ADVERTISEMENT

ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್: 16 ತಿಂಗಳಲ್ಲಿ ಮೊದಲ ಸಲ ಸೆಮಿ ತಲುಪಿದ ಶ್ರೀಕಾಂತ್

ಪ್ರಿಯಾಂಶು, ಕಿರಣ್‌ ನಿರ್ಗಮನ

ಪಿಟಿಐ
Published 23 ಮಾರ್ಚ್ 2024, 13:55 IST
Last Updated 23 ಮಾರ್ಚ್ 2024, 13:55 IST
ಕಿದಂಬಿ ಶ್ರೀಕಾಂತ್‌
ಕಿದಂಬಿ ಶ್ರೀಕಾಂತ್‌   

ಬಾಸೆಲ್‌: ಕಿದಂಬಿ ಶ್ರೀಕಾಂತ್‌ ಅವರು ಸ್ವಿಸ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್‌  ಸೆಮಿಫೈನಲ್ ತಲುಪುವ ಮೂಲಕ ಕಣದಲ್ಲಿ ಉಳಿದಿರುವ ಭಾರತದ ಏಕೈಕ ಸಿಂಗಲ್ಸ್ ಆಟಗಾರ ಎನಿಸಿದ್ದಾರೆ. ಅವರು ಎಂಟರ ಘಟ್ಟದ ಪಂದ್ಯದಲ್ಲಿ ಚೀನಾ ತೈಪಿಯ ಚಿಯಾ ಹಾವೊ ಲೀ ಅವರನ್ನು ನೇರ ಆಟಗಳಿಂದ ಸೋಲಿಸಿದರು.

ಈ ವರ್ಷ ಎಂಟನೇ ಟೂರ್ನಿ ಆಡುತ್ತಿರುವ ಅವರು ಕೊನೆಗೂ ಉತ್ತಮ ಸಾಧನೆ ತೋರಿದ್ದಾರೆ. ಕಳೆದ 16 ತಿಂಗಳ ಅವಧಿಯಲ್ಲಿ ಮೊದಲ ಬಾರಿ ಅವರು ನಾಲ್ಕರ ಘಟ್ಟ ತಲುಪಿದ್ದಾರೆ. ಶುಕ್ರವಾರ ರಾತ್ರಿ 35 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಅವರು 21–10, 21–14ರಲ್ಲಿ ಜಯಗಳಿಸಿದರು.

2022ರ ನವೆಂಬರ್‌ನಲ್ಲಿ ಹೈಲೊ ಓಪನ್ ಟೂರ್ನಿಯಲ್ಲಿ ಅವರು ಸೆಮಿಫೈನಲ್ ತಲುಪಿದ ನಂತರ ಯಾವುದೇ ಟೂರ್ನಿಯಲ್ಲಿ ನಾಲ್ಕರ ಘಟ್ಟ ತಲುಪಲು ಆಗಿರಲಿಲ್ಲ.

ADVERTISEMENT

2021ರ ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ವಿಜೇತ ಶ್ರೀಕಾಂತ್ ಅವರು ಸೆಮಿಫೈನಲ್‌ನಲ್ಲಿ 22ನೇ ಕ್ರಮಾಂಕದ ಆಟಗಾರ ಲಿನ್‌ ಚುನ್‌–ಯಿ ಅವರನ್ನು ಎದುರಿಸಲಿದ್ದಾರೆ.

ಆದರೆ ಕಿರಣ್ ಜಾರ್ಜ್ ಇನ್ನೊಂದು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಡೆನ್ಮಾರ್ಕ್‌ನ ರೋಸ್ಮಸ್‌ ಗೆಮ್ಕೆ ವಿರುದ್ಧ ವೀರೋಚಿತ ಹೋರಾಟ ತೋರಿದರೂ ಅಂತಿಮವಾಗಿ 23–21, 17–21, 15–21ರಲ್ಲಿ ಸೋಲನ್ನು ಕಾಣಬೇಕಾಯಿತು.

ಭಾರತದ ಇನ್ನೊಬ್ಬ ಉದಯೋನ್ಮುಖ ಆಟಗಾರ ಪ್ರಿಯಾಂಶು ರಾಜಾವತ್ ಕೂಡ ಹೊರಬಿದ್ದರು. ಅವರು ಜಾಕೋಬ್‌ಶಲ್ಲೆ ಕ್ರೀಡಾಂಗಣದಲ್ಲಿ 43 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 15–21, 19–21ರಲ್ಲಿ ಚೌ ಟಿಯೆನ್ ಚೆನ್ ಎದುರು ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.