ಅಹಮದಾಬಾದ್: ಕರ್ನಾಟಕದ ಈಜು ತಾರೆ ಶ್ರೀಹರಿ ನಟರಾಜ್ ಅವರು ಭಾನುವಾರ 11ನೇ ಏಷ್ಯನ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಮಿಂಚು ಹರಿಸಿದರು. ಪುರುಷರ 200 ಮೀಟರ್ ಫ್ರೀಸ್ಟೈಲ್ ಮತ್ತು 50 ಮೀಟರ್ ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಗಳಲ್ಲಿ ಅವರು ಬೆಳ್ಳಿ ಪದಕಗಳಿಗೆ ಕೊರಳೊಡ್ಡಿದರು.
2020ರ ಟೋಕಿಯೊ ಮತ್ತು 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ 24 ವರ್ಷದ ಶ್ರೀಹರಿ ಅವರು 200 ಮೀ. ಫ್ರೀಸ್ಟೈಲ್ ಫೈನಲ್‌ನಲ್ಲಿ 1 ನಿಮಿಷ 48.47 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಚೀನಾದ 17 ವರ್ಷದ ಶು ಹೈಬೊ (1:46.83) ಚಿನ್ನದ ಪದಕ ಗೆದ್ದುಕೊಂಡರು. ಜಪಾನ್‌ನ ಹಿನಾಟಾ ಆಂಡೊ (1:48.73) ಕಂಚಿನ ಪದಕ ಗೆದ್ದರು.
ಈ ಸ್ಪರ್ಧೆಯ ನಂತರ ನಡೆದ 50 ಮೀ. ಬ್ಯಾಕ್‌ಸ್ಟೋಕ್ ಫೈನಲ್‌ನಲ್ಲಿ 25.46 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ, ಎರಡನೇ ಪದಕಕ್ಕೆ ಮುತ್ತಿಕ್ಕಿದರು. ಚೀನಾದ ಗುಕೈಲೈ ವಾಂಗ್ (25.11ಸೆ) ಮತ್ತು ತೈವಾನ್‌ನ ಮು ಲುನ್ ಚುವಾಂಗ್ (25.50ಸೆ) ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಈ ಕೂಟದಲ್ಲಿ ಭಾರತವು ಮೂರರಿಂದ ನಾಲ್ಕು ಪದಕಗಳನ್ನು ಗೆಲ್ಲುವ ವಿಶ್ವಾಸವನ್ನು ಮುಖ್ಯ ಕೋಚ್ ನಿಹಾರ್ ಅಮೀನ್ ಅವರು ಶನಿವಾರ ವ್ಯಕ್ತಪಡಿಸಿದ್ದರು. ಅದರ ಮರುದಿನವೇ ಶ್ರೀಹರಿ ‘ಡಬಲ್’ ಪದಕ ಸಾಧನೆ ಮೆರೆದಿದ್ದಾರೆ.
‘ಭಾರತದ ಪಾಲಿಗೆ ಇದು ಉತ್ತಮ ಫಲಿತಾಂಶ. ಆರಂಭಿಕ ದಿನವೇ ಎರಡು ಪದಕ ಗೆದ್ದಿರುವುದು ಅದ್ಘುತ ಸಾಧನೆ’ ಎಂದು ನಿಹಾರ್ ಪ್ರತಿಕ್ರಿಯಿಸಿದ್ದಾರೆ.
ಶ್ರೀಹರಿ ಅವರು ಈ ವರ್ಷದ ಆರಂಭದಲ್ಲಿ ಜರ್ಮನಿಯಲ್ಲಿ ನಡೆದ ಎಫ್‌ಐಎಸ್‌ಯು ಬೇಸಿಗೆ ವರ್ಲ್ಡ್ ಯುನಿವರ್ಸಿಟಿ ಗೇಮ್ಸ್‌ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಅಲ್ಲದೆ, ಉತ್ತರಾಖಂಡದಲ್ಲಿ ನಡೆದ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ವೈಯಕ್ತಿಕ ಮತ್ತು ರಿಲೆ ಸ್ಪರ್ಧೆಗಳಲ್ಲಿ ಒಂಬತ್ತು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಗೆದ್ದು, ವೈಯಕ್ತಿಕ ಚಾಂಪಿಯನ್ ಆಗಿದ್ದರು.
200 ಮೀ. ಫ್ರೀಸ್ಟೈಲ್‌ನ ಹೀಟ್ 4ರಲ್ಲಿ ಸ್ಪರ್ಧಿಸಿದ್ದ ಕರ್ನಾಟಕದ ಅನೀಶ್ ಕುಮಾರ್ ಗೌಡ (1:52.62) ಫೈನಲ್‌ಗೆ ಅರ್ಹತೆ ಪಡೆಯಲು ವಿಫಲವಾದರು.
ಇಲ್ಲಿ ಹೊಸದಾಗಿ ನಿರ್ಮಿಸಲಾದ ಅತ್ಯಾಧುನಿಕ ವೀರ್ ಸಾವರ್ಕರ್ ಕ್ರೀಡಾ ಸಂಕೀರ್ಣದಲ್ಲಿ ನಡೆಯುತ್ತಿರುವ ಕೂಟದಲ್ಲಿ ಭಾರತದ 20 ಪುರುಷರು ಮತ್ತು 20 ಮಹಿಳೆಯರು ಸೇರಿ ಒಟ್ಟು 40 ಈಜುಗಾರರು ಸ್ಪರ್ಧಿಸುತ್ತಿದ್ದಾರೆ. ಶ್ರೀಹರಿ ಜೊತೆಗೆ ಪುರುಷರ ವಿಭಾಗದಲ್ಲಿ ಸಜನ್ ಪ್ರಕಾಶ್ ಮತ್ತು ಮಹಿಳೆಯರ ವಿಭಾಗದಲ್ಲಿ ಧಿನಿಧಿ ದೇಸಿಂಗು ಮತ್ತು ಭವ್ಯಾ ಸಚ್‌ದೇವ ಅವರ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.