ADVERTISEMENT

ಕ್ರೀಡಾಸಾಧಕ ಬಸನಗೌಡ; ಕಿರಿಯರಿಗೆ ಮಾದರಿ

ಪ್ರಕಾಶ ಎನ್.ಮಸಬಿನಾಳ
Published 16 ಅಕ್ಟೋಬರ್ 2018, 19:47 IST
Last Updated 16 ಅಕ್ಟೋಬರ್ 2018, 19:47 IST
ಬಸನಗೌಡ ಪಾಟೀಲ
ಬಸನಗೌಡ ಪಾಟೀಲ   

ಬಸವನಬಾಗೇವಾಡಿ:ಎಂಬತ್ತು, ತೊಂಬತ್ತರ ದಶಕದಲ್ಲಿ, ಪಟ್ಟಣದ ಕಾಲೇಜು ಮೈದಾನದಲ್ಲಿ ಬಸನಗೌಡ ಪಾಟೀಲ (ಪಡಸಲಗಿ) ನೇತೃತ್ವದ ತಂಡ ವಾಲಿಬಾಲ್‌ ಅಂಕಣಕ್ಕಿಳಿದರೆ; ಕಿರಿಯರು–ಯುವಕರು–ಹಿರಿಯರೆನ್ನದೇ ಎಲ್ಲರೂ ತಂಡೋಪ ತಂಡವಾಗಿ ಮೈದಾನಕ್ಕೆ ಬರುತ್ತಿದ್ದರು. ಕಿಕ್ಕಿರಿದು ಜಮಾಯಿಸುತ್ತಿದ್ದರು. ಪ್ರತಿ ಕ್ಷಣದ ಆಟವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರು.

ಬಸನಗೌಡರು ಬಾಲ್ಯದಲ್ಲಿ ಅಬ್ದುಲ್‌ ರಹೀಂ ಶಾಬಾದಿ ಸೇರಿದಂತೆ ಇತರರ ಪ್ರೇರಣೆಯಿಂದ ಕ್ರೀಡಾಸಕ್ತಿ ಬೆಳೆಸಿಕೊಂಡವರು. ವಿವಿಧ ಆಟಗಳ ಜತೆಗೆ ವಾಲಿಬಾಲ್ ಆಟದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ಇಲ್ಲಿನ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪದವಿ ಓದುವಾಗ ಎರಡು ಬಾರಿ ವಿಶ್ವವಿದ್ಯಾಲಯ ತಂಡವನ್ನು ಪ್ರತಿನಿಧಿಸಿದ್ದರು. ಎಂಟು ಬಾರಿ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಇವರ ಆಟದ ವೈಖರಿ ಮೆಚ್ಚಿ ಪೊಲೀಸ್ ಹಾಗೂ ವಾಯು ಸೇನೆ ತಂಡದಲ್ಲಿ ಅತಿಥಿ ಆಟಗಾರರಾಗಿ ಆಡಲು ಆಹ್ವಾನ ಬಂದಿದ್ದರೂ; ನಯವಾಗಿಯೇ ತಿರಸ್ಕರಿಸಿದ್ದರು.

ವಾಲಿಬಾಲ್ ಆಡುವಾಗ ಶೂ ಧರಿಸುವುದು ಸಾಮಾನ್ಯ. ಆದರೆ ಬಸನಗೌಡ ಬರಿಗಾಲಿನಿಂದಲೇ ಆಟವಾಡುತಿದ್ದರು. ಇವರ ಆಟದ ವೈಖರಿಗೆ ಬೆರಗಾದವರೇ ಹೆಚ್ಚು. ಜಿಲ್ಲೆಯ ವಿವಿಧೆಡೆ ನಡೆಯುತ್ತಿದ್ದ ವಾಲಿಬಾಲ್ ಪಂದ್ಯಾವಳಿಯಲ್ಲಿ ಇವರ ಆಟ ನೋಡಲು ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಟ್ರ್ಯಾಕ್ಟರ್ ಸೇರಿದಂತೆ ವಿವಿಧ ವಾಹನಗಳಲ್ಲಿ ತೆರಳುತ್ತಿದ್ದುದು ವಿಶೇಷ.

ಬಾಲ್ಯದಲ್ಲಿ ಇವರ ಆಟಕ್ಕೆ ಬೆರಗಾಗಿ, ಕ್ರೀಡಾಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡಿರುವ ವಿಜಯಪುರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಹಿರಿಯ ಶ್ರೇಣಿ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಜಶೇಖರ ಬೆನಕನಹಳ್ಳಿ ಬಸನಗೌಡರ ಆಟದ ವೈಖರಿಯನ್ನು ಕೊಂಡಾಡುತ್ತಾರೆ.

ADVERTISEMENT

ವಾಲಿಬಾಲ್ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಬಸನಗೌಡರು, ಪಟ್ಟಣದಲ್ಲಿ ರಾಜ್ಯ ಸೇರಿದಂತೆ ಅಖಿಲ ಭಾರತ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಏರ್ಪಡಿಸುವ ಮೂಲಕ, ಮಕ್ಕಳು ಹಾಗೂ ಯುವಕರಲ್ಲಿ ಕ್ರೀಡಾಸಕ್ತಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಕಬಡ್ಡಿ, ಅಥ್ಲೆಟಿಕ್ ಕ್ರೀಡೆಗಳಾದ ಶಾಟ್‌ಪುಟ್‌, ಜಾವೆಲಿನ್‌ ಥ್ರೋ ಸೇರಿದಂತೆ ವಿವಿಧ ಆಟಗಳಲ್ಲೂ ಇವರು ಪಾರುಪತ್ಯ ಮೆರೆದಿದ್ದಾರೆ. ಬಸನಗೌಡ ಗರಡಿಯಲ್ಲಿ ಪಳಗಿದ ನೂರಾರು ಆಟಗಾರರು ಸಾಧನೆ ಮಾಡಿದ್ದಾರೆ. 54ರ ಪ್ರಾಯದ ಗೌಡರು ಇಂದಿಗೂ ಆಟದ ಮೈದಾನಕ್ಕೆ ತೆರಳಿ, ಕ್ರೀಡಾಪಟುಗಳನ್ನು ಹುರಿದುಂಬಿಸುವ ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.