ಸೇಂಟ್ ಲೂಯಿ (ಅಮೆರಿಕ): ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಜ್ಞಾನಂದ ಅವರನ್ನು ಅಮೆರಿಕದ ಸಾಮ್ಯುಯೆಲ್ ಸೆವಿಯನ್ ಅವರು ಸುಲಭವಾಗಿ ಡ್ರಾಕ್ಕೆ ಒಳಪಡಿಸಿದರು. ಗುರುವಾರ ನಡೆದ ಸಿಂಕ್ವೆಫೀಲ್ಡ್ ಕಪ್ ನಾಲ್ಕನೇ ಸುತ್ತಿನಲ್ಲಿ ಡಿ.ಗುಕೇಶ್ ಅವರೂ ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಜೊತೆ ಡ್ರಾ ಮಾಡಿಕೊಂಡರು.
ದಿನದ ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳು ಡ್ರಾ ಆದವು. ನಿರ್ಣಾಯಕ ಫಲಿತಾಂಶ ಕಂಡ ದಿನದ ಏಕೈಕ ಪಂದ್ಯದಲ್ಲಿ ಅಮೆರಿಕದ ಫ್ಯಾಬಿಯಾನೊ ಕರುವಾನ ಅವರು ಲಯಕ್ಕೆ ಪರದಾಡುತ್ತಿರುವ ಉಜ್ಬೇಕ್ ಗ್ರ್ಯಾಂಡ್‌ಮಾಸ್ಟರ್ ನದಿರ್ಬೆಕ್ ಅಬ್ದುಸತ್ತಾರೊವ್ ಅವರನ್ನು 30 ನಡೆಗಳಲ್ಲಿ ಸೋಲಿಸಿದರು.
ಇತರ ಪಂದ್ಯಗಳಲ್ಲಿ ಅಮೆರಿಕದ ಲೆವೋನ್ ಅರೋನಿಯನ್, ಪೋಲೆಂಡ್‌ನ ಡೂಡಾ ಯಾನ್ ಕ್ರಿಸ್ಟೋಫ್ ಅವರ ಜೊತೆ ಪಾಯಿಂಟ್ ಹಂಚಿಕೊಂಡರೆ, ಫ್ರಾನ್ಸ್‌ನ ಅಲಿರೇಝ ಫಿರೋಜ ಅವರು ಅಮೆರಿಕದ ವೆಸ್ಲಿ ಸೊ ಜೊತೆ ಡ್ರಾ ಮಾಡಿಕೊಂಡರು.
ಇನ್ನು ಐದು ಸುತ್ತಿನ ಪಂದ್ಯಗಳು ಬಾಕಿಯಿದ್ದು, ಕರುವಾನ ಅವರು 4 ಪಂದ್ಯಗಳಿಂದ 3 ಪಾಯಿಂಟ್ ಗಳಿಸಿ ಅಗ್ರಸ್ಥಾನಕ್ಕೇರಿದ್ದಾರೆ. ಪ್ರಜ್ಞಾನಂದ ಮತ್ತು ಅರೋನಿಯನ್ ತಲಾ 2.5 ಪಾಯಿಂಟ್ಸ್ ಸಂಗ್ರಹಿಸಿ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.
ವೆಸ್ಲಿ ಸೊ, ಫಿರೋಜ, ವೇಷಿಯರ್ ಲಗ್ರಾವ್, ಸೇವಿಯನ್ ಮತ್ತು ಗುಕೇಶ್ ತಲಾ 2 ಪಾಯಿಂಟ್ಸ್ ಗಳಿಸಿದ್ದಾರೆ. ಡಾಡಾ ಒಂಬತ್ತನೇ ಮತ್ತು ಅಬ್ದುಸತ್ತಾರೋವ್ ಕೊನೆಯ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.