ನವದೆಹಲಿ: ಜರ್ಮನಿಯಲ್ಲಿ ನಡೆಯುತ್ತಿರುವ ವಿಶ್ವ ಯೂನಿವರ್ಸಿಟಿ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಭಾರತದ ಮಿಶ್ರ ಬ್ಯಾಡ್ಮಿಂಟನ್ ತಂಡದಲ್ಲಿದ್ದ 12 ಆಟಗಾರರಲ್ಲಿ ಆರು ಮಂದಿಯ ಮೇಲೆ ಆಡಳಿತಾತ್ಮಕ ಲೋಪಗಳಿಂದ ನಿರ್ಬಂಧ ಹೇರಲಾಗಿದೆ.
ಈ ಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲು ಹನ್ನೆರಡು ಬ್ಯಾಡ್ಮಿಂಟನ್ ಆಟಗಾರರನ್ನು ಆಯ್ಕೆ ಮಾಡಿ ಕಳುಹಿಸಲಾಗಿತ್ತು. ಆದರೆ, ಜುಲೈ 16ರಂದು ನಡೆದ ಮ್ಯಾನೇಜರ್‌ಗಳ ಸಭೆಯಲ್ಲಿ ಅಧಿಕಾರಿಗಳು ಈ ಎಲ್ಲಾ 12 ಆಟಗಾರರ ಮಾಹಿತಿ ಸರಿಯಾಗಿ ಸಲ್ಲಿಸದ ಕಾರಣ, ಕೇವಲ ಆರು ಮಂದಿಗೆ ಮಾತ್ರ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.
‘ಇದು ಕೇವಲ ಲೋಪವಲ್ಲ. ಇದರಿಂದ ಆಟಗಾರರ ವೃತ್ತಿಜೀವನವನ್ನೇ ಹಾಳು ಮಾಡಿದಂತಾಗಿದೆ. ಇದಕ್ಕೆ ಉತ್ತರದಾಯಿತ್ವ ಇರಬೇಕು ಮತ್ತು ನಮ್ಮ ಮಾತನ್ನೂ ಆಲಿಸುವ ಅವಕಾಶ ನೀಡಬೇಕು. ನಾವು ಸ್ಪರ್ಧೆಯಲ್ಲಿ ಭಾಗವಹಿಸುವ ಹಕ್ಕನ್ನು ಕಳೆದುಕೊಂಡಿದ್ದೇವೆ’ ಎಂದು ನಿರ್ಬಂಧಕ್ಕೆ ಒಳಗಾದ ಆಟಗಾರ್ತಿಯರಲ್ಲಿ ಒಬ್ಬರಾದ ಅಲಿಶಾ ಖಾನ್ ಅವರು ಇನ್‌ಸ್ಟಾಗ್ರಾಂನಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ದೇಶದಲ್ಲಿ ವಿಶ್ವವಿದ್ಯಾಲಯ ಮಟ್ಟದ ಕ್ರೀಡೆಗಳಿಗೆ ನೋಡಲ್ ಸಂಸ್ಥೆಯಾಗಿರುವ ಭಾರತದ ವಿಶ್ವವಿದ್ಯಾಲಯಗಳ ಸಂಘ (ಎಐಯು) ಆಡಳಿತಾತ್ಮಕ ಲೋಪ ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
‘ಈ ಬಗ್ಗೆ ನಮಗೆ ಮಾಹಿತಿ ಬಂದಿದ್ದು, ತನಿಖೆ ಮಾಡಲಾಗುತ್ತಿದೆ’ ಎಂದು ಎಐಯು ಕಾರ್ಯದರ್ಶಿ ಡಾ.ಪಂಕಜ್ ಮಿತ್ತಲ್ ಪಿಟಿಐಗೆ ತಿಳಿಸಿದರು. ಆದರೆ ಹೆಚ್ಚಿನ ಮಾಹಿತಿ ನೀಡಲು ನೀಡಲು ನಿರಾಕರಿಸಿದರು.
ಈ ಕೂಟಕ್ಕೆ ಭುವನೇಶ್ವರದ ಕಳಿಂಗ ಕೈಗಾರಿಕಾ ತಾಂತ್ರಿಕ ಸಂಸ್ಥೆಯಲ್ಲಿ ನಡೆದ ಆಯ್ಕೆ ಟ್ರಯಲ್ಸ್ ವೇಳೆಯೇ ವ್ಯವಸ್ಥಿತವಾಗಿ ಅಕ್ರಮ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಮ್ಯಾನೇಜರ್‌ಗಳ ಸಭೆಯಲ್ಲಿ 12 ಮಂದಿಯ ಹೆಸರುಗಳನ್ನು ಓದಲಾಗಿದೆ. ಆದರೆ ಈ ವೇಳೆ ಎಚ್ಚರಿಕೆ ವಹಿಸಲಾಗಿರಲಿಲ್ಲ. ಇದರಲ್ಲಿ ಗಾಯಾಳುಗಳು, ಅಲಭ್ಯರಾದವರ ಹೆಸರುಗಳು ಸೇರಿದ್ದವು ಎಂದು ಹೇಳಿವೆ.
ಸನೀತ್ ದಯಾನಂದ್, ಸತೀಶ್ ಕುಮಾರ್ ಕರುಣಾಕರನ್, ದೇವಿಕಾ ಸಿಹಾಗ್, ತಸ್ನಿಮ್ ಮಿರ್, ವರ್ಷಿಣಿ ವಿಶ್ವನಾಥ್ ಮತ್ತು ವೈಷ್ಣವಿ ಖಡ್ಕೇಕರ್ ಅವರು ಮಿಶ್ರ ತಂಡದಲ್ಲಿ ಸ್ಪರ್ಧಿಸಿದ ಆರು ಆಟಗಾರರು. ರೋಹನ್ ಕುಮಾರ್, ದರ್ಶನ್ ಪೂಜಾರಿ, ಅದಿತಿ ಭಟ್, ಅಭಿನಾಶ್ ಮೊಹಾಂತಿ, ವಿರಾಜ್ ಕೆ. ಮತ್ತು ಅಲಿಶಾ ಖಾನ್ ಅವರು 12 ಮಂದಿಯ ತಂಡದಲ್ಲಿದ್ದರು. ಆದರೆ, ಅವರಿಗೆ ಆಡಲು ಸಾಧ್ಯವಾಗಲಿಲ್ಲ.
ಭಾರತ ಮಿಶ್ರ ತಂಡವು ಗುಂಪು ಹಂತದಲ್ಲಿ ಮಕಾವು ವಿರುದ್ಧ ಗೆದ್ದರೆ, ಹಾಂಗ್‌ಕಾಂಗ್ ವಿರುದ್ಧ ಸೋತಿತ್ತು. ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕ ವಿರುದ್ಧ; ಕ್ವಾರ್ಟರ್ ಫೈನಲ್‌ನಲ್ಲಿ ಮಲೇಷ್ಯಾ ವಿರುದ್ಧ ಗೆಲುವು ಸಾಧಿಸಿತ್ತು. ಆದರೆ, ಸೆಮಿಫೈನಲ್‌ನಲ್ಲಿ ಚೀನಾ ತೈಪೆ ವಿರುದ್ಧ ಸೋತು ಕಂಚಿನ ಪದಕ ತನ್ನದಾಗಿಸಿಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.