
ಜಕಾರ್ತ: ಭಾರತದ ಪಿ.ವಿ.ಸಿಂಧು ಹಾಗೂ ಕಿದಂಬಿ ಶ್ರೀಕಾಂತ್ ಅವರು ಇಂಡೊನೇಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬುಧವಾರ ಎರಡನೇ ಸುತ್ತು ಪ್ರವೇಶಿಸಿದರು.
ಒಲಿಂಪಿಯನ್ ಸಿಂಧು ಅವರು ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ 22–20, 21–18ರಿಂದ ನೇರ ಗೇಮ್‌ಗಳಲ್ಲಿ ಜಪಾನ್‌ನ ಮನಾಮಿ ಸುಯಿಝು ಅವರನ್ನು ಮಣಿಸಿದರು. ಐದನೇ ಶ್ರೇಯಾಂಕ ಪಡೆದಿರುವ ಸಿಂಧು, 53 ನಿಮಿಷ ನಡೆದ ಹಣಾಹಣಿಯಲ್ಲಿ ಸುಯಿಝು ಅವರ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಿದರು.
ವಿಶ್ವದ ಮಾಜಿ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಶ್ರೀಕಾಂತ್ ಅವರು ಪುರುಷರ ಸಿಂಗಲ್ಸ್ ಪಂದ್ಯದಲ್ಲಿ 21–15, 21–23, 24–22ರಿಂದ ಜಪಾನ್‌ನ ಕೋಕಿ ವತಾನಬೆ ಅವರನ್ನು ಮಣಿಸಿದರು. ಮೊದಲ ಗೇಮ್‌ನಲ್ಲಿ ಜಪಾನ್‌ನ ಆಟಗಾರನ ವಿರುದ್ಧ ಪ್ರಾಬಲ್ಯ ಸಾಧಿಸಿದ ಶ್ರೀಕಾಂತ್, ಎರಡನೇ ಗೇಮ್ ಅನ್ನು ಕಳೆದುಕೊಂಡರು. ನಿರ್ಣಾಯಕವಾಗಿದ್ದ ಮೂರನೇ ಗೇಮ್ ಗೆಲ್ಲಲು ಭಾರತದ ಆಟಗಾರ ಬೆವರು ಹರಿಸಬೇಕಾಯಿತು. ಅಂತಿಮವಾಗಿ 1 ಗಂಟೆ 12 ನಿಮಿಷಗಳಲ್ಲಿ ಪಂದ್ಯವನ್ನು ತಮ್ಮದಾಗಿಸಿಕೊಂಡರು.
ಆದರೆ, ಭಾರತದ ಕಿರಣ್ ಜಾರ್ಜ್ ಅವರು ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿಯೇ ಟೂರ್ನಿಯಿಂದ ನಿರ್ಗಮಿಸಬೇಕಾಯಿತು. ಅವರು 17–21, 14–21ರಿಂದ ಇಂಡೊನೇಷ್ಯಾದ ಮೊಹ್ ಝಾಕಿ ಉಬೈದಿಲ್ಲಾ ವಿರುದ್ಧ ಸೋಲನುಭವಿಸಿದರು.
ಮಹಿಳೆಯರ ಸಿಂಗಲ್ಸ್‌ನಲ್ಲಿ ಕಣಕ್ಕಿಳಿದಿದ್ದ ಆಕರ್ಷಿ ಕಶ್ಯಪ್ ಅವರೂ ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದರು. ಭಾರತದ ಆಟಗಾರ್ತಿ 21–8, 20–22, 17–21ರಿಂದ ಡೆನ್ಮಾರ್ಕ್‌ನ ಜೂಲಿ ಡವಾಲ್ ಜೇಕಬ್‌ಸೆನ್ ವಿರುದ್ಧ ಪರಾಭವಗೊಂಡರು.
ಮಿಶ್ರ ಡಬಲ್ಸ್‌ನಲ್ಲಿ ಸ್ಪರ್ಧಿಸಿದ್ದ ರೋಹನ್ ಕಪೂರ್–ರುತ್ವಿಕಾ ಜಿ. ಹಾಗೂ ಧ್ರುವ್ ಕಪಿಲಾ– ತನಿಷ್ ಕ್ರಾಸ್ಟೊ ಅವರ ಅಭಿಯಾನವೂ ಮೊದಲ ಸುತ್ತಿನಲ್ಲಿಯೇ ಅಂತ್ಯಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.