ್ಸ್‌ ಜೋಡಿಯಾದ ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ತಂಡದಲ್ಲಿದ್ದಾರೆ.

ಥಾಮಸ್ ಕಪ್ ತಂಡ: ಸಿಂಗಲ್ಸ್‌: ಎಚ್‌.ಎಸ್‌.ಪ್ರಣಯ್, ಲಕ್ಷ್ಯ ಸೇನ್‌, ಕಿದಂಬಿ ಶ್ರೀಕಾಂತ್‌, ಪ್ರಿಯಾಂಶು ರಾಜಾವತ್‌ ಮತ್ತು ಕಿರಣ್ ಜಾರ್ಜ್‌. ಡಬಲ್ಸ್‌: ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ, ಚಿರಾಗ್ ಶೆಟ್ಟಿ, ಎಂ.ಆರ್‌. ಅರ್ಜುನ್‌, ಧ್ರುವ ಕಪಿಲ ಮತ್ತು ಸಾಯಿ ಪ್ರತೀಕ್.

ಉಬರ್ ಕಪ್ ತಂಡ: ಸಿಂಗಲ್ಸ್‌: ಅನ್ಮೋಲ್‌ ಖಾರ್ಬ್, ತನ್ವಿ ಶರ್ಮಾ, ಅಶ್ಮಿತಾ ಚಾಲಿಹಾ ಮತ್ತು ಇಶಾರಾಣಿ ಬರೂವಾ. ಡಬಲ್ಸ್‌: ಶ್ರುತಿ ಮಿಶ್ರಾ, ಪ್ರಿಯಾ ಕೊಂಜೆಂಗ್‌ಬಾಮ್, ಸಿಮ್ರಾನ್ ಸಿಂಘಿ ಮತ್ತು ರಿತಿಕಾ ಥಾಕರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.