ADVERTISEMENT

ಲಾಕ್‌ಡೌನ್‌ ಬಳಿಕ ಮೊದಲ ಬಾರಿ ಅಭ್ಯಾಸ ಆರಂಭಿಸಿದ ಸಿಂಧು, ಪ್ರಣೀತ್‌, ಸಿಕ್ಕಿ

ಕೋವಿಡ್‌: ಲಾಕ್‌ಡೌನ್‌ ಬಳಿಕ ಮೊದಲ ಬಾರಿ ಅಂಗಣಕ್ಕಿಳಿದ ಬ್ಯಾಡ್ಮಿಂಟನ್‌ ಪಟುಗಳು

ಪಿಟಿಐ
Published 7 ಆಗಸ್ಟ್ 2020, 20:37 IST
Last Updated 7 ಆಗಸ್ಟ್ 2020, 20:37 IST
ಪಿ.ವಿ.ಸಿಂಧು–ಪಿಟಿಐ ಚಿತ್ರ
ಪಿ.ವಿ.ಸಿಂಧು–ಪಿಟಿಐ ಚಿತ್ರ   
""

ನವದೆಹಲಿ: ಬ್ಯಾಡ್ಮಿಂಟನ್‌ ಪಟುಗಳಾದ ವಿಶ್ವ ಚಾಂಪಿಯನ್‌ ಪಿ.ವಿ.ಸಿಂಧು, ಬಿ.ಸಾಯಿ ಪ್ರಣೀತ್‌ ಹಾಗೂ ಎನ್‌.ಸಿಕ್ಕಿ ರೆಡ್ಡಿ ಅವರು ದೀರ್ಘ ಬಿಡುವಿನ ಬಳಿಕ ಶುಕ್ರವಾರ ತರಬೇತಿ ಅಂಗಳಕ್ಕಿಳಿದರು. ಕೊರೊನಾ ವೈರಾಣು ಉಪಟಳದ ಹಿನ್ನೆಲೆಯಲ್ಲಿ ನಾಲ್ಕು ತಿಂಗಳುಗಳ ಬಳಿಕ ಅವರು, ಹೈದರಾಬಾದ್‌ನ ಸಾಯ್‌ ಫುಲ್ಲೇಲ ಗೋಪಿಚಂದ್‌ ಅಕಾಡೆಮಿಯಲ್ಲಿ ಕಟ್ಟುನಿಟ್ಟಿನ ನಿಯಮಗಳ ಅಡಿ ಅಭ್ಯಾಸ ನಡೆಸಿದರು.

ತೆಲಂಗಾಣ ಸರ್ಕಾರವು ಆಗಸ್ಟ್‌ 1ರಂದು ಅನುಮತಿ ನೀಡಿದ ಬಳಿಕ ಭಾರತ ಕ್ರೀಡಾ ಪ್ರಾಧಿಕಾರವು (ಸಾಯ್‌), ಒಲಿಂಪಿಕ್‌ ಟಿಕೆಟ್‌ ಗಿಟ್ಟಿಸುವ ವಿಶ್ವಾಸವುಳ್ಳ ಎಂಟು ಪ್ರಮುಖ ಪಟುಗಳಿಗೆ, ರಾಷ್ಟ್ರೀಯ ಬ್ಯಾಡ್ಮಿಂಟನ್‌ ಶಿಬಿರ ಆರಂಭಿಸಲು ನಿರ್ಧರಿಸಿತ್ತು.

’ದೀರ್ಘ ಬಿಡುವಿನ ಬಳಿಕ ನಮ್ಮ ಪ್ರಮುಖ ಆಟಗಾರರು ತರಬೇತಿಗೆ ಮರಳುತ್ತಿರುವುದು ಖುಷಿಯ ಸಂಗತಿ. ಸುರಕ್ಷಿತ ವಾತಾವರಣದಲ್ಲಿ ಅಭ್ಯಾಸ ಆರಂಭಿಸಲು ಬೇಕಾದ ಎಲ್ಲ ಸವಲತ್ತುಗಳನ್ನು ನಾವು ಹೊಂದಿದ್ದೇವೆ‘ ಎಂದು ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್‌ ಪುಲ್ಲೇಲ ಗೋಪಿಚಂದ್‌ ಹೇಳಿದರು.

ADVERTISEMENT

ಸಿಂಧು, ಪ್ರಣೀತ್‌, ಸಿಕ್ಕಿಯ ಜೊತೆಗೆ ಲಂಡನ್‌ ಒಲಿಂಪಿಕ್ಸ್‌ ಕಂಚು ಪದಕ ವಿಜೇತೆ ಸೈನಾ ನೆಹ್ವಾಲ್‌, ಕಿಡಂಬಿ ಶ್ರೀಕಾಂತ್‌, ಡಬಲ್ಸ್ ವಿಭಾಗದ ಆಟಗಾರ್ತಿಯ ಅಶ್ವಿನಿ ಪೊನ್ನಪ್ಪ ಹಾಗೂ ಪುರುಷರ ಡಬಲ್ಸ್‌ ಜೋಡಿಯಾದ ಚಿರಾಗ್‌ ಶೆಟ್ಟಿ– ಸಾತ್ವಿಕ್‌ಸಾಯಿರಾಜ್‌ ಅವರು ಟೋಕಿಯೊ ಒಲಿಂಪಿಕ್‌ ಟಿಕೆಟ್‌ ಗಿಟ್ಟಿಸುವ ವಿಶ್ವಾಸ ಮೂಡಿಸಿದ್ದಾರೆ.

ಪ್ರಣೀತ್‌

ಹೈದರಾಬಾದ್‌ನಲ್ಲೇ ಇರುವ ಸೈನಾ ಶುಕ್ರವಾರ ಅಭ್ಯಾಸ ನಡೆಸಲಿಲ್ಲ. ಮಾರ್ಚ್‌ನಲ್ಲಿ ತಮ್ಮ ಮನೆಗಳಿಗೆ ತೆರಳಿರುವ ಆಟಗಾರರು ಇನ್ನಷ್ಟೇ ಹೈದರಾಬಾದ್‌ಗೆ ಮರಳಬೇಕಿದೆ.

ಗೋಪಿಚಂದ್‌ ಹಾಗೂ ವಿದೇಶಿ ತರಬೇತುದಾರ ಪಾರ್ಕ್‌ ಟೇ ಸ್ಯಾಂಗ್‌ ಅವರ ಮಾರ್ಗದರ್ಶನದಲ್ಲಿ ಸಿಂಧು ಶುಕ್ರವಾರ ಮೊದಲಿಗರಾಗಿ ಅಭ್ಯಾಸ ಆರಂಭಿಸಿದರು.

’ಇಂದು (ಶುಕ್ರವಾರ) ಸಿಂಧು ಬೆಳಿಗ್ಗೆ 6.30ರಿಂದ 8.30ರವರೆಗೆ ಅಭ್ಯಾಸ ನಡೆಸಿದರು. ಈ ವಾರಪೂರ್ತಿ ಪ್ರತಿದಿನ ಅವರು ಇದೇ ಸಮಯದಲ್ಲಿ ಅಭ್ಯಾಸ ನಡೆಸಲಿದ್ದಾರೆ. ಸಂಜೆಯ ವೇಳೆ ಸುಚಿತ್ರಾ ಅಕಾಡೆಮಿಯಲ್ಲಿ ಫಿಟ್‌ನೆಸ್‌ ತರಬೇತಿ ಪಡೆಯಲಿದ್ದಾರೆ‘ ಎಂದು ಸಿಂಧು ಅವರ ತಂದೆ ಪಿ.ವಿ.ರಮಣ ಹೇಳಿದರು.

ಸಿಂಧು ಬಳಿಕ ಪ್ರಣೀತ್‌ ಮತ್ತು ಸಿಕ್ಕಿ ಅವರು 8.30ರಿಂದ 10.30ರ ವೇಳೆ ಅಂಗಣದಲ್ಲಿ ಬೆವರು ಹರಿಸಿದರು.

‘ದೀರ್ಘ ಬಿಡುವಿನ ನಂತರ ಅಂಗಣಕ್ಕಿಳಿದಿದ್ದು ಖುಷಿಯ ಸಂಗತಿ. ಗೋಪಿ ಸರ್‌, ಹೊಸ ಕೋಚ್‌ ಅಗುಸ್‌ ಡ್ವಿ ಸ್ಯಾಂಟೊಸೊ ಮತ್ತು ಇಬ್ಬರು ಸಹಾಯಕರು ಇದ್ದರು. ನೈರ್ಮಲೀಕರಣ ಸೇರಿದಂತೆ ಕೋವಿಡ್‌–19 ಮಾರ್ಗಸೂಚಿಗಳನ್ನು ಪಾಲಿಸಲಾಯಿತು‘ ಎಂದು ಪ್ರಣೀತ್‌ ನುಡಿದರು.‌

ಭಾರತ ಬ್ಯಾಡ್ಮಿಂಟನ್‌ ಸಂಸ್ಥೆಯು (ಬಿಎಐ)ಹೈದರಾಬಾದ್‌ನಲ್ಲಿ ಜುಲೈ 1ರಂದು ರಾಷ್ಟ್ರೀಯ ಶಿಬಿರ ಆಯೋಜಿಸಲು ನಿರ್ಧರಿಸಿತ್ತು. ಆದರೆ ಸರ್ಕಾರ ಹಸಿರು ನಿಶಾನೆ ತೋರಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.