ADVERTISEMENT

ಇಂಡೊನೇಷ್ಯಾ ಓಪನ್ ಸೂಪರ್ 1000 ಟೂರ್ನಿ: ಸಿಂಧು, ಸಾಯಿ ಪ್ರಣೀತ್‌ಗೆ ಆಘಾತ

ಪಿಟಿಐ
Published 14 ಜೂನ್ 2022, 12:32 IST
Last Updated 14 ಜೂನ್ 2022, 12:32 IST
ಪಿ.ವಿ.ಸಿಂಧು – ಎಪಿ ಚಿತ್ರ
ಪಿ.ವಿ.ಸಿಂಧು – ಎಪಿ ಚಿತ್ರ   

ಜಕಾರ್ತ: ಭಾರತದ ಪಿ.ವಿ. ಸಿಂಧು ಮತ್ತು ಬಿ.ಸಾಯಿ ಪ್ರಣೀತ್‌ ಅವರು ಇಂಡೊನೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ತಡೆ ದಾಟುವಲ್ಲಿ ವಿಫಲರಾದರು.

ಮಂಗಳವಾರ ಇಲ್ಲಿ ಆರಂಭವಾದ ಟೂರ್ನಿಯ ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಏಳನೇ ಶ್ರೇಯಾಂಕದ ಸಿಂಧು14-21, 18-21ರಿಂದ ಚೀನಾದ ಹೆ ಬಿಂಗ್ ಜಿಯಾವೊ ಎದುರು ಮಣಿದರು. ಈ ಗೆಲುವಿನೊಂದಿಗೆ ಮಾಜಿ ವಿಶ್ವ ಚಾಂಪಿಯನ್‌ ಸಿಂಧು ವಿರುದ್ಧ ಗೆಲುವಿನ ದಾಖಲೆಯನ್ನು ಬಿಂಗ್‌ 10–8ಕ್ಕೆ ಹೆಚ್ಚಿಸಿಕೊಂಡರು.

ಈ ಸೋಲಿನೊಂದಿಗೆ,ಸಿಂಧು ಅವರ ಕಾಮನ್‌ವೆಲ್ತ್ ಕ್ರೀಡಾಕೂಟದ ಪೂರ್ವಸಿದ್ಧತೆಯ ಮೇಲೆ ಪರಿಣಾಮ ಬೀರಿದೆ.

ADVERTISEMENT

ಸಿಂಧು ಎದುರಿನ ಪಂದ್ಯದ ಮೊದಲ ಗೇಮ್‌ನ ಆರಂಭದಲ್ಲೇ 9–2ರಿಂದ ಮುನ್ನಡೆ ಸಾಧಿಸಿದ ವಿಶ್ವ ರ‍್ಯಾಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿರುವ ಬಿಂಗ್, ಬಳಿಕ ಹಿಡಿತ ಬಿಗಿಗೊಳಿಸುತ್ತ ಸಾಗಿದರು. ವಿರಾಮದ ವೇಳೆಗೆ ಅವರು 11–4ರಿಂದ ಮುಂದಿದ್ದರು. ನಂತರ ಸಿಂಧು ಆಟ ಚುರುಕುಗೊಳಿಸಿ ಸತತ ನಾಲ್ಕು ಪಾಯಿಂಟ್ಸ್ ಗಳಿಸಿ ಹಿನ್ನಡೆಯನ್ನು 8–11ಕ್ಕೆ ತಗ್ಗಿಸಿಕೊಂಡರು.

ಆದರೆ ಭಾರತದ ಆಟಗಾರ್ತಿ ಪಾರಮ್ಯ ಸಾಧಿಸಲು ಬಿಂಗ್‌ ಅವಕಾಶ ಮಾಡಿಕೊಡಲಿಲ್ಲ. ಗೇಮ್‌ಅನ್ನು ಸುಲಭವಾಗಿ ತಮ್ಮದಾಗಿಸಿಕೊಂಡರು. ಎರಡನೇ ಗೇಮ್‌ನಲ್ಲಿ ಸಿಂಧು ತಿರುಗೇಟು ನೀಡಲು ಯತ್ನಿಸಿದರೂ, ಗೇಮ್ ಚೀನಾ ಆಟಗಾರ್ತಿಯ ವಶವಾಗುವುದನ್ನು ತಪ್ಪಿಸಲಾಗಲಿಲ್ಲ.

ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಸಾಯಿ ಪ್ರಣೀತ್16-21, 19-21ರಿಂದ ಡೆನ್ಮಾರ್ಕ್‌ನ ಹಾನ್ಸ್ ಕ್ರಿಸ್ಟಿಯನ್‌ ಸೋಲ್ಬರ್ಗ್ ವಿಟಿಂಗಸ್‌ ಎದುರು ಎಡವಿದರು.

ಮಿಶ್ರ ಡಬಲ್ಸ್ ವಿಭಾಗದಲ್ಲಿ ಇಶಾನ್ ಭಟ್ನಾಗರ್‌– ತನಿಶಾ ಕ್ರಾಸ್ತೊ ಜೋಡಯಯೂ ನಿರಾಸೆ ಅನುಭವಿಸಿತು. ಈ ಜೋಡಿಯು 14–21, 11–21ರಿಂದ ಹಾಂಗ್‌ಕಾಂಗ್‌ನ ಚಾಂಗ್‌ ತಾಕ್ ಚಿಂಗ್‌ ಮತ್ತು ಎನ್‌ಜಿ ವಿಂಗ್‌ ಯುಂಗ್‌ ಹಾಂಗ್ ಎದುರು ಸೋತಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.