ADVERTISEMENT

ವಿಶ್ವ ಟೂರ್‌ ಫೈನಲ್ಸ್ ಬ್ಯಾಡ್ಮಿಂಟನ್‌: ಅಶ್ವಿನಿ–ಸಿಕ್ಕಿ ಜೋಡಿಗೆ ನಿರಾಸೆ

ಪಿಟಿಐ
Published 1 ಡಿಸೆಂಬರ್ 2021, 12:20 IST
Last Updated 1 ಡಿಸೆಂಬರ್ 2021, 12:20 IST
ಕಿದಂಬಿ ಶ್ರೀಕಾಂತ್‌ ಆಟದ ಶೈಲಿ– ಪಿಟಿಐ ಚಿತ್ರ
ಕಿದಂಬಿ ಶ್ರೀಕಾಂತ್‌ ಆಟದ ಶೈಲಿ– ಪಿಟಿಐ ಚಿತ್ರ   

ಬಾಲಿ, ಇಂಡೊನೇಷ್ಯಾ (ಪಿಟಿಐ): ಭಾರತದ ಅಗ್ರ ಬ್ಯಾಡ್ಮಿಂಟನ್ ಪಟುಗಳಾದ ಪಿ.ವಿ.ಸಿಂಧು ಮತ್ತು ಕಿದಂಬಿ ಶ್ರೀಕಾಂತ್ ಅವರು ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಫೈನಲ್ಸ್ ಟೂರ್ನಿಯಲ್ಲಿಬುಧವಾರ ಗೆಲುವಿನ ಆರಂಭ ಮಾಡಿದ್ದಾರೆ.

ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು, ‘ಎ’ ಗುಂಪಿನ ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ 21-14, 21-16ರಿಂದ ಡೆನ್ಮಾರ್ಕ್‌ನ ಲಿನೆ ಕ್ರಿಸ್ಟೊಪರ್ಸನ್‌ ಅವರನ್ನು ಪರಾಭವಗೊಳಿಸಿದರು.

ಮೊದಲ ಗೇಮ್‌ನ ಆರಂಭದಲ್ಲಿ 5–2ರಿಂದ ಸಿಂಧು ಮುಂದಿದ್ದರು. ಆದರೆ ಚೇತರಿಸಿಕೊಂಡ ಡೆನ್ಮಾರ್ಕ್ ಆಟಗಾರ್ತಿ 7–6ರ ಮೇಲುಗೈ ಸಾಧಿಸಿದರು. ಬಳಿಕ ಆಟದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ವಿಶ್ವ ಚಾಂಪಿಯನ್ ಸಿಂಧು ಸತತ 10 ಪಾಯಿಂಟ್ಸ್ ಗಳಿಸುವುದರೊಂದಿಗೆ ಗೇಮ್ ತಮ್ಮದಾಗಿಸಿಕೊಂಡರು.

ADVERTISEMENT

ಎರಡನೇ ಗೇಮ್‌ನ ಆರಂಭದಲ್ಲಿ ಲಿನೆ ಅವರಿಗೆ 4–2ರ ಮುನ್ನಡೆ ಸಿಕ್ಕಿತ್ತು. ವಿರಾಮದ ವೇಳೆಗೆ ಸಿಂಧು ಒಂದು ಪಾಯಿಂಟ್‌ನಿಂದ (11–10) ಮುಂದಿದ್ದರು. ಬಳಿಕ ಅದೇ ಲಯದೊಂದಿಗೆ 17–13ಕ್ಕೆ ಮುನ್ನಡೆ ಹೆಚ್ಚಿಸಿಕೊಂಡರು; ಗೇಮ್‌ ಮತ್ತು ಪಂದ್ಯ ಕೈವಶ ಮಾಡಿಕೊಂಡರು.

ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಿಂಧುಮುಂದಿನ ಪಂದ್ಯದಲ್ಲಿ ಜರ್ಮನಿಯ ಯುವೊನ್‌ ಲಿ ಅವರಿಗೆ ಮುಖಾಮುಖಿಯಾಗುವರು.

‘ಬಿ’ ಗುಂಪಿನಪುರುಷರ ಸಿಂಗಲ್ಸ್ ಸೆಣಸಾಟದಲ್ಲಿ ಮಾಜಿವಿಶ್ವ ಅಗ್ರಕ್ರಮಾಂಕದ ಆಟಗಾರ ಶ್ರೀಕಾಂತ್‌ 21-14, 21-16ರಿಂದ ಫ್ರಾನ್ಸ್‌ನ ತೋಮಾ ಜೂನಿಯರ್ ಪೊಪೊವ್ ಅವರನ್ನು ಮಣಿಸಿದರು. ಕೇವಲ 42 ನಿಮಿಷಗಳಲ್ಲಿ ಈ ಪಂದ್ಯ ಮುಗಿಯಿತು.

ಟೂರ್ನಿಯ 2014ರ ಆವೃತ್ತಿಯಲ್ಲಿ ಕ್ವಾರ್ಟರ್‌ಫೈನಲ್‌ ತಲುಪಿದ್ದ ಶ್ರೀಕಾಂತ್, ಎರಡನೇ ಸುತ್ತಿನಲ್ಲಿ ಥಾಯ್ಲೆಂಡ್‌ನ ಕುನ್ಲಾವುತ್‌ ವಿತಿದ್ಸನ್ ಅವರನ್ನು ಎದುರಿಸುವರು.

ಮಹಿಳಾ ಡಬಲ್ಸ್‌ನಲ್ಲಿ ಕಣಕ್ಕಿಳಿದಿರುವ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಎನ್‌. ಸಿಕ್ಕಿರೆಡ್ಡಿ 14-2,1 18-21ರಿಂದ ಜಪಾನ್‌ನ ನಮಿ ಮತ್ಸುಯಾಮ ಮತ್ತು ಚಿಹಾರು ಶಿದಾ ಎದುರು ಎಡವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.