ADVERTISEMENT

ಹುಬ್ಬಳ್ಳಿ: ರಾಷ್ಟ್ರೀಯ ಟೂರ್ನಿಗೆ ಚಾಲಕನ ಪುತ್ರ

ಬದುಕು ನಡೆಸಲು ಕಷ್ಟವಾದರೂ ಸ್ಕೇಟಿಂಗ್‌ ಕಲಿಕೆಗೆ ಪ್ರೋತ್ಸಾಹ

ಪ್ರಮೋದ
Published 23 ಮಾರ್ಚ್ 2021, 20:30 IST
Last Updated 23 ಮಾರ್ಚ್ 2021, 20:30 IST
ಹನುಮಂತಪ್ಪ ಕದಂ
ಹನುಮಂತಪ್ಪ ಕದಂ   

ಹುಬ್ಬಳ್ಳಿ: ಟಾಟಾ ಏಸ್‌ ವಾಹನ ಚಾಲನೆ ಮಾಡಿ ದಿನಕ್ಕೆ ₹300 ಸಂಪಾದಿಸಿ ಬದುಕಿನ ಬಂಡಿ ಸಾಗಿಸುತ್ತಿರುವ ಇಲ್ಲಿನ ಅಮರಗೋಳದ ಮಾರುತಿ ಕದಂ ಅವರ ಪುತ್ರ ಹನುಮಂತಪ್ಪ ಸ್ಕೇಟಿಂಗ್‌ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದ ಟೂರ್ನಿಗೆ ಆಯ್ಕೆಯಾಗಿದ್ದಾನೆ.

ಇತ್ತೀಚೆಗೆ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ 36ನೇ ಸ್ಕೇಟಿಂಗ್‌ ಚಾಂಪಿಯನ್‌ಷಿಪ್‌ನ 9ರಿಂದ 11 ವರ್ಷದ ಒಳಗಿನ ವಿಭಾಗದ ಕ್ವಾಡ್ ಸ್ಪರ್ಧೆಯಲ್ಲಿ ಹನುಮಂತಪ್ಪ ಒಂದು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡಿದ್ದಾನೆ. ಮೊದಲ ಎರಡು ರಾಜ್ಯಮಟ್ಟದ ಟೂರ್ನಿಗಳಲ್ಲಿ ಪದಕ ಬಂದಿರಲಿಲ್ಲ. ಮೂರನೇ ಬಾರಿ ಈ ಸಾಧನೆ ಮಾಡಿದ್ದಾನೆ. ಮೊಹಾಲಿಯಲ್ಲಿ ಏಪ್ರಿಲ್‌ 1ರಿಂದ 3ರ ತನಕ ರಾಷ್ಟ್ರೀಯ ಟೂರ್ನಿ ಆಯೋಜನೆಯಾಗಿದ್ದು, ಮಗನ ಸಾಧನೆ ಅಪ್ಪ ಮಾರುತಿ ಹಾಗೂ ಅಮ್ಮ ಶಕುಂತಲಾ ಅವರ ಸಂಭ್ರಮ ಹೆಚ್ಚಿಸಿದೆ.

ಹನುಮಂತಪ್ಪನಿಗೆ ಮೊದಲು ಕರಾಟೆ ಬಗ್ಗೆ ಆಸಕ್ತಿಯಿತ್ತು. ಕ್ರಮೇಣವಾಗಿ ಮನೆಯಲ್ಲಿಯೇ ಸ್ಕೇಟಿಂಗ್‌ ಕಲಿತು ಸದ್ಯಕ್ಕೆ ಹುಬ್ಬಳ್ಳಿ ರೋಲರ್‌ ಸ್ಕೇಟಿಂಗ್‌ ಅಕಾಡೆಮಿ (ಎಚ್‌ಆರ್‌ಎಸ್‌ಎ)ಯಲ್ಲಿ ತರಬೇತಿ ಪಡೆಯುತ್ತಿದ್ದಾನೆ. ಮೂರು ವರ್ಷಗಳ ಹಿಂದೆ ಸ್ಕೇಟಿಂಗ್ ತರಬೇತಿ ಆರಂಭಿಸಿದ ಹನುಮಂತಪ್ಪ ಕಡಿಮೆ ಅವಧಿಯಲ್ಲಿ ವೇಗವಾಗಿ ಆಟದ ಕೌಶಲಗಳನ್ನು ಕಲಿತುಕೊಂಡಿದ್ದಾನೆ.

ADVERTISEMENT

ದಿನಗೂಲಿಯಲ್ಲಿ ಮನೆ ನಡೆಸಲು ಪರದಾಡುತ್ತಿರುವ ಮಾರುತಿ ಕದಂ; ಎಷ್ಟೇ ಕಷ್ಟವಾದರೂ ಮಗನ ಕ್ರೀಡಾ ಆಸಕ್ತಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

‘ಮಗನನ್ನು ಈ ವರ್ಷ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಓದಿಸಬೇಕು ಎನ್ನುವ ಆಸೆಯಿತ್ತು. ಹಣಕಾಸಿನ ಅಡಚಣೆಯಿಂದಾಗಿ ಸಾಧ್ಯವಾಗಲಿಲ್ಲ. ಆದರೆ, ಆತನ ಸ್ಕೇಟಿಂಗ್‌ ಅಭ್ಯಾಸಕ್ಕೆ ಯಾವುದೇ ತೊಂದರೆಯಾಗಂತೆ ನೋಡಿಕೊಂಡಿದ್ದೇನೆ. ಸ್ಕೇಟಿಂಗ್ ತರಬೇತಿಗೆ ಮಾಸಿಕ ಶುಲ್ಕ, ಸಾಮಗ್ರಿಗಳನ್ನು ಕೊಡಿಸಲು ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇನೆ. ಸ್ನೇಹಿತರು, ಹಿತೈಷಿಗಳು, ಅಕಾಡೆಮಿಯವರು ಇದಕ್ಕೆ ನೆರವಾಗಿದ್ದಾರೆ’ ಎಂದು ಮಾರುತಿ ತಿಳಿಸಿದರು.

‘ನನಗೆ ಎಷ್ಟೇ ಕಷ್ಟವಾದರೂ ಮಗನಿಗೆ ಸ್ಕೇಟಿಂಗ್‌ ತರಬೇತಿ ಕೊಡಿಸುವುದನ್ನು ನಿಲ್ಲಿಸುವುದಿಲ್ಲ. ಪರಿಚಯದ ಆಟೊ ಚಾಲಕ ಶಿವಾನಂದ ಮಗನನ್ನು ನಿತ್ಯ ಅಭ್ಯಾಸಕ್ಕೆ ಕರೆದುಕೊಂಡು ಹೋಗುತ್ತಾರೆ. ಮಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕು ಎನ್ನುವ ಮಹದಾಸೆಯಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.