ADVERTISEMENT

ಕೊರೊನಾ ವಿರುದ್ಧದ ಹೋರಾಟದಲ್ಲಿ ಗೆಲ್ಲಲು ಕ್ರೀಡೆ ಸಹಕಾರಿ: ಪಿ.ವಿ.ಸಿಂಧು

ಪಿಟಿಐ
Published 22 ಜೂನ್ 2020, 12:57 IST
Last Updated 22 ಜೂನ್ 2020, 12:57 IST
ಪಿ.ವಿ.ಸಿಂಧು
ಪಿ.ವಿ.ಸಿಂಧು   

ನವದೆಹಲಿ: ‘ಕೊರೊನಾ ವೈರಸ್‌ಗೆ ಇನ್ನೂ ಲಸಿಕೆ ಕಂಡುಹಿಡಿಯಲು ಆಗಿಲ್ಲ. ಈ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಗೆಲ್ಲಲು ಕ್ರೀಡೆಯು ಸಹಕಾರಿಯಾಗಲಿದೆ’ ಎಂದು ಭಾರತದ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು ಅವರು ಸೋಮವಾರ ಅಭಿಪ್ರಾಯಪಟ್ಟಿದ್ದಾರೆ.

‘ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಕ್ರೀಡೆಹಾಗೂ ಇತರೆ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ತುಂಬಾ ಅವಶ್ಯ. ನಿತ್ಯವೂ ಮನೆಯಲ್ಲಿಯೇ ಸರಳ ವ್ಯಾಯಾಮಗಳನ್ನು ಮಾಡುವ ಮೂಲಕ ಸ್ವಾಸ್ಥ್ಯ ಕಾಪಾಡಿಕೊಳ್ಳಬೇಕು’ ಎಂದು ಅವರು ತಿಳಿಸಿದ್ದಾರೆ.

‘ವಯಸ್ಕರು ವಾರದಲ್ಲಿ ಕನಿಷ್ಠ 300 ನಿಮಿಷ ಏರೊಬಿಕ್‌ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಉತ್ತಮ ಎಂದು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ. ಕ್ಯಾನ್ಸರ್‌ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಮುಕ್ತರಾಗಿರಲು ವ್ಯಾಯಾಮವೇ ರಾಮಬಾಣ ಎಂದೂ ಹೇಳಿದೆ. ಖಿನ್ನತೆಯಿಂದ ಪಾರಾಗಲೂ ಇದು ಸಹಕಾರಿಯಾಗಲಿದೆ’ ಎಂದು ಸಿಂಧು ನುಡಿದಿದ್ದಾರೆ.

ADVERTISEMENT

‘ಪ್ರತಿಯೊಬ್ಬರು ನಿತ್ಯ 45 ನಿಮಿಷ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕು. ಈಗಿನ ಪರಿಸ್ಥಿತಿಯಲ್ಲಿ ಇದು ಅನಿವಾರ್ಯ ಕೂಡ. ಕ್ರೀಡಾಪಟುವಾಗಿ ನಾನು ಈ ಮಾತನ್ನು ಹೇಳುತ್ತಿದ್ದೇನೆ’ ಎಂದಿದ್ದಾರೆ.

ಸಿಂಧು ಅವರು ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌ನ ‘ಟಿಕೆಟ್‌’ ಖಚಿತಪಡಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರವು ಲಾಕ್‌ಡೌನ್‌ನಿಂದ ವಿನಾಯಿತಿ ನೀಡಿದ ಬಳಿಕ ದೇಶದಾದ್ಯಂತ ಕ್ರೀಡಾ ಚುಟುವಟಿಕೆಗಳು ಗರಿಗೆದರಿವೆ. ಹಲವು ಕ್ರೀಡಾಪಟುಗಳು ಹೊರಾಂಗಣ ಅಭ್ಯಾಸವನ್ನೂ ಆರಂಭಿಸಿದ್ದಾರೆ. ತೆಲಂಗಾಣ ಸರ್ಕಾರವು ಲಾಕ್‌ಡೌನ್‌ ಅನ್ನು ಇನ್ನಷ್ಟು ಬಿಗಿಗೊಳಿಸಿದೆ. ಹೀಗಾಗಿ ಸಿಂಧು ಅವರು ತಾಲೀಮಿನಿಂದ ದೂರ ಉಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.