ADVERTISEMENT

ಸ್ವಿಸ್‌ ಓಪನ್: ಶ್ರೀಕಾಂತ್‌, ಅಶ್ವಿನಿ–ಸಾತ್ವಿಕ್ ಜೋಡಿ ಜಯಭೇರಿ

ಪಿಟಿಐ
Published 3 ಮಾರ್ಚ್ 2021, 15:30 IST
Last Updated 3 ಮಾರ್ಚ್ 2021, 15:30 IST
ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ –ಎಎಫ್‌ಪಿ ಚಿತ್ರ
ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ –ಎಎಫ್‌ಪಿ ಚಿತ್ರ   

ಬಾಸೆಲ್‌: ಭಾರತದ ಕಿದಂಬಿ ಶ್ರೀಕಾಂತ್ ಇಲ್ಲಿ ನಡೆಯುತ್ತಿರುವ ‘ಸ್ವಿಸ್ ಓಪನ್ ಸೂಪರ್‌ 300’ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದರು. ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತದ ಸಮೀರ್ ವರ್ಮಾ ಅವರನ್ನು ಶ್ರೀಕಾಂತ್‌ 18-21 21-18, 21-11ರಲ್ಲಿ ಮಣಿಸಿದರು.

ಮೊದಲ ಸುತ್ತಿನಲ್ಲಿ ಸೌರಭ್ ವರ್ಮಾ ಕೂಡ ಜಯ ಗಳಿಸಿದರು. ಸ್ವಿಟ್ಜರ್ಲೆಂಡ್‌ನ ಕ್ರಿಸ್ಟಿಯನ್ ಕಿರ್ಚ್‌ಮಯರ್ ಅವರನ್ನು ಸೌರಭ್‌ 21-19, 21-18ರಲ್ಲಿ ಸೋಲಿಸಿದರು. ‌‌ಆದರೆ ಎಚ್‌.ಎಸ್‌.ಪ್ರಣಯ್ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು. ಅವರನ್ನು ಫ್ರಾನ್ಸ್‌ನ ಮಾರ್ಕ್‌ ಕಲಿಜೊವ್‌ 21–19, 9–21, 21–17ರಲ್ಲಿ ಮಣಿಸಿದರು.

ಅಶ್ವಿನಿ–ಸಾತ್ವಿಕ್‌ಗೆ ಗೆಲುವು

ADVERTISEMENT

ಮಂಗಳವಾರ ರಾತ್ರಿ ನಡೆದ ಮಿಶ್ರ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಭರ್ಜರಿ ಜಯ ಗಳಿಸಿದರು. ಎರಡನೇ ಶ್ರೇಯಾಂಕದ ಇಂಡೊನೇಷ್ಯಾ ಜೋಡಿ ಹಫೀಜ್‌ ಫೈಜಲ್ ಮತ್ತು ಗ್ಲೋರಿಯಾ ಇಮ್ಯಾನ್ಯುವೆಲಿ ಅವರನ್ನು ಅಶ್ವಿನಿ ಮತ್ತು ಸಾತ್ವಿಕ್ 21–18, 21–10ರಲ್ಲಿ ಮಣಿಸಿದರು.

ಒಂದು ತಿಂಗಳಿಂದ ಹೊಸ ಕೋಚ್ ಮಥಾಯಸ್ ಬೋಯೆ ಬಳಿ ತರಬೇತಿ ಪಡೆಯುತ್ತಿರುವ ಭಾರತದ ಜೋಡಿ ಇಂಡೊನೇಷ್ಯಾದ ಮತ್ತೊಂದು ಜೋಡಿ ರಿನೊವ್ ರಿವಾಲ್ಡಿ ಮತ್ತು ಪೀತಾ ಹನಿಂಗ್ತ್ಯಾಸ್ ಮೆಂಟರಿ ಅವರನ್ನು ಮುಂದಿನ ಸುತ್ತಿನಲ್ಲಿ ಎದುರಿಸುವರು.

ಕೋವಿಡ್‌–19 ಕಾಲಿಟ್ಟ ನಂತರ ಮೊದಲ ಬಾರಿ ಸ್ಪರ್ಧಾ ಕಣಕ್ಕೆ ಇಳಿದ ಪ್ರಣವ್ ಜೆರಿ ಚೋಪ್ರಾ ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದರು. ಚೋಪ್ರಾ ಮತ್ತು ಎನ್‌.ಸಿಕ್ಕಿ ರೆಡ್ಡಿ ಮಿಶ್ರ ಡಬಲ್ಸ್‌ನಲ್ಲಿ 18–21, 15–21ರಲ್ಲಿ ಇಂಗ್ಲೆಂಡ್‌ನ ಮಾರ್ಕಸ್ ಎಲಿಸ್ ಮತ್ತು ಲಾರೆನ್ ಸ್ಮಿತ್‌ಗೆ ಮಣಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.